ದೆಹಲಿ: ಆರ್‌ಬಿಐನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ಪ್ರಧಾನ ಕಾರ್ಯದರ್ಶಿ -2’ ಆಗಿ ನೇಮಿಸಲಾಗಿದೆ. ಅವರ ಆಯ್ಕೆಯನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ ಎಂದು ಸಿಬ್ಬಂದಿ ತರಬೇತಿ ಇಲಾಖೆ (ಡಿಒಪಿಟಿ) ಶನಿವಾರ ಆದೇಶ ಹೊರಡಿಸಿದೆ.
ಶಕ್ತಿಕಾಂತ ದಾಸ್ ಅವರ ನೇಮಕಾತಿ ಅವರು ಅಧಿಕಾರ ವಹಿಸಿಕೊಂಡ ಸಮಯದಿಂದ ಜಾರಿಗೆ ಬರಲಿದೆ ಎಂದು ಅದು ಹೇಳಿದೆ. ಅವರ ಅಧಿಕಾರಾವಧಿಯು ‘ಪ್ರಧಾನಿ ಮೋದಿಯವರ ಅಧಿಕಾರಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ – ಯಾವುದು ಮೊದಲೋ ಅಲ್ಲಿಯವರೆಗೆ’ ಮುಂದುವರಿಯುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಿ.ಕೆ. ಮಿಶ್ರಾ ಅವರು ಸೆಪ್ಟೆಂಬರ್ 11, 2019 ರಿಂದ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ತಮಿಳುನಾಡು ಕೇಡರ್‌ನ 1980 ರ ಬ್ಯಾಚ್ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್, ಡಿಸೆಂಬರ್ 2018 ರಲ್ಲಿ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡು ಕಳೆದ ವರ್ಷ ನಿವೃತ್ತರಾದರು. ಆರ್‌ಬಿಐ ಗವರ್ನರ್ ಆಗಿ ಆರು ವರ್ಷಗಳ ಅವಧಿಯಲ್ಲಿ, ಅವರು ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಆರ್ಥಿಕ ಅನಿಶ್ಚಿತತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು.