ಬೊಗಸೆಗೆ ದಕ್ಕಿದ್ದು…22
ನಿಖಿಲ್ ಕೊಲ್ಪೆ
ಇತಿಹಾಸವನ್ನು ಹಿಂದೂತ್ವದ ತಮ್ಮ ಸಿದ್ಧಸೂತ್ರಗಳಿಗೆ ಅನುಸಾರವಾಗಿ ತಿರುಚುವುದು ಸಂಘ ಪರಿವಾರಕ್ಕೆ ಹೊಸದೇನಲ್ಲ. ಅವರದನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು, ಕೋಮುದ್ವೇಷದ ವಿಷವನ್ನು ಸಾಮಾನ್ಯ ಜನರ ನಡುವೆ ಬಿತ್ತಿ ಅಧಿಕಾರದ ಬೆಳೆ ತೆಗೆಯುವುದರಲ್ಲಿ ಯಶಸ್ವಿಯೂ ಆಗಿದ್ದಾರೆ. ಗಾಂಧಿ ಮತ್ತು ನೆಹರೂ ಬಗ್ಗೆ- ಅವರ ಚಾರಿತ್ರ್ಯವನ್ನೇ ಧ್ವಂಸ ಮಾಡಲು ಯತ್ನಿಸುವ ಅಶ್ಲೀಲ ಕಟ್ಟುಕತೆಗಳನ್ನು ಅವರು ಕಟ್ಟಿ, ಶಾಖೆಗಳ ಮೂಲಕ ಹರಡಿ, ತಮ್ಮ ಕಾರ್ಯಕರ್ತರ ಮೂಲಕ ಜನರ ನಡುವೆ ಹರಡಿದ್ದಾರೆ.
ಆದರೆ ಇಂದು- ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಪ್ರಭಾವಿ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ, ಸತ್ಯದ ತಲೆಯ ಮೇಲೆ ಹೊಡೆದಂತೆ ಸಂಘಪರಿವಾರದ ಸುಳ್ಳುಗಳು ಹರಿದಾಡುತ್ತಿವೆ. ಇತಿಹಾಸವನ್ನು ತಿರುಚುವುದು ಮಾತ್ರವಲ್ಲ; ಅದನ್ನೇ ಆಧಿಕೃತಗೊಳಿಸಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಠ್ಯಪುಸ್ತಕಗಳಲ್ಲಿ ತುರುಕಿಸಿ, ಎಳೆಯ ಮಕ್ಕಳ ಮನಸ್ಸಿಗೆ ವಿಷ ತುಂಬಿಸುವ ಕೆಲಸಗಳು ನಡೆಯುತ್ತಿವೆ. ಅಯೋಧ್ಯೆ ಅಥವಾ ಫೈಜಾಬಾದ್‌ನಲ್ಲಿ ರಾಮಜನ್ಮಭೂಮಿ ಕುರಿತ ಸುಳ್ಳುಗಳು, ಇಡೀ ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೆ, ಸಾವರ್ಕರ್ ಕುರಿತು, ಶಿವಾಜಿಯ ಕುರಿತು, ಮೊಗಲ್ ದೊರೆಗಳ ಕುರಿತು ಟಿಪ್ಪು ಸುಲ್ತಾನರ ಸಹಿತ, ಮುಸ್ಲಿಂ ದೊರೆಗಳೂ ಸೇರಿದಂತೆ ಇಡೀ ಮಾನವ ಇತಿಹಾಸ ಕುರಿತು ವಾಟ್ಸಾಪ್ ಮುಂತಾದ ವೇದಿಕೆಗಳಲ್ಲಿ ಹರಡಲಾಗುತ್ತಿರುವ ಸಾವಿರಾರು ವಿಕೃತ ಸುಳ್ಳುಗಳು ಓದುಗರಿಗೆ ಪರಿಚಿತವೇ.
ಇದೀಗ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ದೊಡ್ಡದೊಡ್ಡ ನಾಯಕರಿಂದ ಹಿಡಿದು, ಸಾಮಾಜಿಕ ಜಾಲತಾಣಗಳ ಬಾಡಿಗೆ ಬರಹಗಾರರು ಮತ್ತು ಎರಡು ರೂಪಾಯಿ ಗಿರಾಕಿಗಳು ಕೂಡಾ ಸುಳ್ಳು, ಕಪೋಲಕಲ್ಪಿತ, ತಿರುಚಿದ ಇತಿಹಾಸವನ್ನು ಹೆಚ್ಚುಹೆಚ್ಚಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವುದೇ ಹೆಚ್ಚು ಸರಿ. ಆದುದರಿಂದ ಈ ಸುಳ್ಳುಗಳ ಮೂಲ ಪುರುಷ ಯಾರು ಎಂಬುದನ್ನು ಸ್ವಲ್ಪ ತಿಳಿದುಕೊಳ್ಳೋಣ.
ಇಂತಾ ಎಲ್ಲಾ ಸುಳ್ಳುಗಳ, ಅಪಪ್ರಚಾರಗಳ, ಆರೆಸ್ಸೆಸ್ ನಂಬಿರುವ ಇತಿಹಾಸದ ಮೂಲಪುರುಷ ಮತ್ತು ಸೃಷ್ಟಿಕರ್ತನೇ ಸ್ವಯಂಘೋಷಿತ ಇತಿಹಾಸಕಾರ ಪಿ. ಎನ್. ಓಕ್ ಅಥವಾ ಪುರುಷೋತ್ತಮ ನಾಗೇಶ ಓಕ್. ವಾಸ್ತವದಲ್ಲಿ ಈತ ಇತಿಹಾಸಕಾರನೇ ಅಲ್ಲ. ಆದರೆ, ಪ್ರಪಂಚ ಕಂಡ ಅತ್ಯಂತ ಪ್ರತಿಭಾವಂತ ಇತಿಹಾಸ್ಯಕಾರ; ಜೋಕರ್. ಈತನ ಕುರಿತು ಹಿಂದೆ ಬೇರೆಡೆ ಬರೆದಿದ್ದೆನಾದರೂ, ಅದು ಕೆಲವೇ ಜನರಿಗೆ ತಲಪಿರುವ ಕಾರಣದಿಂದ ಆತನ ಕುರಿತು ಇಲ್ಲಿ ಮತ್ತೆ ಬರೆಯಬೇಕೆನಿಸಿದೆ.
ಈತ ಬಾಲಿವುಡ್‌ನಲ್ಲಿ ಚಿತ್ರಕತೆ ಬರೆಯುತ್ತಿದ್ದರೆ, ಬಹಳಷ್ಟು ಹಣವನ್ನೂ, ಪ್ರಸಿದ್ಧಿಯನ್ನು ಗಳಿಸಬಹುದಾಗಿದ್ದ- ಹುಲುಸಾದ ಕಲ್ಪನೆ ಹೊಂದಿದ್ದ ವ್ಯಕ್ತಿ. ಕ್ರೈಸ್ತ ಧರ್ಮ, ಇಸ್ಲಾಂ, ಮಕ್ಕಾದಲ್ಲಿರುವ ಕಾಬಾ, ತಾಜ್‌ಮಹಲ್ ಸೇರಿದಂತೆ ಹಿಂದೂವೇತರ ಎಲ್ಲವನ್ನೂ ವಿವಾದಕ್ಕೆಳೆದ ವ್ಮಕ್ತಿಯೀತ. ಆತನೀಗ ಸಂಘ ಪರಿವಾರದ ಅಧಿಕೃತ ಇತಿಹಾಸಕಾರ. ಅವರ ಬರಹಗಳಲ್ಲಿ ಆತನ ಹೆಸರು ಬರೆಯುವಾಗ ಮಹಾನ್, ಪೂಜ್ಯರು ಇತ್ಯಾದಿ ವಿಶೇಷಣಗಳನ್ನೂ ಬಳಸಲಾಗುತ್ತಿದೆ.
