Friday, April 26, 2024

ಸತ್ಯ | ನ್ಯಾಯ |ಧರ್ಮ

ಹಿಂದಿ ಹೇರಿಕೆ ; ಕೇಂದ್ರ ಸರ್ಕಾರದಿಂದ ಹಿಂಬಾಗಿಲ ರಾಜಕಾರಣ!

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸತ್ತಿನ ಅಧಿಕೃತ ಭಾಷಾ ಸಮಿತಿಯು, ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಅಥವಾ ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಅಳವಡಿಸಬೇಕು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಶಿಫಾರಸು ಮಾಡಿದೆ.

“ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿ ಭಾಷೆಯನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾಗಿ ಅಳವಡಿಸಬೇಕು ಮತ್ತು ಇಂಗ್ಲಿಷ್ ಬಳಕೆಯನ್ನು ಐಚ್ಛಿಕವಾಗಿ ಮಾಡಬೇಕು” ಎಂದು ಈ ಸಮಿತಿ ಶಿಫಾರಸು ಮಾಡಿದೆ. ಕಳೆದ ತಿಂಗಳು ಈ ಸಮಿತಿಯು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಎಲ್ಲಾ ಅಂಶಗಳು ಉಲ್ಲೇಖಿಸಲ್ಪಟ್ಟಿವೆ.

ಅಧಿಕೃತ ಭಾಷಾ ಸಮಿತಿಯು ರಾಷ್ಟ್ರಪತಿಗಳಿಗೆ ಸಲ್ಲಿಸಿದ ವರದಿಯ 11 ನೇ ಸಂಪುಟದಲ್ಲಿ “ಇಂಗ್ಲಿಷ್ ಸಂಪೂರ್ಣವಾಗಿ ಅಗತ್ಯವಿರುವಲ್ಲಿ ಮಾತ್ರ ಬೋಧನಾ ಮಾಧ್ಯಮವಾಗಿರಬೇಕು, ಆ ಸಂಸ್ಥೆಗಳಲ್ಲಿ ಕ್ರಮೇಣ ಇಂಗ್ಲಿಷ್ ಅನ್ನು ಹಿಂದಿಯೊಂದಿಗೆ ವಿಲೀನಗೊಳಿಸಬೇಕು” ಎಂದೂ ಉಲ್ಲೇಖಿಸಲಾಗಿದೆ.

ವಿಶ್ವವಿದ್ಯಾಲಯಗಳು, ತಾಂತ್ರಿಕ ಅಥವಾ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಭಾಷೆಯು ಮಾಧ್ಯಮ ಭಾಷೆ ಆಗದ ಹೊರತು ಹಿಂದಿ ಎಲ್ಲರ ಸಮೂಹ ಭಾಷೆಯಾಗಲು ಸಾಧ್ಯವಿಲ್ಲ ಎಂದು ಸಮಿತಿ ಗಮನಿಸಿ, ಈ ನಿರ್ಧಾರಕ್ಕೆ ಬಂದಿದೆ. ಈ ಕಾರಣದಿಂದ ಹಿಂದಿಯನ್ನು ಒತ್ತಾಯಪೂರ್ವಕವಾಗಿ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬೋಧನೆಯ ವಿಷಯವಾಗಿ ತಂದು ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಹುನ್ನಾರ ಅಧಿಕೃತ ಭಾಷಾ ಸಮಿತಿಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ.

ಈ ಅಧಿಕೃತ ಭಾಷಾ ಸಮಿತಿಯನ್ನು 1976 ರಲ್ಲಿ ಅಧಿಕೃತ ಭಾಷಾ ಕಾಯಿದೆ – 1963 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯು ಸಂಸತ್ತಿನ 30 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಲೋಕಸಭೆಯಿಂದ 20 ಮತ್ತು ರಾಜ್ಯಸಭೆಯಿಂದ 10 ಸದಸ್ಯರು ಒಳಗೊಂಡಿರುತ್ತಾರೆ. ಈ ಸಮಿತಿಯು ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸುತ್ತದೆ. ಈ ಪ್ರಗತಿಯಲ್ಲಿ ಆದ ಮಹತ್ವದ ಬದಲಾವಣೆಗಳ ಶಿಫಾರಸುಗಳನ್ನು ಮಾಡುವ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ.

ಹಿಂದಿ ಭಾಷಾ ಅಭಿವೃದ್ಧಿಗೆ ಸಂಬಂಧಿಸಿದ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ ಇತ್ತೀಚಿನ ವರದಿಯಲ್ಲಿ, ತರಬೇತಿ ಸಂಸ್ಥೆಗಳಲ್ಲಿ ಹಿಂದಿ ಕಲಿಕಾ ಮಾಧ್ಯಮವಾಗಿ ಬಳಸಲು ಶಿಫಾರಸು ಮಾಡಿದೆ. ಇದರ ಜೊತೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲೀಷ್ ಪ್ರಶ್ನೆಪತ್ರಿಕೆಯನ್ನು ತೆಗೆದುಹಾಕುವುದು ಮತ್ತು ನ್ಯಾಯಾಲಯಗಳ ವಿಚಾರಣೆಯ ಆಯ್ಕೆಗಾಗಿ ಹಿಂದಿ ಭಾಷೆಯ ಭಾಷಾಂತರಕ್ಕೆ ಸಮಿತಿಯು ಮಾಡಿದ ವರದಿಯಲ್ಲಿ ಶಿಫಾರಸು ಮಾಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿದ್ದರೆ, ಕೇಂದ್ರೀಯ ವಿದ್ಯಾಲಯಗಳು (KVs), ನವೋದಯ ವಿದ್ಯಾಲಯಗಳು (NVs) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳು ತಾಂತ್ರಿಕೇತರ ಸಂಸ್ಥೆಗಳ ವರ್ಗಕ್ಕೆ ಸೇರುತ್ತವೆ.

“ಕೆಲವೊಂದು ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಭಾಷಾ ಮಾಧ್ಯಮದ ಆಯ್ಕೆಯು ಲಭ್ಯವಿರುವುದಿಲ್ಲ ಮತ್ತು ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಿಂದಿ ಭಾಷೆಗಿಂತ ಇಂಗ್ಲಿಷ್‌ ಭಾಷೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದ್ದರಿಂದ, ಕಡ್ಡಾಯ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ನಿಲ್ಲಿಸಬೇಕು ಮತ್ತು ಇವುಗಳಲ್ಲಿ ಹಿಂದಿ ಆಯ್ಕೆಗಳನ್ನು ನೀಡಬೇಕು. ಬಹು ಮುಖ್ಯವಾಗಿ ಇಂಗ್ಲಿಷ್ ಬದಲಿಗೆ ಹಿಂದಿಯ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಬೇಕು” ಎಂದು ಈ ಸಮಿತಿಯು ತಾವು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಅಷ್ಟೆ ಅಲ್ಲದೆ ಹಿಂದಿಯಲ್ಲಿ ವ್ಯವಹರಿಸದ ಅಧಿಕಾರಿಗಳು ಮತ್ತು ನೌಕರರಿಗೆ ಕಡ್ಡಾಯವಾಗಿ ಎಚ್ಚರಿಕೆ ನೀಡಿ, ಹಿಂದಿ ಭಾಷೆ ಬಳಸದೇ ಇದ್ದಲ್ಲಿ ಅಂತಹ ಅಧಿಕಾರಿ ಮತ್ತು ನೌಕರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದೂ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

“ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಗಳ ಆಯ್ಕೆಯ ಸಮಯದಲ್ಲಿ ಹಿಂದಿ ಜ್ಞಾನದ ಅವಶ್ಯಕತೆ ಮುಖ್ಯವಾಗಿದೆ. ಆದ್ದರಿಂದ ಉದ್ಯೋಗಿಗಳ ಆಯ್ಕೆಗೆ ಹಿಂದಿ ಜ್ಞಾನವನ್ನು ಖಚಿತಪಡಿಸಿಕೊಳ್ಳಬೇಕು” ಎಂದೂ ಸಹ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಶಿಫಾರಸು ವರದಿಯಲ್ಲಿ ಈ ಸಮಿತಿ ಉಲ್ಲೇಖಿಸಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವರದಿಗಳು ಸ್ಥಳೀಯ ಭಾಷೆಗಳನ್ನು ತುಳಿಯುವ ಮತ್ತು ಆ ಭಾಷೆಗಳ ಅವಸಾನಕ್ಕೆ ಕಾರಣವಾಗುವ ವಿಚಾರ ಎಂದೇ ಈ ಬಗ್ಗೆ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂತಹ ವರದಿಗೆ ರಾಷ್ಟ್ರಪತಿಗಳು ಸಹಿ ಹಾಕಿದರೆ ಭವಿಷ್ಯದಲ್ಲಿ ಇತರೆ ಭಾಷಿಕರು ನಿರುದ್ಯೋಗದ ಹಾದಿ ಹಿಡಿಯುವುದು ಖಚಿತ ಎಂದೇ ಅಭಿಪ್ರಾಯ ಪಡಲಾಗಿದೆ. ಅಮಿತ್ ಶಾ ನೇತೃತ್ವದ ಸಮಿತಿಯ ಇಂತಹ ಅವೈಜ್ಞಾನಿಕ ಶಿಫಾರಸುಗಳಿಂದ ಇತರೆ ಭಾಷೆಗಳ ಮೇಲೆ ಗದಾಪ್ರಹಾರ ಮಾಡುವುದು ಎಷ್ಟು ಸರಿ.? ಒತ್ತಾಯಪೂರ್ವಕವಾಗಿ ಒಂದು ಭಾಷೆ ಹೇರುವುದು, ಇನ್ನೊಂದು ಭಾಷೆಯನ್ನು ಸಾಯಿಸುವುದರ ಸಮಾನ ಉದ್ದೇಶ ಹೊಂದಿದೆ ಎಂಬುದು ಈ ರೀತಿಯ ನಿರ್ಧಾರದಿಂದ ಸಾಬೀತಾಗಿದೆ.

Related Articles

ಇತ್ತೀಚಿನ ಸುದ್ದಿಗಳು