ಅರಿವಿನಿ ಉನ್ನತೀಕರಣದ ಚಲನೆಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳದೆ ಹೋದರೆ ನ್ಯಾಯಪೀಠವೂ ಜಡಗೊಂಡಿದೆ ಎಂದರ್ಥ ಅಷ್ಟೆ. ಇದು ಬಹುದೊಡ್ಡ ಅಪಾಯಕಾರಿ. ಎಷ್ಟೋ ಬಾರಿ ಇಂತಹ ಉದಾಹರಣೆಗಳು ಸಿಗುತ್ತಲೆ ಇವೆ – ಎನ್ ರವಿಕುಮಾರ್, ಪತ್ರಕರ್ತರು
ಒಂದು ಹಳ್ಳಿಯಲ್ಲಿ ಊರು- ಕೇರಿ ಗಳಿರುತ್ತವೆ. “ಊರು-ಕೇರಿ” ಎಂದು ಕರೆಯುವುದರಲ್ಲೆ ಜಾತಿವ್ಯವಸ್ಥೆಯ ಅಭಿವ್ಯಕ್ತಿ ಅಡಗಿದೆ.
ಒಂದು ಹಳ್ಳಿಯ ಸಾಮಾಜಿಕ ಸಂರಚನೆ ಜಾತಿ ಆಧಾರವಾಗಿಯೇ ರೂಪಿಸಲ್ಪಟ್ಟಿರುತ್ತದೆ.
ಅಲ್ಲಿ ಊರು,ಕೇರಿ, ಹಟ್ಟಿ,ತಾಂಡಾ…..ಹೀಗೆ ವಿಂಗಡಿಸಲ್ಪಟ್ಟಿರುತ್ತವೆ.
ಹಳ್ಳಿಯ ಪ್ರಧಾನ ಧಾರೆಯಲ್ಲಿ ಕಾಣುವಂತೆ “ಊರೊಳಗೆ” ಇರುತ್ತದೆ.
ಈ ಊರಲ್ಲಿ
ಬ್ರಾಹ್ಮಣರು
ಲಿಂಗಾಯಿತರು
ಒಕ್ಕಲಿಗರು…
ಇತ್ಯಾದಿ ಜಾತಿಶ್ರೇಷ್ಠತೆಯ ವರ್ಗದ ಜನರಿದ್ದರೆ
ಉಳಿದಂತೆ ಊರಿನ ಹಿಂಭಾಗಕ್ಕೋ ಅಥವಾ ಪಕ್ಕಕ್ಕೋ ಶ್ರೇಣಿಕೃತವಾಗಿ
ಕುಂಬಾರರ ಕೇರಿ
ಅಗಸರ ಬೀದಿ
ತಳವಾರರ ಕೇರಿ
ತಾಂಡಾ
ಹೊಲಗೇರಿ
ಮಾದಿಗರಟ್ಟಿ…ಇತ್ಯಾದಿ ಶೂದ್ರ- ಅಸ್ಪೃಶ್ಯಜಾತಿಗಳೆಂದು ಗುರುತಿಸಲ್ಪಟ್ಟವರನ್ನಿಡಲಾಗಿರುತ್ತದೆ
( ಪಟ್ಟಣ- ನಗರಗಳಲ್ಲಿ ಕೊಳಗೇರಿಗಳಿರುತ್ತವೆ)
ಬಾವಿ, ಬೋರ್ ವೆಲ್ ಗಳು ಊರೊಳಗಿದ್ದಿದ್ದರಿಂದ ಹಟ್ಟಿ, ಕೇರಿಯ ಮಂದಿ ಊರಿನವರ ಅನುಮತಿ ಪಡೆದು ನೀರಿಡಿಯಬೇಕೆಂಬ ಕಡ್ಡಾಯ ಕಠಿಣ ನಿಯಮಗಳು ಇದ್ದವು.
“ಊರೊಳಗೆ” ಹೋಗಲು ಒಂದು ರಾಜಮಾರ್ಗ ಇರುತ್ತದೆ. ಅದಕ್ಕೊಂದು ದ್ವಾರಬಾಗಿಲು ಕೂಡ ಇರುತ್ತದೆ. ಸಲೀಸಾಗಿ ಊರೊಳಗಿನ ಜಾತ್ಯಸ್ತರು ನಡೆದುಕೊಂಡೊ ,ತಮ್ಮ ವಾಹನಗಳ ಮೂಲಕವೋ ಮನೆಗೆ ತಲುಪಬಹುದು.
ಇನ್ನುಳಿದಂತೆ ಕೇರಿ, ಹಟ್ಟಿಗಳಿಗೆ ಹೋಗಲು ಗಿಡಗೆಂಟೆ,ಮುಳ್ಳುಮೆಳೆಯ ಮಗ್ಗಲು ದಾರಿಯಲ್ಲಿ ಆ ಜನ ಪಾದ ಗಾಯಗೊಂಡೇ ಜೋಪಡಿಗಳ ಸೇರಿಕೊಳ್ಳಬೇಕು. ( ಈಗ ಬದಲಾಗಿದೆ. ಈ ಹಟ್ಟಿಗಳಿಗೆ ಕಾಂಕ್ರೀಟ್ ರಸ್ತೆಗಳು ಬಂದಿವೆ. ಸೌಲತ್ತುಗಳಿದ್ದರೂ ಇವುಗಳು ಪ್ರತ್ಯೇಕವಾಗಿಯೇ ಉಳಿದುಕೊಂಡಿವೆ!)
ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿ ಪೋಷಿಸಿಕೊಂಡು ಬಂದವರೇ ಅಸ್ಪೃಶ್ಯ ಜಾತಿಗಳನ್ನು ನಿಂದಿಸಲೆಂದೆ ಗಾದೆಗಳನ್ನು ಕಟ್ಟಿದವರು. ಅದು ಎಷ್ಟರ ಮಟ್ಟಿಗೆ ಪ್ರಚಲಿತವೆಂದರೆ ಅಸ್ಪೃಶ್ಯ ,ದುರ್ಬಲ ಜಾತಿಗಳು ತಮಗರಿವಿಲ್ಲದೆ ಅಥವಾ ಅಂತಹ ಗಾದೆಗಳ ಹಿನ್ನಲೆ ಅರ್ಥಮಾಡಿಕೊಳ್ಳದೆ ತಾವೇ ಬಳಸಿಕೊಳ್ಳುತ್ತಾ ಬಂದಿವೆ.
ಆದರೆ ಕಾಲಘಟ್ಟದ ಗೋಡೆಯಿಂದ ಜಿಗಿದು ನೋಡುವಾಗ ತನ್ನಂತೆ ಇರುವ ಮನುಷ್ಯರನ್ನು ಮನುಷ್ಯರೇ ಲೇವಡಿ ಮಾಡುವ , ಅವಮಾನಿಸುವ ಗಾದೆಗಳನ್ನೂ ವರ್ತಮಾನದಲ್ಲೂ ಬಳಸುವುದು ಅನಾಗರೀಕತೆಯ ಸಂಕೇತ. ಇಂತಹ ಗಾದೆಗಳ ಸೃಷ್ಟಿ ಮತ್ತು ಮುಂದುವರೆಸುವ ಉದ್ದೇಶವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಈ ಸಮಾಜದ ಭಾಗವೇ ಆಗಿರುವ ಕಲಾವಿದರು, ನಟರು, ಪತ್ರಕರ್ತರು, ಕವಿಗಳು, ರಾಜಕಾರಣಿಗಳು, ಪೊಲೀಸರು ಅದಕ್ಕಿಂತ ಮುಖ್ಯವಾಗಿ “ನ್ಯಾಯಾಧೀಶ” ರುಗಳು ನಮ್ಮ ಸಾಮಾಜಿಕ ಸಂರಚನೆಯನ್ನು ಆಳವಾಗಿ ತಿಳಿದುಕೊಳ್ಳಬೇಕು. ಮತ್ತು ಸಂವಿಧಾನದ ಬೆಳಕಲ್ಲಿ ಪ್ರತಿಯೊಬ್ಬ ಪ್ರಜೆಯ ಘನತೆ-ನ್ಯಾಯ – ಸಮಾನತೆಯನ್ನು ಎತ್ತಿಹಿಡಿಯಬೇಕಾಗುತ್ತದೆ.
1976ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದುಪಡಿ ತರುವ ಮೂಲಕ ಸೇರಿಸಲ್ಪಟ್ಟ ಮೂಲಭೂತ ಕರ್ತವ್ಯಗಳಲ್ಲಿ ” ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆ ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು” ಒಂದಾಗಿದೆ. ಇದು ನ್ಯಾಯನಿರ್ಣಯಿಸುವ ಪೀಠಗಳಲ್ಲಿರುವವರಿಗೂ ಅನ್ವಯವಾಗುತ್ತೆ ಎಂಬುದನ್ನು ಪ್ರತ್ಯೇಕ ವಾಗಿ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ. ಇಲ್ಲದೆ ಹೋದರೆ ಯಾವುದೇ ಒಂದು ಸಮುದಾಯದ ನಿಂದನೆಯನ್ನು ಕೇವಲ ಒಂದು” ಗಾದೆ” ಯಷ್ಟೆ ಎಂದು ತಳ್ಳಿ ಹಾಕುವ ಮೂಲಕ ಮನುಷ್ಯ ಸಮುದಾಯದ ಅವಮಾನವನ್ನು ಸ್ಥಿರೀಕರಿಸಿಬಿಟ್ಟಂತಾಗುತ್ತದೆ.
ಅರಿವಿನಿ ಉನ್ನತೀಕರಣದ ಚಲನೆಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳದೆ ಹೋದರೆ ನ್ಯಾಯಪೀಠವೂ ಜಡಗೊಂಡಿದೆ ಎಂದರ್ಥ ಅಷ್ಟೆ. ಇದು ಬಹುದೊಡ್ಡ ಅಪಾಯಕಾರಿ. ಎಷ್ಟೋ ಬಾರಿ ಇಂತಹ ಉದಾಹರಣೆಗಳು ಸಿಗುತ್ತಲೆ ಇವೆ..
ಎನ್ ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು