ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲೆ ವಿಧಿಸಲಾಗಿದ್ದ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ರದ್ದುಪಡಿಸಿದೆ.
ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅಗ್ರಿಗ್ರೇಟರ್ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಈ ಹಿಂದೆ ಈ ಪ್ರಕರಣವನ್ನು ವಿಚಾರಿಸಿದ್ದ ಏಕಸದಸ್ಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದು, ಬೈಕ್ ಟ್ಯಾಕ್ಸಿ ನಿಷೇಧವನ್ನು ಮಾನ್ಯಗೊಳಿಸಿತ್ತು. ಇದರಿಂದ ಅಸಮಾಧಾನಗೊಂಡ ಬೈಕ್ ಟ್ಯಾಕ್ಸಿ ಅಗ್ರಿಗ್ರೇಟರ್‌ಗಳು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಕೆಲವು ದಿನಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಇಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಅಂತಿಮ ತೀರ್ಪು ಪ್ರಕಟಿಸಿ, ಏಕಸದಸ್ಯ ಪೀಠದ ಆದೇಶವನ್ನು ತೆರವುಗೊಳಿಸಿ, ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ.
ಈ ತೀರ್ಪಿನಿಂದಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಮತ್ತೆ ಅವಕಾಶ ಸಿಕ್ಕಂತಾಗಿದ್ದು, ಅಗ್ರಿಗ್ರೇಟರ್ ಸಂಸ್ಥೆಗಳು ಹಾಗೂ ಪ್ರಯಾಣಿಕರಲ್ಲಿ ಹರ್ಷ ವ್ಯಕ್ತವಾಗಿದೆ. ಸರ್ಕಾರ ಮುಂದೇನು ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಇದೀಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