ನಮ್ಮ ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ಎಂಬಾತನ ನೇತೃತ್ವದಲ್ಲಿ ನಡೆದ ಪಠ್ಯಪುಸ್ತಕಗಳ ಅಧ್ವಾನ, ಟಿಪ್ಪುವಿನ ಕುರಿತು ವಿಕೃತವಾಗಿ ಬರೆದು ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಹುಟ್ಟುಹಾಕಿ, ಅಡ್ಡಂಡ ಕಾರ್ಯಪ್ಪ ಎಂಬಾತ ಬರೆದಿರುವ ಕುತ್ಸಿತ ನಾಟಕ, ಸೂಲಿಬೆಲೆ, ಮಹೇಶ್ ಹೆಗ್ಡೆ ಮುಂತಾದವರು ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ವಿಷಬೀಜಗಳು, ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಪ್ಪಟ ಸುಳ್ಳುಗಳು ತಾಜ್‌ಮಹಲ್, ಕಾಶಿಯ ಗ್ಯಾನವ್ಯಾಪಿ ದೇವಾಲಯ-ಮಸೀದಿ ಮುಂತಾದ ವಿವಾದಗಳು ಚರ್ಚೆಯಾಗುತ್ತಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ- ಇಂತಾ ಸುಳ್ಳು ಇತಿಹಾಸದಲ್ಲಿ ಇಂತಹಾ ವ್ಯಕ್ತಿಗಳ ಗುರುವಾದ ವ್ಯಕ್ತಿಯ ಬಗ್ಗೆ ಜಾತ್ಯತೀತ ಜನತೆ ಸ್ವಲ್ಪವಾದರೂ ತಿಳಿದಿರಬೇಕು, ಎಚ್ಚರಿಕೆ ಹೊಂದಿರಬೇಕು.
ಯಾವುದೇ ಜಾಲತಾಣ ತೆರೆದರೂ, ಈತನ ಸುಳ್ಳು ಇತಿಹಾಸವನ್ನು ಹರಡುವ, ಅದೇ ರೀತಿಯ ಬೇರೆ ಸುಳ್ಳುಗಳನ್ನು ಹರಡುವ, ಈತನನ್ನು ವೈಭವೀಕರಿಸುವ ಸಾವಿರಾರು ಅಜ್ಞಾನಿ ಬರಹಗಳು ಮತ್ತು ವಿಡಿಯೋಗಳು ಸಿಗುತ್ತವೆ. ಇವುಗಳ ನಡುವೆ, ಈತನ ನಗೆಪಾಟಲು ಸುಳ್ಳುಗಳನ್ನು ಖಂಡಿಸುವ ಬರಹ ಅಥವಾ ವಿಡಿಯೋಗಳು ಕಾಣದಂತಾಗಿವೆ. ವಾಟ್ಸಾಪ್ ಯುನಿವರ್ಸಿಟಿಗೆ ಈತನ ವಿಧಾನ ಮತ್ತು ಕಲ್ಪನೆಗಳೇ ಜೀವಾಳವಾಗಿವೆ. ಮೊದಲಿಗೆ ತೀರಾ ಚುಟುಕಾಗಿ ಈತನ ಜೀವನದ ಹಿನ್ನೆಲೆಯನ್ನು ನೋಡೊಣ.
ಮಾರ್ಚ್ 2, 1917ರಂದು ಬ್ರಿಟಿಷ್ ಸಾಮ್ರಾಜ್ಯದ ಇಂದೋರ್ ಪ್ರಾಂತ್ಯದಲ್ಲಿ ಮರಾಠ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಪಿ. ಎನ್. ಓಕ್, ಆಗ್ರಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ನಂತರ ಬ್ರಿಟಿಷ್ ಆಡಳಿತದಲ್ಲಿ ಮೊದಲ ದರ್ಜೆಯ ಗಜೆಟೆಡ್ ಅಧಿಕಾರಿಯಾಗಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ತಾನು ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿ, ಜಪಾನೀಯರ ಜೊತೆ, ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದೆನೆಂದೂ, ಸಿಂಗಾಪುರ ಮತ್ತು ರಂಗೂನ್ ನಡುವೆ ಓಡಾಡುತ್ತಾ ಬ್ರಿಟಿಷರ ಕೈಗೆ ಸಿಗದೇ ತಪ್ಪಿಸಿಕೊಂಡೆನೆಂದೂ ಅವರು ಹೇಳಿಕೊಂಡಿದ್ದಾರೆ. ಇದು ಅವರು ಬರೆದ ಇತಿಹಾಸದಂತೆ ಅಥವಾ ನರೇಂದ್ರ ಮೋದಿಯ ಹಿನ್ನೆಲೆಯಷ್ಟೇ ಪ್ರಶ್ನಾರ್ಹ. 1964ರಲ್ಲಿ ಈತ ಭಾರತೀಯ ಇತಿಹಾಸ ಪುನರ್ರಚನೆಗೆ ಎಂದೇ ಒಂದು ಸಂಘಟನೆ ಕಟ್ಟಿದರು. 2007ರ ಡಿಸೆಂಬರ್ 4ರಂದು ಪುಣೆಯಲ್ಲಿ ನಿಧನರಾದರು.
ಈತ ಭಾರತದ ಕೋಮುಸಾಮರಸ್ಯಕ್ಕೆ ಬಹಳಷ್ಟು ಹಾನಿಮಾಡಿದ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಉದಾಹರಣೆಗಳು ಎಂದರೆ: ತಾಜ್‌ಮಹಲ್ ವಾಸ್ ಎ ರಾಜ್‌ಪೂತ್ ಪ್ಯಾಲೇಸ್, ಇಂಡಿಯನ್ ಕ್ಷತ್ರಿಯಾಸ್ ಒನ್ಸ್ ರೂಲ್ಡ್ ಬಾಲಿ ಟು ಬಾಲ್ಟಿಕ್ ಎಂಡ್ ಕೊರಿಯಾ ಟು ಕಾಬಾ, ಹೂ ಸೇಸ್ ಅಕ್ಬರ್ ವಾಸ್ ಗ್ರೇಟ್?, ಭಾರತ್ ಮೇ ಮುಸ್ಲಿಂ ಸುಲ್ತಾನ್, ಲಕ್ನೋಸ್ ಇಮಾಂಬರಾಸ್ ಆರ್ ಹಿಂದೂ ಪ್ಯಾಲೇಸಸ್, ಡೆಲ್ಲೀಸ್ ರೆಡ್ ಫೋರ್ಟ್ ಈಸ್ ಹಿಂದೂಸ್ ಲಾಲ್ ಕೋಟ್, ಕ್ರಿಶ್ಚಿಯಾನಿಟಿ ಈಸ್ ಕೃಷ್ಣ ನೀತಿ, ಫತೇಪುರ್ ಸಿಕ್ರಿ ಏಕ್ ಹಿಂದೂ ನಗರಿ -ಇತ್ಯಾದಿ. ಇವೇ ಇಂದು ವಾಟ್ಸಾಪ್ ವಿಶ್ವವಿದ್ಯಾಲಯದ ಇತಿಹಾಸ ಪಠ್ಯಪುಸ್ತಕಗಳು.
ಈತನ “ಮಹಾನ್” ಸಂಶೋಧನೆಗಳಲ್ಲಿ ಮುಖ್ಯವಾದವುಗಳು ಎಂದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಹಿಂದೂ ಧರ್ಮದ ಪ್ರಭಾವದಿಂದ ಹುಟ್ಟಿದವು ಎಂದೂ, ಏಸುಕ್ರಿಸ್ತ ಯೌವನದಲ್ಲಿ ಭಾರತಕ್ಕೆ ಬಂದಿದ್ದ ಎಂದೂ, ಪೋಪ್ ಎಂಬುದು ವೇದಕಾಲದ ಹುದ್ದೆ ಎಂದೂ, ವ್ಯಾಟಿಕನ್ ಹೆಸರು ಸಂಸ್ಕೃತದ ವಾಟಿಕಾ ಪದದಿಂದ ಬಂದಿದೆ ಎಂದೂ, ಅಯರ್‌ಲ್ಯಾಂಡ್ ಹಿಂದೆ ಐಯ್ಯರ್ ಬ್ರಾಹ್ಮಣರಿಗೆ ಸೇರಿತ್ತು ಎಂದೂ, ಮಕ್ಕಾದ ಕಾಬಾ, ಭಾರತದ ತಾಜ್‌ಮಹಲ್, ಬ್ರಿಟನಿನ ವೆಸ್ಟ್‌ಮಿನಿಸ್ಟರ್ ಅಬೇ ಮೊದಲು ಶಿವ ದೇವಾಲಯಗಳಾಗಿದ್ದವು ಎಂದು ಹೇಳಿದ್ದು. ಇವೆಲ್ಲವೂ ಹುಚ್ಚುತನದ ಪರಮಾವಧಿ ಎಂದು ಜಗತ್ತಿನ ಪ್ರಮುಖ ಇತಿಹಾಸಕಾರರು ಈಗಾಗಲೇ ಹೇಳಿದ್ದಾರೆ.
