ಹಾಂಗ್‌ಕಾಂಗ್: ಹಾಂಗ್‌ಕಾಂಗ್‌ನ ಥಾಯ್‌ಪೋ ಜಿಲ್ಲೆಯಲ್ಲಿ ಬುಧವಾರ ಎಂಟು 35 ಅಂತಸ್ತಿನ ವಸತಿ ಕಟ್ಟಡಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು 36 ಮಂದಿ ಮರಣಿಸಿ, 279 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ತಿಳಿಸಿದೆ.
ಬೆಂಕಿ ವ್ಯಾಪಿಸಿದ ಫ್ಲಾಟ್‌ಗಳಲ್ಲಿ ಇನ್ನೂ ಅನೇಕ ಮಂದಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಎಂಟು ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದ್ದು, ಇದುವರೆಗೆ ಕೇವಲ ಒಂದು ಕಟ್ಟಡದ ಬೆಂಕಿಯನ್ನು ಮಾತ್ರ ನಂದಿಸಲಾಗಿದೆ ಎಂದು ತಿಳಿಸಿದೆ.
ದುರಸ್ತಿಗಾಗಿ ಕಟ್ಟಡದ ಮೇಲೆ ಬಿದಿರಿನ ಕೋಲುಗಳನ್ನು ಅಳವಡಿಸಲಾಗಿತ್ತು, ಈ ಕಾರಣದಿಂದಾಗಿ ಬೆಂಕಿ ಶೀಘ್ರವಾಗಿ ಹರಡಿದೆ ಎಂದು ಹೇಳಿದೆ. ಈ ಎಸ್ಟೇಟ್ ಅನ್ನು ಈ ವಾಂಗ್ ಫುಕ್ ಕೋರ್ಟ್ ಕಾಂಪ್ಲೆಕ್ಸ್ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ಒಟ್ಟು 1984 ಫ್ಲಾಟ್‌ಗಳಿದ್ದು, ಸುಮಾರು 4,000 ಜನರು ಇಲ್ಲಿ ವಾಸಿಸುತ್ತಿದ್ದಾರೆ.
ಈ ಕಾಂಪ್ಲೆಕ್ಸ್‌ನಲ್ಲಿ ವಾಸಿಸುತ್ತಿರುವವರಿಗಾಗಿ ತಾತ್ಕಾಲಿಕ ಆಶ್ರಯ ತಾಣಗಳನ್ನು ಏರ್ಪಡಿಸಿರುವ ಹಾಂಗ್‌ಕಾಂಗ್ ಸರ್ಕಾರ, ನಿರಾಶ್ರಿತರನ್ನು ಅಲ್ಲಿಗೆ ಸ್ಥಳಾಂತರಿಸುತ್ತಿದೆ.
