ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಎರಡು ದಿನ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ನಗರ ಮತ್ತು ತಾಲೂಕಿನ ಸರ್ಕಾರಿ, ಅನುದಾನಿತ ಶಾಲೆಗಳು, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಬೆಳಗಾವಿ ನಗರದಲ್ಲಿ ಡಿಸೆಂಬರ್ 26 ಹಾಗೂ ಡಿಸೆಂಬರ್ 27ಕ್ಕೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯರು, ಸ್ಟಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಂಭವವಿರುವ ಕಾರಣ ಶಾಲಾಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿ.ಎನ್.ಎಸ್.ಎಸ್) 2023 ರ ಕಲಂ 163 ರಡಿಯಲ್ಲಿ ರಜೆ ಘೋಷಿಸಲಾಗಿದೆ.
ಈ ರಜೆ ಕೇವಲ ಬೆಳಗಾವಿ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದು ಉಳಿದಂತೆ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಎಂದಿನಂತೆ ಪಠ್ಯ ಚಟುವಟಿಕೆಗಳು ನಡೆಯಲಿವೆ.