Friday, June 14, 2024

ಸತ್ಯ | ನ್ಯಾಯ |ಧರ್ಮ

ಎಥೆನಾಲ್ ಮಿಶ್ರಣಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ; ಬಡವರ ಅನ್ನಕ್ಕಿಲ್ಲ ಕಿಮ್ಮತ್ತು

ಕರ್ನಾಟಕ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಹೇಳಿ ನಿರ್ಧಾರ ವಾಪಸ್ ತಗೆದುಕೊಂಡದ್ದು ಸುದ್ದಿಯಲ್ಲಿ ಇರುವಾಗಲೇ ಎಥೆನಾಲ್ ಉತ್ಪಾದನೆಗೆ 29.5 ಲಕ್ಷ ಟನ್ ಗೃಹಬಳಕೆಗೆ ಉಪಯುಕ್ತವಾದ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ

ಆಹಾರ ಬಳಕೆಯ ಉತ್ಪನ್ನಗಳಾದ ಅಕ್ಕಿ ಗೋಧಿ ಬಳಸಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ 2018ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗೃಹಬಳಕೆಗೆ ಉಪಯುಕ್ತವಾದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಈ ಎಥೆನಾಲ್ ಮಿಶ್ರಣ ಯೋಜನೆ ನಮ್ಮ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳಿಕೊಂಡಿದೆ.

2018 ರ ವರೆಗೂ ಆಹಾರ ಬಳಕೆಗೆ ಉಪಯುಕ್ತ ಅಲ್ಲದ ಅಕ್ಕಿ, ಗೋಧಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿತ್ತು. ಆ ನಂತರ ಭಾರತ ಆಹಾರ ನಿಗಮದ ಬಳಿ ಇರುವ ಉತ್ತಮ ಗುಣಮಟ್ಟದ ಹೆಚ್ಚುವರಿ ಅಕ್ಕಿಯನ್ನೂ ಎಥೆನಾಲ್‌ ಉತ್ಪಾದನೆಗೆ ಬಳಸಬಹುದು ಎಂದು 2020 ಕ್ಕೆ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಆ ನಂತರದ ದಿನಗಳಲ್ಲಿ ಭಾರತದಲ್ಲಿ ಹೆಚ್ಚುವರಿ ದಾಸ್ತಾನುವಾದ ಗೃಹಬಳಕೆಗೆ ಉಪಯುಕ್ತ ಅಕ್ಕಿಯನ್ನೂ ಬಳಸಲಾಗುತ್ತಿದೆ. ಹೀಗಾಗಿ 2022–23ನೇ ಆರ್ಥಿಕ ವರ್ಷದಲ್ಲಿ ಸುಮಾರು 16 ಲಕ್ಷ ಟನ್‌ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಏನಿದು ಎಥೆನಾಲ್ ಮಿಶ್ರಣ? ಭಾರತಕ್ಕೆ ಇದರ ಅಗತ್ಯವೆಷ್ಟಿದೆ?
ಒಂದು ಲೀಟರ್‌ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್‌ ಅನ್ನು ಮಿಶ್ರಣ ಮಾಡುವುದರಿಂದ ವಾಹನಗಳಿಂದ ಉತ್ಪಾದನೆಯಾಗುವ ವಾಯುಮಾಲಿನ್ಯ ತಗ್ಗಿಸಬಹುದು ಮತ್ತು ಕಚ್ಛಾ ತೈಲದ ಆಮದು ಕೂಡಾ ತಗ್ಗುತ್ತದೆ. ಈ ಮೊದಲೇ ತಿಳಿಸಿದಂತೆ ಎಥೆನಾಲ್ ಉತ್ಪಾದನೆಗೆ ಆಹಾರ ಉತ್ಪನ್ನಗಳಾದ ಅಕ್ಕಿ ಮತ್ತು ಗೋಧಿಯನ್ನು ಬಳಸಲಾಗುತ್ತದೆ.

2003ರಲ್ಲಿ ಈ ಯೋಜನೆ ಚಾಲ್ತಿಗೆ ಬಂದರೂ, 2018ರಲ್ಲಿ ನರೇಂದ್ರ ಮೋದಿ ಸರ್ಕಾರ ಈ ಯೋಜನೆಗೆ ವೇಗ ನೀಡಿತು. 2020 ರಿಂದ 2022 ರ ಅವಧಿಯಲ್ಲಿ ಪೆಟ್ರೋಲ್ ಗೆ ಶೇ‌.10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು. ಯೋಜನೆಯಂತೆ ಸರ್ಕಾರ ತನ್ನ ಗುರಿಯನ್ನೂ ಮುಟ್ಟಿದ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಸಧ್ಯಕ್ಕೆ ದೇಶದ ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 11 ರಾಜ್ಯಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಅದರಂತೆ ಒಂದು ಲೀಟರ್‌ ಪೆಟ್ರೋಲ್‌ಗೆ ಶೇ 20ರಷ್ಟು (ಇ20) ಎಥೆನಾಲ್‌ ಅನ್ನು ಮಿಶ್ರಣ ಮಾಡಿ ಪೆಟ್ರೋಲ್‌ ಬಂಕ್‌ಗಳ ಮೂಲಕ ಗ್ರಾಹಕರಿಗೆ ನೀಡಲಾಗುತ್ತಿದೆ. ಈ 11 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.

ಮೇಲ್ನೋಟಕ್ಕೆ ಇದೊಂದು ಉಪಯುಕ್ತ ಯೋಜನೆಯೇ ಆದರೂ ಗೃಹಬಳಕೆಯ ಬೇಡಿಕೆಯನ್ನು ಪೂರೈಸಿ ಉಳಿದ ಅಕ್ಕಿ ಮತ್ತು ಗೋಧಿಯನ್ನು ಇದಕ್ಕೆ ಬಳಸಬೇಕು ಎಂಬುದು ನಿಯಮಗಳಲ್ಲಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 101 ನೇ ಸ್ಥಾನದಲ್ಲಿರುವುದು ಆಘಾತಕಾರಿ ಸಂಗತಿ. ಇಂತಹ ದಿನಗಳಲ್ಲಿ ಬಡವರ ಹಸಿವು ನೀಗಿಸುವ ಬದಲು ಎಥೆನಾಲ್ ಮಿಶ್ರಣದ ಯೋಜನೆಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ವ್ಯಯಿಸುತ್ತಿರುವುದು ಅತ್ಯಂತ ಆತಂಕದ ವಿಚಾರವಾಗಿದೆ.

ಆಹಾರ ಉತ್ಪನ್ನಕ್ಕಿಂತ ಎಥೆನಾಲ್ ಉತ್ಪಾದನೆಗೆ ಅಕ್ಕಿ ಅಗ್ಗ!
ಇನ್ನೊಂದು ಆಘಾತಕಾರಿ ಅಂಶವೆಂದರೆ ಭಾರತದಲ್ಲಿ ಉತ್ಪಾದನೆಯಾಗುವ ಅಕ್ಕಿ ಇಲ್ಲಿನ ಆಹಾರಕ್ಕಾಗಿ ಬಳಕೆಯಾಗುವ ದರ ಕ್ವಿಂಟಾಲ್ ಗೆ ₹3,400 ಆದರೆ, ಎಥೆನಾಲ್ ಉತ್ಪಾದನೆಗೆ ಅಕ್ಕಿ ಖರೀದಿಸಲು ಒಂದು ಕ್ವಿಂಟಾಲ್‌ಗೆ ₹2,400 ಎಂದು ಕೇಂದ್ರ ಸರ್ಕಾರ ದರ ನಿಗದಿಪಡಿಸಿದೆ. ತೀರಾ ಇತ್ತೀಚೆಗೆ ಆಹಾರ ಸಚಿವಾಲಯವು ಇದರ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಖಾಸಗಿ ಎಥೆನಾಲ್ ಘಟಕಕ್ಕೆ ಉತ್ತೇಜನ; ಸರ್ಕಾರದ ಅಧೀನದಲ್ಲಿ ಒಂದೂ ಘಟಕವಿಲ್ಲ
ಎಥೆನಾಲ್‌ ಘಟಕ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಒಂದು ಎಥೆನಾಲ್ ಘಟಕ ಪ್ರಾರಂಭ ಮಾಡುವ ಉದ್ದೇಶ ಹೊಂದಿದ್ದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಇದೆ. ಇದರ ಜೊತೆಗೆ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳು ಎಷ್ಟು ಬೇಕಾದರೂ ಧಾನ್ಯಗಳನ್ನು ಖರೀದಿಸಬಹುದಾಗಿದೆ. ದುರಂತ ಎಂದರೆ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ಯೋಜನೆ ರೂಪಿಸಿದರೂ ಇಲ್ಲಿಯವರೆಗೆ ಒಂದೇ ಒಂದು ಸರ್ಕಾರಿ ಸ್ವಾಮ್ಯದ ಎಥೆನಾಲ್ ಘಟಕವನ್ನು ಸ್ಥಾಪಿಸಿಲ್ಲ. ಇಲ್ಲಿಯವರೆಗೆ ಹತ್ತಾರು ಎಥೆನಾಲ್ ಘಟಕ ಸ್ಥಾಪನೆಯಾಗಿದ್ದರೂ ಅವೆಲ್ಲವೂ ಖಾಸಗಿ ಘಟಕಗಳೇ ಹೊರತು ಸರ್ಕಾರಿ ಸ್ವಾಮ್ಯದ್ದಾಗಿಲ್ಲ.

ಸಧ್ಯ ಕರ್ನಾಟಕ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ಕಿ ಬೇಡಿಕೆಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟರೆ ಕೇಂದ್ರ ಸರ್ಕಾರ ಅಕ್ಕಿ ಸರಬರಾಜು ಮಾಡಲು ಹಿಂದೇಟು ಹಾಕಿದೆ. ಜೂನ್ 12 ಕ್ಕೆ ರಾಜ್ಯಕ್ಕೆ ಬರೆದ ಪತ್ರದಲ್ಲಿ ಅಕ್ಕಿ ನೀಡುತ್ತೇವೆ ಎಂದು ಸ್ವೀಕೃತಿ ಪತ್ರ ಬರೆದು ನಂತರ ಜೂನ್ 13 ಕ್ಕೆ ಅಕ್ಕಿ ವಿತರಣೆ ಸಾಧ್ಯವಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಎಥೆನಾಲ್ ಘಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿರುವ ಸೌಲಭ್ಯಗಳು, ಮತ್ತು ಪ್ರಾಮುಖ್ಯತೆ ಮತ್ತೊಮ್ಮೆ ಚರ್ಚೆ ಹುಟ್ಟುವಂತೆ ಮಾಡಿದೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ ಸಲ್ಲಬೇಕಾದ ಅನ್ನದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ಸುಳ್ಳಲ್ಲ.

Related Articles

ಇತ್ತೀಚಿನ ಸುದ್ದಿಗಳು