ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂಟರ್ನೆಟ್ ಸೇವೆಗಳ ಸ್ಥಗಿತ (Internet Shutdown) ಆತಂಕಕಾರಿ ಮಟ್ಟದಲ್ಲಿ ಮುಂದುವರಿದಿದೆ. ಅಂತಾರಾಷ್ಟ್ರೀಯ ಡಿಜಿಟಲ್ ಹಕ್ಕುಗಳ ಸಂಸ್ಥೆ ‘ಆಕ್ಸೆಸ್ ನೌ’ (Access Now) ಬಿಡುಗಡೆ ಮಾಡಿರುವ ತಾಜಾ ವರದಿಯ ಪ್ರಕಾರ, 2025ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು 65 ಬಾರಿ ಇಂಟರ್ನೆಟ್ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗಿದೆ.
ವಿಶ್ವದಾದ್ಯಂತ 52 ದೇಶಗಳಲ್ಲಿ ಒಟ್ಟು 313 ಇಂಟರ್ನೆಟ್ ಶಟ್‌ಡೌನ್ ಪ್ರಕರಣಗಳು ದಾಖಲಾಗಿದ್ದು, ಇದು 2016ರ ನಂತರದ ಗರಿಷ್ಠ ಸಂಖ್ಯೆಯಾಗಿದೆ. ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್ 95 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿಭಟನೆಗಳು, ಸಂಘರ್ಷದ ಸಂದರ್ಭಗಳು ಹಾಗೂ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
2016ರಿಂದ ಈವರೆಗೆ ಜಗತ್ತಿನಲ್ಲಿ ದಾಖಲಾಗಿರುವ 2,102 ಇಂಟರ್ನೆಟ್ ಶಟ್‌ಡೌನ್‌ಗಳಲ್ಲಿ 920 ಪ್ರಕರಣಗಳು ಭಾರತವೊಂದರಲ್ಲೇ ನಡೆದಿವೆ ಎಂಬುದು ಗಮನಾರ್ಹ. 2016ರಲ್ಲಿ ಕೇವಲ 30ರಷ್ಟಿದ್ದ ಈ ಪ್ರಕರಣಗಳು, 2017ರಲ್ಲಿ 69ಕ್ಕೆ ಏರಿಕೆಯಾಗಿ, 2018ರಲ್ಲಿ ದಾಖಲೆಯ 134ಕ್ಕೆ ತಲುಪಿದ್ದವು. ನಿಯಮದ ಪ್ರಕಾರ ಇಂಟರ್ನೆಟ್ ಸ್ಥಗಿತದ ಆದೇಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಿದ್ದರೂ, ಭಾರತ ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಸಂಸ್ಥೆ ಟೀಕಿಸಿದೆ.
ಇಂಟರ್ನೆಟ್ ಸ್ಥಗಿತಗೊಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಸರ್ಕಾರವು ಜನರ ಧ್ವನಿಯನ್ನು ನಿಯಂತ್ರಿಸಲು ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದೆ ಎಂದು ‘ಆಕ್ಸೆಸ್ ನೌ’ ಕಳವಳ ವ್ಯಕ್ತಪಡಿಸಿದೆ. ಡಿಜಿಟಲ್ ಇಂಡಿಯಾ ಯುಗದಲ್ಲಿ ಪದೇ ಪದೇ ಇಂಟರ್ನೆಟ್ ಸ್ಥಗಿತಗೊಳಿಸುವುದರಿಂದ ಶಿಕ್ಷಣ, ವ್ಯಾಪಾರ ಮತ್ತು ತುರ್ತು ಸೇವೆಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
