Home ಬೆಂಗಳೂರು ಜನಾರ್ದನ ರೆಡ್ಡಿಗೆ ಚಮಚಾಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ – ಹರಿಪ್ರಸಾದ್‌

ಜನಾರ್ದನ ರೆಡ್ಡಿಗೆ ಚಮಚಾಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ – ಹರಿಪ್ರಸಾದ್‌

ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್‌‍ನ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ (BK Hariprasad) ಕಿಡಿ ಕಾರಿದ್ದಾರೆ. ‘ಜೈಲಲ್ಲಿ ತಟ್ಟೆ, ಲೋಟ, ಚಮಚಾಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಶಾಸಕ ಜನಾರ್ದನ ರೆಡ್ಡಿ ಅವರಿಗೆ ರಾಜಕೀಯ ಜೀವನದಲ್ಲಿ ಚಮಚಾಗಿರಿ ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.

ತಲೆ ಮೇಲೆ ಕೈ ಇರಿಸಿಕೊಂಡಿದ್ದು ಸಾಲದೆಂಬಂತೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಪಾದ ಪೂಜೆಯ ನೀರು ನೆತ್ತಿಗೇರಿರಬೇಕು. ಅದಕ್ಕೆ ಅಮಿತ್ ಶಾ ತಲೆ ಮೇಲೆ ಕುಟ್ಟಿ ಬಿಜೆಪಿಗೂ ಈ ಜೈಲುವಾಸಿ ರೆಡ್ಡಿಗೂ ಸಂಬಂಧ ಇಲ್ಲ ಅಂತಾ ಬಹಿರಂಗವಾಗಿ ತುಪಕ್ ಅಂತಾ ಉಗ್ದಿದ್ದನ್ನು ಮರೆತಂತಿದೆ. ಒಮ್ಮೆ ಜೀವದ ಗೆಳೆಯ ಅನ್ನೋದು, ಇನ್ನೊಮ್ಮೆ ಶ್ರೀರಾಮುಲು ವಿರುದ್ದವೇ ಮಸಲತ್ತು ಮಾಡುವ ಜನಾರ್ಧನ ರೆಡ್ಡಿಯ ಊಸರವಳ್ಳಿ ಆಟ ರಾಜ್ಯದ ಜನ ಮರೆತಿಲ್ಲ. ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ಹೊರಟ ಜನಾರ್ಧನ ರೆಡ್ಡಿಯ ಮೂರು ಕಾಸಿಗೂ ಕಿಮ್ಮತ್ತಿಲ್ಲದ ತಂತ್ರಗಾರಿಕೆ ಬಗ್ಗೆ ಶ್ರೀರಾಮುಲು ಆಡಿರುವ ಒಂದೊಂದು ಆಣಿಮುತ್ತುಗಳೇ ಸಾಕು ಸಾಧ್ಯವಾದ್ರೆ ಎಣಿಸಿಕೊಳ್ಳಲಿ.

ರೆಡ್ಡಿಗಾರು ನಾನು ವಾರ್ಡ್ ಚುನಾವಣೆ ಗೆದ್ದಿಲ್ಲ ನಿಜಾ ಆದ್ರೆ ಹಿಂಬಾಗಿಲೋ ಮುಂಬಾಗಿಲೋ ನಾನಂತೂ ರಾಜಾರೋಷವಾಗಿ ಬಂದಿದಿನಿ. ಚುನಾವಣೆಯ ಎರಡು ದಿನದ ಹಿಂದಿನ “ಕತ್ತಲೆ ರಾತ್ರಿಯ” ರಹಸ್ಯವಾಗಿಯಂತೂ ಬಂದಿಲ್ಲ ಬರುವುದೂ ಇಲ್ಲ. ಆದ್ರೆ 224 ವಿಧಾನಸಭಾ ಕ್ಷೇತ್ರದಲ್ಲಿ ಜಾತಿ, ಹಣ, ಇಲ್ಲದೆ ಚುನಾವಣೆ ಎದುರಿಸೋದಕ್ಕೆ ರೆಡಿ. ಧೈರ್ಯ ತಾಕತ್ತು ಇದ್ರೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಕಿಂಚಿತ್ತಾದರೂ ಎದೆಗಾರಿಕೆ ಇದ್ರೆ ಮುಂದೆ ಬರಲಿ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಸುಳ್ಳು ಕೇಸ್ ಹಾಕಿರೋದಕ್ಕೆ ಹೈಕೋರ್ಟ್ ಕ್ಯಾಕರಿಸಿ ಮುಖಕ್ಕೆ ಉಗ್ದಿದ್ದು ಸಾಕಾಗಿಲ್ವಾ. ನ್ಯಾಯಾಧೀಶರನ್ನೇ ಹತ್ತು ಕೋಟಿ ಡೀಲ್ ಮಾಡಿ ಬೇಲ್ ತೆಗೆದುಕೊಂಡ ಹಾಗೇ ಅನ್ಕೊಂಡ್ರಾ? ನಮ್ಮ ನಾಯಕರು ಸುಳ್ಳು ಕೇಸ್ ಹಾಕಿಸಿಕೊಂಡು ಓಡಾಡ್ತಿರಬಹುದು ಆದ್ರೆ ಕೊಲೆ ಕೇಸ್ ಗಳಲ್ಲಿ ಸುಪ್ರೀಂಕೋರ್ಟ್ ಯಿಂದ ಗಡಿಪಾರಂತೂ ಆಗಿಲ್ಲ.

ಅವರಿವರ ಕೈ ಕಾಲು ಹಿಡಿದು ಬಿಜೆಪಿ ಸೇರಿ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿ ಜನಾರ್ಧನ ರೆಡ್ಡಿಗೆ ಬಂದಿದ್ರು, ಶೇಷ-ಅವಶೇಷಗಳ ಬಗ್ಗೆ ಮಾತಾಡೋದು ಹಾಸ್ಯಸ್ಪದ. ಇನ್ನೂ ಈಗಾಗಲೇ ಜೈಲು,ಡೀಲು,ಬೇಲುಗಳ ಬಗ್ಗೆ ಮಾತ್ರ ಮಾತಾಡಿದ್ದೆ, ಆದ್ರೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡೋದಕ್ಕೆ ನಾನಂತೂ ರೆಡಿ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

You cannot copy content of this page

Exit mobile version