ಇಡೀ ಜಗತ್ತೇ ಪುರಾತನ ಹಿಂದೂ ಸಾಮ್ರಾಜ್ಯವಾಗಿತ್ತು ಎಂಬ ಭ್ರಮೆಯಲ್ಲಿದ್ದ ಓಕ್‌ಗೆ ಎಲ್ಲಾ ಹೆಸರು, ಸ್ಥಳಗಳಲ್ಲಿ ಹಿಂದೂತ್ವವೇ ಕಾಣುತ್ತಿತ್ತು. ಎಲ್ಲಾ ಇಸ್ಲಾಮಿಕ್ ಕಟ್ಟಡಗಳು, ಸ್ಮಾರಕಗಳು ಈತನಿಗೆ ಹಿಂದೂಗಳು ಕಟ್ಟಿದವುಗಳಂತೆ ಕಾಣುತ್ತಿದ್ದವು. ನಿಜವಾದ ಇತಿಹಾಸ ಬರೆಯಲು ಹಿಂದಿನ ದಾಖಲೆಗಳು, ಶಾಸನಗಳು, ಬರಹಗಳು, ಉಲ್ಲೇಖಗಳು, ಪ್ರವಾಸಿ ಕಥನಗಳು, ಉತ್ಖನನದಲ್ಲಿ ದೊರೆತ ವಸ್ತುಗಳು, ಸಮಕಾಲೀನ ಅಧ್ಯಯನಗಳು, ಕಾಲ ನಿರ್ಣಯಕ್ಕೆ ಕಾರ್ಬನ್ ಡೇಟಿಂಗ್‌ನಂತಾ ಪರೀಕ್ಷೆಗಳು, ಸಮಕಾಲೀನ ಅಧ್ಯಯನಗಳು ಇತ್ಯಾದಿಗಳ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನು ಇತರ ಇತಿಹಾಸಕಾರರು ಒಪ್ಪಬೇಕಾಗುತ್ತದೆ. ಇದು ಯಾವುದನ್ನೂ ಮಾಡದ ಓಕ್, ಒಂದು ಪದ, ಹೆಸರು- ಸಂಸ್ಕೃತದ ಪದ, ಹೆಸರಿಗೆ ಹತ್ತಿರವಾಗಿದ್ದರೆ ಸಾಕು, ಅದನ್ನು ಹಿಂದೂ ಎನ್ನುವ ಹುಚ್ಚುತನ ಹತ್ತಿಸಿಕೊಂಡಿದ್ದರು.
ಅವರು ಬರೆದಿದ್ದ 13 ಪುಟಗಳ ಒಂದು ಪುಸ್ತಿಕೆಯಲ್ಲಿ ಕಾಬಾ ಶಿವ ದೇವಾಲಯ ಎಂದೂ, ಅರಬರು ವೇದದ ಹಿನ್ನೆಲೆ ಹೊಂದಿದ್ದರು ಎಂದೂ, ರಾಜಾ ವಿಕ್ರಮಾದಿತ್ಯನ ಉಲ್ಲೇಖ ಇರುವ ಬರಹ ಕಾಬಾದ ಒಳಗೆ ಇದೆಯೆಂದೂ ಬರೆದಿದ್ದರು. ಇದಕ್ಕೆ ಆಧಾರಗಳಿಲ್ಲವೆಂದೂ, ಅಲ್ಲಿ ಉಲ್ಲೇಖಿಸಲಾದ ರಾಜರು ಮತ್ತು ಕಾಲಕ್ಕೆ ಯಾವುದೇ ತಾಳಮೇಳವಿಲ್ಲ ಎಂದೂ ಇತಿಸಾಸಜ್ಞರು ಸಾಬೀತುಪಡಿಸಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿ ಓಕ್ ಹೇಳಿದ್ದೆಲ್ಲವನ್ನೂ ದೊಡ್ಡ ದೊಡ್ಡ ಇತಿಹಾಸಜ್ಞರು ಚಿಂದಿ ಮಾಡಿ, ಅವರನ್ನು ಒಂದು ಹಾಸ್ಯದ ವಸ್ತುವನ್ನಾಗಿ ಮಾಡಿದ್ದಾರೆ. ಕೆಲವರು ಆತನನ್ನು ಕ್ರ್ಯಾಕ್‌ಪಾಟ್ ಎಂದರೆ ತಲೆ ಕೆಟ್ಟವ ಎಂದೂ ಬಣ್ಣಿಸಿದ್ದಾರೆ. ಕೆಲವೇ ತಮಾಷೆಯ ವಿಷಯಗಳನ್ನು ಉಲ್ಲೇಖಿಸಬೇಕು ಎಂದರೆ, ವೆಟಿಕನ್ ಎಂದರೆ, ಸಂಸ್ಕೃತದ ವಾಟಿಕಾ ಎಂದರೆ ಗುರುಕುಲ, ಕ್ರಿಶ್ಚಿಯಾನಿಟಿ ಎಂದರೆ ಕೃಷ್ಣ ನೀತಿ, ಅಬ್ರಹಾಂ ಎಂದರೆ ಬ್ರಹ್ಮ ಇತ್ಯಾದಿ.
ತಾಜ್‌ಮಹಲನ್ನು ಕಟ್ಟಿಸಲು ಶಹಜಹಾನ್ ರಾಜಪೂತ ದೊರೆ ಜೈಸಿಂಗ್‌ನಿಂದ ಜಮೀನು ಖರೀದಿಸಿದ್ದನು ಎಂದು ಪ(ಬಾ)ದ್‌ಶಾನಾಮಾ ಎಂಬ ದಾಖಲೆಯಲ್ಲಿರುವ ಬರೆದಿದೆ ಎಂಬುದನ್ನೇ ತಪ್ಪಾಗಿ ಅನ್ವಯಿಸಿ, ಅಲ್ಲಿ ಶಿವಮಂದಿರ ಇತ್ತು, ತಾಜ್‌ಮಹಲ್ ಒಳಗೆ ಶಿವಲಿಂಗವಿದೆ ಇತ್ಯಾದಿ ಸುಳ್ಳುಗಳನ್ನು ಬರೆದ ಓಕ್, ತಾನು ಹೇಳಿದ್ದು ತಪ್ಪೆಂದು ಸಾಬೀತಾದಾಗ ಹಲವು ಬಾರಿ ಹೊಸ ಸುಳ್ಳುಗಳನ್ನು ಹೇಳಿದ್ದಾರೆ. ಆದರೆ, ಹಿಂದೂತ್ವದ ಪಡೆಗಳು ಅದೇ ಸಾಬೀತಾದ ಸುಳ್ಳುಗಳನ್ನು ಹಿಡಿದು ಮತ್ತೆ ಮತ್ತೆ ನ್ಯಾಯಾಲಯದ ಮೆಟ್ಟಲೇರುತ್ತಿವೆ, ಪ್ರಚಾರ ಮಾಡುತ್ತಿವೆ.
ಓಕ್ ಸ್ವತಃ ತಾಜ್‌ಮಹಲ್ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು. ಆಗ ಅವರ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯವು, ಅವರ ಬಟ್ಟೆಯೊಳಗೆ ಜೇನುನೊಣ ಹೊಕ್ಕಿದೆ ಎಂದು ತಮಾಷೆ ಮಾಡಿತ್ತು. ಇಂದೂ ಕೂಡಾ ಬಟ್ಟೆಯೊಳಗೆ ಕೋಮುವಾದ, ಪೊಳ್ಳು ರಾಷ್ಟ್ರೀಯತೆ, ಉಗ್ರವಾದದಂತಾ ಹಲವಾರು ಜೇನುನೊಣಗಳು ಹೊಕ್ಕಂತೆ ವರ್ತಿಸುತ್ತಿರುವ ಸಂಘಪರಿವಾರದವರು, ತಮ್ಮ ಗುರು ಓಕ್ ಅವರಿಂತಲೂ ಹುಚ್ಚಾಗಿ ವರ್ತಿಸುತ್ತಿದ್ದಾರೆ. ಒಂದೇ ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುವ ಗೊಬೆಲ್ಸ್ ತಂತ್ರವನ್ನು ವಿಫಲಗೊಳಿಸಲು- ನಿರಂತರವಾಗಿ ಈ ಸುಳ್ಳುಗಳನ್ನು ಬಯಲುಗೊಳಿಸಬೇಕಾಗಿದೆ. ಸಾಮಾನ್ಯ ಜನರು ವ್ಯವಸ್ಥಿತ ಮತ್ತು ಆಕರ್ಷಕವಾದ ಕಟ್ಟುಕತೆಗಳನ್ನು ಸುಲಭವಾಗಿ ನಂಬುವುದರಿಂದ ಇದನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ.