Home ಇನ್ನಷ್ಟು ಕೋರ್ಟು - ಕಾನೂನು ಧರ್ಮಸ್ಥಳ ಹಾರರ್ ವಿಡಿಯೋ: ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ

ಧರ್ಮಸ್ಥಳ ಹಾರರ್ ವಿಡಿಯೋ: ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ

0

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಧರ್ಮಸ್ಥಳದಲ್ಲಿ ನಡೆದಿದೆಯೆಂದು ಹೇಳಲಾಗುತ್ತಿರುವ ಸಮೂಹ ಸಮಾಧಿ ಪ್ರಕರಣ ಕುರಿತು ವಿಡಿಯೋ ಪ್ರಕಟಿಸಿದ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ಮುಂದಿನ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದೆ.

ನ್ಯಾಯಮೂರ್ತಿ ನ್ಯಾ.ಎನ್ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ಹೊರಡಿಸಿದೆ. “ವೀಡಿಯೋವನ್ನು ಪರಿಶೀಲಿಸಿದ ನಂತರ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಬೇಕು. ಮುಂದಿನ ವಿಚಾರಣೆ ದಿನಾಂಕದವರೆಗೆ ತನಿಖೆ ಸ್ಥಗಿತಗೊಳಿಸಲಾಗುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಈ ತಿಂಗಳ 22ರಂದು ನಡೆಯಲಿದೆ.

ವಿಚಾರಣೆ ವೇಳೆ ಯೂಟ್ಯೂಬರ್ ಪರ ವಕೀಲರಾದ ಅಕ್ಷತಾ ಶೆಟ್ಟಿ ಕೆ ಅವರು, ಸಮೀರ್ ಅವರು ಧರ್ಮಸ್ಥಳ ಹತ್ಯೆಗಳ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಿ, ತಮ್ಮ ಕಂಡುಹಿಡಿದ ಮಾಹಿತಿಯನ್ನು ಸಾರ್ವಜನಿಕರಿಗೆ ಹಂಚಿಕೊಂಡಿದ್ದಾರೆ ಎಂದು ವಾದಿಸಿದರು. ಇದೇ ವಿಷಯವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮಗಳೂ ವರದಿ ಮಾಡಿವೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲರು, ಆರೋಪಿ ಎಐ ತಂತ್ರಜ್ಞಾನ ಬಳಸಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಸಮಾಧಿ ಮಾಡಲಾಗಿದೆ ಎಂದು ತೋರಿಸುವ ರೀತಿಯ ದೃಶ್ಯಗಳನ್ನು ಸೃಷ್ಟಿಸಿದ್ದಾನೆ ಎಂದು ಆರೋಪಿಸಿದರು. ಸಮೀರ್ ವಿರುದ್ಧ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವರ ವಿಡಿಯೋಗಳಿಂದ ಸಮಾಜದಲ್ಲಿ ಅಸಹನೆ ಮತ್ತು ವೈಮನಸ್ಸು ಉಂಟಾಗಿದೆ ಎಂದು ಅವರು ವಾದಿಸಿದರು.

ವಿಚಾರಣೆ ವೇಳೆ ನ್ಯಾಯಾಲಯ, “ಈ ವಿಷಯವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಬೇಕು… ಅನಾವಶ್ಯಕವಾಗಿ ವಿಚಾರಣೆಯನ್ನು ಎಳೆಯಬೇಡಿ” ಎಂದು ಮಾತಿನ ಮೂಲಕ ಸೂಚನೆ ನೀಡಿತು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಭಾರತ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 240 (ಅಪರಾಧದ ಬಗ್ಗೆ ತಪ್ಪು ಮಾಹಿತಿ ನೀಡುವುದು), 192 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 353(1)(b) (ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈಗಾಗಲೇ ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿಯೂ ಹೈಕೋರ್ಟ್ ಮಾರ್ಚ್ 19ರವರೆಗೆ ಮುಂದಿನ ಕ್ರಮಗಳಿಗೆ ತಡೆ ನೀಡಿತ್ತು. ಆ ಪ್ರಕರಣದಲ್ಲಿ 2012ರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತು ವಿಡಿಯೋ ಪ್ರಸಾರ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

You cannot copy content of this page

Exit mobile version