ಮಂಗಳೂರು: “ಮಂಗಳೂರು ವಿವಿಯ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆಯಲಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಎಂಆರ್ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು,” ಎಂದು ಉಪ ಕುಲಪತಿ ಡಾ. ಪಿ ಎಲ್ ಧರ್ಮ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇವರು, “ಘಟಿಕೋತ್ಸವದಲ್ಲಿ Research and Information System for Developing Countries (RIS)ನ ಮಹಾ ನಿರ್ದೇಶಕರು ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದು, ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿ ಥಾವರ್ ಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಭಾಗವಹಿಸಲಿದ್ದಾರೆ,” ಎಂದು ತಿಳಿಸಿದ್ದಾರೆ.
ಉದ್ಯಮಿಗಳಿಗೆ ಗೌ.ಡಾ ಪದವಿ?
ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ನೀಡಲಿದೆ. ವಿವಿಯ ಮುಂದೆ ಬಂದಿರುವ ಒಟ್ಟು 15 ಪ್ರಸ್ತಾಪಗಳಲ್ಲಿ ಎಂಆರ್ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ – ಮೂವರಿಗೆ ಈ ಗೌರವ ನೀಡಲಾಗುತ್ತಿದೆ.
ಉದ್ಯಮಿಗಳಿಗೆ ಈ ಪದವಿಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಹಾಗಾದರೆ, ಈ ಸಾವಿರ ಕೋಟಿ ವ್ಯವಹಾರಗಳುಲ್ಲ ಮೂವರು ಉದ್ಯಮಿಗಳು ಗೌರವ ಡಾಕ್ಟರೇಟ್ ಗಾಗಿ ಸ್ವತಹ ಅರ್ಜಿ ಸಲ್ಲಿಸಿದರೆ !, ಅಥವಾ ಅವರ ಸ್ಥಳೀಯ ಚಮಚಾ ರಾಜಕಾರಣಿಗಳು ಅರ್ಜಿ ತುಂಬಿದರೆ ? ಅರ್ಜಿ ಸಲ್ಲಿಸಿ ಗೌರವ ಡಾಕ್ಟರೇಟ್ ಪಡೆಯುವ ಅಗತ್ಯ ಸರಕಾರಗಳನ್ನೇ ಕುಣಿಸಬಲ್ಲ ಇಂತಹ ದೊಡ್ಡ ಉದ್ಯಮಿಗಳಿಗೆ ಏನಿತ್ತು? ಕುಲಪತಿ ಧರ್ಮ ಅವರ ಹೇಳಿಕೆ ಈ ಉದ್ಯಮಿಗಳಿಗೆ ದೊಡ್ಡ ಅವಮಾನವಲ್ಲವೆ ? ಸಮಾಜದಲ್ಲಿ ದೊಡ್ಡ ಹೆಸರಿರುವ ಈ ಉದ್ಯಮಿಗಳು ಇಂತಹ ಗೌರವ ಕಳೆದು ಕೊಂಡಿರುವ ಡಾಕ್ಟರೇಟ್ ಅನ್ನು ತಿರಸ್ಕರಿಸಿ ತಮ್ಮ ಗೌರವವನ್ನು ಕಾಪಾಡಿಕೊಳ್ಳಲಿ. ಮಂಗಳೂರು ವಿ ವಿ ಯಾವುದೋ ಖಾಸಗಿ ಫೇಕ್ ವಿ ವಿ ಮಟ್ಟಕ್ಕೆ ಇಳಿದಿರುವುದು ದುಃಖ ಉಂಟು ಮಾಡಿದೆ,” ಎಂದು ಹೇಳಿದ್ದಾರೆ.
1986 ರಲ್ಲಿ ಮಂಗಳೂರು ವಿವಿ ತೆಲುಗು ಸಿನೇಮಾ ನಿರ್ಮಾಪಕ ಸುಬ್ಬ ರಾಮ ರೆಡ್ಡಿಯವರಿಗೆ ಗೌರವ ಡಾಕ್ಟರೇಟ್ ನೀಡುವಾಗ ಮಂಗಳೂರಿನಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಮಂಗಳೂರಿನ ಜನಪರ ಸಂಘಟನೆಗಳು, ಪ್ರಜ್ಞಾವಂತರು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ರ ನಾಯಕತ್ವದಲ್ಲಿ ಟೌನ್ ಹಾಲ್ ಮುಂಭಾಗ ಕತ್ತೆಯ ಕೊರಳಿಗೆ “ಗೌರವ ಡಾಕ್ಟರೇಟ್” ಎಂಬ ಫಲಕ ಹಾಕಿ ಪ್ರತಿಭಟನೆ ನಡೆಸಿದ್ದರು.
“ಆ ಪ್ರತಿಭಟನೆಯಲ್ಲಿ ಆಗಿನ್ನು ಬಿಸಿ ರಕ್ತದ ತರುಣರಾಗಿದ್ದ ಈಗಿನ ಮಂಗಳೂರು ವಿ ವಿ ಉಪಕುಲಪತಿ ಡಾ. ಪಿ ಎಲ್ ಧರ್ಮ ಭಾಗಿಯಾಗಿದ್ದರು. ಈಗ ಇದೇ ಧರ್ಮರವರು ನಾಡಿನ ಮೂವರು ಅತಿ ದೊಡ್ಡ ಶ್ರೀಮಂತರಿಗೆ ತಮ್ಮ ಮೊದಲ ಅವಧಿಯಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಿದ್ದಾರೆ,” ಎಂದು ಮುನೀರ್ ಟೀಕಿಸಿದ್ದಾರೆ.