ಮುಂಬೈ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಪವರ್ ಸೇರಿದಂತೆ ಸಮೂಹದ ವಿವಿಧ ಕಂಪನಿಗಳ ವಿರುದ್ಧ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ್ದ “ಷೇರು ದರ ತಿರುಚುವಿಕೆ” (stock manipulation) ಆರೋಪದಿಂದ ಅದಾನಿ ಸಮೂಹಕ್ಕೆ ಕ್ಲೀನ್‌ಚಿಟ್ ಲಭಿಸಿದೆ.
ಅದಾನಿ ಸಮೂಹವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಎಲ್ಲಾ ಸಾಲವನ್ನು ಬಡ್ಡಿ ಸಮೇತ ಕಂಪನಿಯು ಮರುಪಾವತಿ ಮಾಡಿದೆ. ಯಾವುದೇ ಹಣಕಾಸಿನ ವಂಚನೆ ಅಥವಾ ಅಕ್ರಮ ವರ್ಗಾವಣೆ ನಡೆದಿಲ್ಲ. ಆದ್ದರಿಂದ, ಅದಾನಿ ಸಮೂಹದ ವಿರುದ್ಧದ ಎಲ್ಲಾ ಪ್ರಕರಣಗಳು ಮತ್ತು ವಿಚಾರಣೆಗಳನ್ನು ಕೈಬಿಡಲಾಗುತ್ತಿದೆ ಎಂದು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಅಧಿಕೃತವಾಗಿ ಘೋಷಿಸಿದೆ.
2021ರ ಜನವರಿಯಲ್ಲಿ ಹಿಂಡೆನ್‌ಬರ್ಗ್, “ಅದಾನಿ ಸಮೂಹವು ತನ್ನ ಕಂಪನಿಗಳ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಅಕ್ರಮ ಕೃತ್ಯಗಳನ್ನು ನಡೆಸಿದೆ. ತಮ್ಮದೇ ಆದ ವಿದೇಶಿ ಕಂಪನಿಗಳನ್ನು (overseas companies) ತೆರೆದು, ಅವುಗಳ ಮೂಲಕ ತಮ್ಮದೇ ಕಂಪನಿಯ ಷೇರುಗಳನ್ನು ಖರೀದಿಸುವಂತೆ ಮಾಡಿದೆ. ಈ ಮೂಲಕ ಅದಾನಿ ಗ್ರೂಪ್ ಕಂಪನಿಗಳಿಗೆ ಭಾರೀ ಬೇಡಿಕೆ ಇದೆ ಎಂಬ ಭಾವನೆಯನ್ನು ಸೃಷ್ಟಿಸಿ, ಹೂಡಿಕೆದಾರರಿಗೆ ವಂಚಿಸಿದೆ,” ಎಂದು ಆರೋಪಿಸಿತ್ತು.