ಪೊಲ್ಲಾಚಿ (ತಮಿಳುನಾಡು): ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ಪಕ್ಷ ಆರೋಪಿಸಿದ ಬೆನ್ನಲ್ಲೇ, ತಮಿಳುನಾಡಿನ ತಮಿಳು ಭಾಷಾಭಿಮಾನಿಗಳು ಭಾನುವಾರ ರಾಜ್ಯದ ಎರಡು ರೈಲು ನಿಲ್ದಾಣಗಳ ನಾಮಫಲಕಗಳಲ್ಲಿನ ಹಿಂದಿ ಅಕ್ಷರಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿದರು.
ಪೊಲ್ಲಾಚಿ ಜಂಕ್ಷನ್ ಎಂದು ಬರೆದಿರುವ ಹಿಂದಿ ಅಕ್ಷರಗಳ ಮೇಲೆ ತಮಿಳು ಭಾಷಾ ಹೋರಾಟಗಾರರು ಕಪ್ಪು ಬಣ್ಣ ಬಳಿಯುತ್ತಿರುವ ವಿಡಿಯೋ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅದನ್ನು ಸರಿಪಡಿಸಿದರು.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಘಟನೆಯಲ್ಲಿ, ಪಳಯಂಕೋಟೈ ರೈಲು ನಿಲ್ದಾಣದ ನಾಮಫಲಕದಲ್ಲಿನ ಹಿಂದಿ ಅಕ್ಷರಗಳನ್ನು ಕಪ್ಪು ಬಣ್ಣ ಬಳಿದ ಡಿಎಂಕೆ ಕಾರ್ಯಕರ್ತರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. NEP ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕೇಂದ್ರದ ನಡುವೆ ವಿವಾದ ಮುಂದುವರೆದಿದೆ.