Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದಿ ದಿವಸ ಆಚರಣೆಗೆ ಕರವೇ ಕಿಡಿಕಿಡಿ

ಬೆಂಗಳೂರು: ಸೆ 14 ರಂದು ಒಕ್ಕೂಟ ಸರ್ಕಾರ ನಡೆಸಲು ಉದ್ದೇಶಿಸಿರುವ ಹಿಂದಿ ದಿವಸ ಆಚರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಿಡಿಕಿಡಿಯಾಗಿದ್ದು, ಕರ್ನಾಟಕದಲ್ಲಿ ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.

ಹಿಂದಿ ದಿವಸ ಆಚರಣೆ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಸೆ.14ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಮಾನತೆಯ ಮೇಲೆ ರಚಿತವಾದ ಈ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಭಾಷೆಯನ್ನು ಮಾತ್ರ ಮೆರೆಸಿ ಉಳಿದ ಭಾಷೆಗಳನ್ನು ತುಳಿಯುವ  ಹುನ್ನಾರವನ್ನು ನಾವೆಲ್ಲರೂ ವಿರೋಧಿಸಬೇಕು, ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ ? ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ನುಡಿಗಳಂತೆ ಹಿಂದಿಯೂ ಒಂದು ನುಡಿಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಇತರ ನುಡಿಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು.

ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ನುಡಿ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ನುಡಿ. ನಮ್ಮ ಕನ್ನಡ ಏಳು ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ. ಇಂಥ ನುಡಿಯ ಮೇಲೆ ಹಿಂದಿಯನ್ನು ಹೇರುವ ಕುತಂತ್ರಗಳನ್ನು ವಿಫಲಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ  ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ ಎಂದು ನಾರಾಯಣಗೌಡರು ಕಿವಿಮಾತು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು