Thursday, June 20, 2024

ಸತ್ಯ | ನ್ಯಾಯ |ಧರ್ಮ

ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು

ಈ ಪುಸ್ತಕದ ಶೀರ್ಷಿಕೆಯನ್ನು ಕೇಳಿದ ಕೂಡಲೇ ನಾನು ಪುಳಕಿತಗೊಂಡಿದ್ದೆ. ಇಂತಹ ಶೀರ್ಷಿಕೆಗಳು ಗಂಭೀರವಾಗಿ ಸಾಹಿತ್ಯ ಓದುವವನನ್ನು ಪುಳಕಿಸದೇ ಇರಲಾರವು ಎನ್ನುವುದು ನನ್ನ ಪ್ರೊಫೆಷನಲ್ ಅನುಭವ. ಈ ಶೀರ್ಷಿಕೆಯೂ ನನ್ನನ್ನು ಬಹಳ ಕಾಡಿದೆ.

ಹಿಂದು ಎಂಬ ಒಂದು ಧರ್ಮವನ್ನು ಹಿಡಿದುಕೊಂಡು ಅದು ಸಾಗುತ್ತಿರುವ ಹಾದಿಯು ನಮ್ಮನ್ನು ಯಾವ ದಿಕ್ಕಿನೆಡೆಗೆ ಚಲಿಸುತ್ತಿವೆ ಮತ್ತದು ರಕ್ತದ ಹೆಜ್ಜೆಗಳಿಂದ ತನ್ನ ಹಾದಿಯನ್ನು ಚಲಿಸುತ್ತಿದೆ ಎಂಬ ಅರ್ಥವನ್ನು ನೀಡುತ್ತದೆಯಾದ್ದರಿಂದ ಈ ಶೀರ್ಷಿಕೆ ನನ್ನನ್ನು ಆತಂಕಕ್ಕೀಡು ಮಾಡಿದೆ.

ಬಾಬಾಸಾಹೇಬರು, ತನ್ನ ದೇಶದ ಪ್ರಜೆಗಳು ಸಮಾನತೆಯಿಂದ ಬದುಕಬೇಕು ಮತ್ತು ತಾನು ಅನುಭವಿಸಿದ ನೋವನ್ನು ನನ್ನ ದೇಶದ ಪ್ರಜೆಗಳು ಮುಂದೆ ಅನುಭವಿಸಬಾರದು ಎಂಬ ಸದುದ್ದೇಶದಿಂದಲೇ ತಮ್ಮ ಸಂಪೂರ್ಣ ಜ್ಞಾನಭಂಡಾರವನ್ನು ಧಾರೆಯೆರೆದು ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುತ್ತಿರುವ ವಿಶ್ವದಲ್ಲೇ ಅತೀದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ನಡೆಯುತ್ತಿರುವ ಪ್ರಸ್ತುತದ ಹಾದಿ ಬಹು ಕಠಿಣವಾಗಿದೆ. ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ನಮ್ಮನ್ನು ಆತಂಕಕ್ಕೆ, ಕಳವಳಕ್ಕೆ ದೂಡಿವೆ. ಹತ್ತು ವರ್ಷಗಳ ಈಚೆಗೆ ಧಮೀಯ, ಜಾತೀಯ ಕಲಹಗಳು ಹೆಚ್ಚಿವೆ. ಧರ್ಮ ಧರ್ಮಗಳ ಮಧ್ಯೆ ಜಗಳವಿಟ್ಟು ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಮುಗ್ಧ ಯುವಕರನ್ನು ಧರ್ಮದ ಅಫೀನ ಚಟಕ್ಕೆ ಹಚ್ಚಿ ನಿರಾತಂಕವಾಗಿ ಆಡಳಿತ ಚುಕ್ಕಾಣಿ ಹಿಡಿದು, ತಾವು ಮಾಡಿದ್ದೇ ಸರಿ, ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂಬ ಹಪಾಹಪಿತನದಿಂದ ಬೀಗುತ್ತಿವೆ. ಇದಕ್ಕೆ ನಾವು ಮಾಡಿದ ತಪ್ಪು ನಿರ್ಣಯಗಳೇ ಕಾರಣ.

2014ರವರೆಗೆ ನಮ್ಮಲ್ಲಿ ದೇಶದ್ರೋಹಿ ಎನ್ನುವ ಪದ ಸೀಮಿತವಾಗಿ ದೇಶದ ಮೇಲೆ ದಾಳಿ ಮಾಡುವ ಅಥವಾ ದೇಶಕ್ಕೆ ಕುತ್ತನ್ನು ತರುವವರನ್ನು ಮಾತ್ರ ದೇಶದ್ರೋಹಿ ಎಂದು ಕರೆಯಲಾಗುತ್ತಿತ್ತು. ಆದರೆ 2014ರ ನಂತರ ಬದಲಾದ ವರ್ತಮಾನದಲ್ಲಿ ಒಕ್ಕೂಟ ಸರ್ಕಾರವನ್ನು ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅಥವಾ ಅವರು ಮಾಡಿರುವ ಕೆಲಸಗಳ ಬಗ್ಗೆ ವಿರೋಧಿಸಿದರೆ, ಅವರು ಹೇಳುತ್ತಿರುವುದು ಸುಳ್ಳು ಎಂದು ಹೇಳಿದರೆ ಸಾಕು ನಮಗೆ ದೇಶದ್ರೋಹಿ ಎನ್ನುವ ಪಟ್ಟ ಬಹುಸುಲಭವಾಗಿ ಲಭಿಸಿಬಿಡುತ್ತದೆ. ಹಾಗಾಗಿ ವಿಶ್ವದಲ್ಲೇ ದೇಶದ್ರೋಹಿ ಎಂದು ಸುಲಭವಾಗಿ ಕರೆಸಿಕೊಳ್ಳುವುದು ಬಹುಶಃ ಭಾರತದಲ್ಲಿ ಬಿಟ್ಟು ಇನ್ನಾವ ದೇಶದಲ್ಲೂ ನಾವು ಕಾಣಲಾರೆವು.

ಪ್ರಜೆಗಳಿಂದ ಆಯ್ಕೆಯಾದ ಒಂದು ಸರ್ಕಾರ ಅಥವಾ ಒಬ್ಬ ವ್ಯಕ್ತಿ ತಾನು ತನ್ನ ದೇಶದ ಜನರ ಒಳಿತಿಗಾಗಿ, ಅವರ ಶೈಕ್ಷಣಿಕ, ಆರೋಗ್ಯ, ಉದ್ಯೋಗ ಇವುಗಳ ಬಗ್ಗೆ ಗಮನ ಹರಿಸಬೇಕೇ ಹೊರತು ಧಾರ್ಮಿಕ ಅಧಃಪತನಕ್ಕಿಳಿದು, ದೇಶದ ಅಭಿವೃದ್ಧಿಗೆ ಕಡೆಗೆ ಗಮನ ಹರಿಸದೇ, ಎಲ್ಲರನ್ನೂ ಮೂಢನಂಬಿಕೆಗೆ ತಳ್ಳಬಾರದು ಆದರೆ ಇಂತಹ ಘಟನೆಗಳು ಇತ್ತೀಚೆಗೆ ಜರುಗುತ್ತಲೇ ಇವೆ. ಅದನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಪ್ರಜಾಪ್ರಭುತ್ವದ ಚುಕ್ಕಾಣಿ ಹಿಡಿದಿರುವವರು ವೈಜ್ಞಾನಿಕವಾಗಿ ಚಿಂತಿಸಬೇಕೇ ಹೊರತು, ದೇವಸ್ಥಾನದ ಪೂಜಾರಿಯಾಗಿ ವರ್ತಿಸುವುದಲ್ಲ, ಅಲ್ಲದೇ ಅದು ಪ್ರಜಾಪ್ರಭುತ್ವಕ್ಕೆ ಭೂಷಣವೂ ಅಲ್ಲ. ಅಲ್ಲದೇ ಇವರು ಚುನಾವಣೆಗೆ ನಿಂತಾಗ ಮತ ಹಾಕುವವರು ಪ್ರಜೆಗಳೇ ಹೊರತು, ತಾನು ಪೂಜಿಸಿದ ದೇವರಲ್ಲ ಎನ್ನುವುದನ್ನು ಅರಿಯಬೇಕು.

ಕರೋನಾ ಹೋಗಲಾಡಿಸಲು ತಟ್ಟೆ ಬಡಿಯಿರಿ ಎಂದು ದೆಹಲಿಯಲ್ಲಿ ಕುಳಿತವರು ಆದೇಶಿಸಿದರೆ, ಅದನ್ನು ಪಾಲಿಸಲು ಸಂವಿಧಾನಬದ್ಧ ಹುದ್ದೆಯಾದ ನಮ್ಮ ರಾಜ್ಯದ ರಾಜ್ಯಪಾಲರೇ ತಟ್ಟೆ ಹಿಡಿದು ಟಣ್ ಟಣ್ ಎಂದು ಬಾರಿಸಿದ್ದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ನೋಡಿದ ಸಣ್ಣ ಸಣ್ಣ ಮಕ್ಕಳ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮ ಎಂತಹುದು ಎಂಬ ಯೋಚನೆಯೂ ನಮಗೆ ಬರಲಿಲ್ಲ. ರೈತವಿರೋಧಿ ಕಾನೂನುಗಳನ್ನು ಜಾರಿಗೆ ತಂದಾಗ ಇವರು ಮಾತಾಡಿದ ಅಹಂಕಾರದ ಮಾತುಗಳಿಗೇನೂ ಕಡಿಮೆಯಿಲ್ಲ ಒಂದು ರೀತಿ ರೈತರನ್ನು ಕಾಲಕಸ ಮಾಡಿದ್ದೂ ಇವರೇ. ರೈತರ ಹೋರಾಟಕ್ಕೆ ರಸ್ತೆಗೆ ಮೊಳೆಗಳನ್ನು ಹೊಡೆದದ್ದು ಇತಿಹಾಸದಲ್ಲಿ ಇವರೇ ಮೊದಲು.

ಇಂತಹ ಮೂಢನಂಬಿಕೆಗಳನ್ನು ಪ್ರಚಾರ ಮಾಡಲು ಮಾಧ್ಯಮಗಳಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯುವ ಬಹುತೇಕ ಮಾಧ್ಯಮಗಳೂ ಸಹ ಬಿಕರಿಯಾಗಿವೆ ಎನ್ನುವುದಕ್ಕೆ ಸಾಕ್ಷಿ ನೀಡಬೇಕೆ? ಅವರು ತಮ್ಮ ದೊರೆ ಏನೇ ಮಾಡಿದರೂ ಅದಕ್ಕೊಂದು ಶೀರ್ಷಿಕೆ ಕೊಟ್ಟು ಅವರನ್ನು ವಿಜೃಂಬಿಸಿವೆ. ಒಬ್ಬ ವ್ಯಕ್ತಿಯನ್ನು ಅಷ್ಟೊಂದು ವಿಜೃಂಭಿಸುವುದು ಪ್ರಜಾಪ್ರಭುತ್ವದ ರಾಷ್ಟ್ರಕ್ಕೆ ಘನತೆಯನ್ನು ಖಂಡಿತಾ ತಂದುಕೊಡಲಾರದು. ಅಲ್ಲದೇ ಒಂದೇ ಒಂದು ಪ್ರೆಸ್ ಮೀಟ್ ಮಾಡದವರನ್ನು ಈ ರೀತಿಯಾಗಿ ವಿಜೃಂಭಿಸುವುದನ್ನು ನೋಡಿದರೆ ಇವರ ಕೈಗಳು ಶುದ್ಧವಾಗಿದೆ ಎಂದು ನಂಬುವುದಾದರೂ ಹೇಗೆ? ಇಂತಹ ಎಲ್ಲ ಕೆಲಸಗಳನ್ನು ಪರಾಮರ್ಶೆ ಮಾಡುವುದನ್ನು ಬಿಟ್ಟು, ರಾಜಾ ಪ್ರತ್ಯಕ್ಷಃ ದೇವರು ಎಂದು ಹೊಗಳುಭಟ್ಟರಂತಿರುವ ಈ ಮಾಧ್ಯಮಗಳಿಗೆ ಕಾಣುವುದೇ ಇಲ್ಲ. ಕಂಡಿದ್ದರೆ ಬೇರೆಯೇ ಇರುತ್ತಿತ್ತು.

ಸ್ವಾತಂತ್ರ್ಯ ಬಂದು 75ರ ವಸಂತದಲ್ಲಿರುವ ನಮ್ನನ್ನು ಇನ್ನೂ ಬಡತನ ಕಾಡುತ್ತಿದೆ, ನಿರುದ್ಯೋಗದಿಂದ ಯುವಕರು ಬೇಸತ್ತಿದ್ದಾರೆ. ಯುವಕರು ಕೋಮುವಾದಿತನಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ತನ್ನ ಗಮನವನ್ನು ಹರಿಸುತ್ತಲೇ ಇಲ್ಲ. ಈಗಿನ ಸರ್ಕಾರಕ್ಕೆ ಬರೀ ಮತವೊಂದೇ ಬೇಕು ಮತ್ತು ಅದನ್ನು ಹೇಗೆ ಚುನಾವಣೆಯಲ್ಲಿ ಪಡೆಯಬೇಕು ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತು. ಅದನ್ನು ಇವರು ಸಶಕ್ತವಾಗಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ನಾವೂ ಸಹ ಏನೂ ಕಡಿಮೆಯಿಲ್ಲ ಎನ್ನುವ ಹಾಗೆ ಚುನಾವಣೆ ಬಂದರೆ ಸಾಕು ರಾಜಕೀಯ ಪಕ್ಷಗಳ ಬೆಣ್ಣೆಯ ಮಾತುಗಳಿಗೆ ಮರುಳಾಗಿ, ಹಸಿದಾಗ ಅನ್ನವನ್ನು ಕೊಡದ, ಧರ್ಮದ ಬಾವುಟವನ್ನು ಹಿಡಿದು ಕೋಮುವಾದಿತನವನ್ನು ಅನುಸರಿಸುತ್ತಾ, ಅವರ ಬೆನ್ನಹಿಂದೆ ಬಿದ್ದು, ನಮ್ಮ ಮೆದುಳಲ್ಲಿ ಧರ್ಮದ ಅಫೀನನ್ನು ತುಂಬಿಕೊಂಡು ಇತರೆ ಧರ್ಮಗಳನ್ನು ದ್ವೇಷಿಸುತ್ತಾ ಅವರನ್ನು ಹಿಂಬಾಲಿಸುತ್ತಿದ್ದೇವೆ. ಇದು ನಮ್ಮ ಶವದ ಪೆಟ್ಟಿಗೆಗೆ ಅಂತಿಮ ಮೊಳೆಗಳನ್ನು ನಾವೇ ಹೊಡೆದುಕೊಳ್ಳುತ್ತಿದ್ದೇವೆ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನಗಳು ಉಳಿದಿಲ್ಲ.

ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು ಪುಸ್ತಕದಲ್ಲಿ ಇಂತಹ ಗಂಭೀರವಾದ ವಿಷಯಗಳನ್ನು, ಸತ್ಯದ ವಿಚಾರಗಳನ್ನು ಸಾಕ್ಷಿಗಳ ಸಮೇತ ಉಲ್ಲೇಖಿಸಿದ್ದಾರೆ. ಸುಳ್ಳುಗಳೇ ಉಸಿರಾಡುತ್ತಿರುವ ಈ ಹೊತ್ತಿನಲ್ಲಿ, ಸತ್ಯವನ್ನು ಹೇಳುವುದೇ ದುಸ್ತರವಾಗಿರುವಾಗ, ಸತ್ಯವನ್ನು ಹೇಳುವ ಇಂತಹ ಪುಸ್ತಕಗಳ ಓದು ನಮ್ಮ ಕಣ್ಣುಗಳನ್ನು ತೆರೆಸುತ್ತವೆ. ಇಂತಹ ಸತ್ಯಗಳನ್ನು ಹೇಳುವಲ್ಲಿ ತೋರಿರುವ ಗಟ್ಟಿತನ ಪ್ರಶಂಸನೀಯವಾದದ್ದು. ಹಲವಾರು ವಿಷಯಗಳ ಬಗ್ಗೆ ತಿಳಿಸಿರುವ ಲೇಖಕರು ಹಿಂದೂ ರಾಷ್ಟ್ರವಾದರೆ ಆಗಬಹುದಾದ ಅನಾಹುತಗಳನ್ನು ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರಜೆಗಳು ಎಚ್ಚೆತ್ತುಕೊಂಡು ಸರಿಯಾದವರನ್ನು ಆರಿಸದೇ ಇದ್ದರೆ ಇದರ ದುಷ್ಫಲವನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ.

ಈ ಪುಸ್ತಕದ ಲೇಖಕರಾದ ಲತಾಮಾಲ ಅವರು ಬಹಳ ಧೈರ್ಯವಂತರು ಎನ್ನುವುದನ್ನು ಈ ಪುಸ್ತಕದ ಮೂಲಕ ಸಾಬೀತುಪಡಿಸಿದ್ದಾರೆ. ಇವರು ಹೇಳಿರುವ ವಿಚಾರಗಳು ನಮ್ಮನ್ನು ಆಲೋಚನೆಗೆ ಹಚ್ಚುತ್ತವೆ. ಆ ಮೂಲಕ ಅವರು ಸಮಾಜದ ಬಗ್ಗೆ ಇರುವ ತಮ್ಮ ಪ್ರತಿರೋಧವನ್ನು ಸಶಕ್ತವಾಗಿ ದಾಖಲು ಮಾಡಿದ್ದಾರೆ. ಇಂತಹ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ಕೊಟ್ಟಿರುವ ಲತಾಮಾಲ ಅವರು ನಿಜಕ್ಕೂ ಅಭಿನಂದನಾರ್ಹರು. ಇಂತಹ ಪುಸ್ತಕಗಳನ್ನು ಓದುವ ಮೂಲಕ ನಮ್ಮ ಕಣ್ಣುಗಳನ್ನು ಇನ್ನಷ್ಟು ತೆರೆದುಕೊಂಡು ಭವಿಷ್ಯದ ಭಾರತವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಅರಿಯೋಣ.

Related Articles

ಇತ್ತೀಚಿನ ಸುದ್ದಿಗಳು