Home ಕ್ರೀಡೆ ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ಲಾರಿ ಡಿಕ್ಕಿಯಾಗಿ ದ್ವಿತೀಯ ಪಿಯು ವಿದ್ಯಾರ್ಥಿನಿ ದಾರುಣ ಅಂತ್ಯ

ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ಲಾರಿ ಡಿಕ್ಕಿಯಾಗಿ ದ್ವಿತೀಯ ಪಿಯು ವಿದ್ಯಾರ್ಥಿನಿ ದಾರುಣ ಅಂತ್ಯ

0

ಹಾಸನ: ನಗರದಲ್ಲಿ ಪೊಲೀಸರ ನಿರ್ಲಕ್ಷ್ಯ ಹಾಗೂ ಲಾರಿ ಚಾಲಕನ ಅಜಾಗರೂಕತೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಬಲಿಯಾಗಿದ್ದು, ಮತ್ತೊಬ್ಬಳು ತೀವ್ರ ಗಾಯಗೊಂಡಿರುವ ಭೀಕರ ಘಟನೆ ನಗರದ ವಿಶ್ವಕರ್ಮ ವೃತ್ತದ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯನ್ನು ಲಿಖಿತಾ ಎಂದು ಗುರುತಿಸಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿ ಚಿನ್ಮಯಿ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ದಿನದಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಲಿಖಿತಾ, ತದನಂತರ ಗೆಳತಿ ಚಿನ್ಮಯಿ ಅವರ ಸ್ಕೂಟರ್‌ನಲ್ಲಿ ಸಿಟಿಗೆ ಬಂದಿದ್ದರು. ಚಿನ್ಮಯಿ ಸ್ಕೂಟರ್ ಚಲಾಯಿಸುತ್ತಿದ್ದು, ಹಾಸನದ ಬಸ್ ನಿಲ್ದಾಣದ ಕಡೆಯಿಂದ ಡೈರಿ ಕಡೆಗೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಅತಿವೇಗವಾಗಿ ಬಂದ ಹತ್ತು ಚಕ್ರದ ಭಾರೀ ಲಾರಿಯೊಂದು ಸ್ಕೂಟರ್‌ಗೆ ನೇರವಾಗಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಿಖಿತಾ ಸ್ಥಳದಲ್ಲೇ ಅಂತಿಮ ಉಸಿರೆಳೆದಿದ್ದರೆ, ಚಿನ್ಮಯಿ ಅವರಿಗೆ ತೀವ್ರ ಗಾಯಗಳಾಗಿವೆ.

ಸ್ಥಳದಲ್ಲಿ ಮುಗಿಲು ಮುಟ್ಟಿದ ಆಕ್ರಂದನ, ಸಾರ್ವಜನಿಕರ ಆಕ್ರೋಶ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತಳ ಪೋಷಕರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತಕ್ಕೆ ಲಾರಿ ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ್ದೇ ಪ್ರಮುಖ ಕಾರಣ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗದಲ್ಲಿ ಮತ್ತಷ್ಟು ಭಾರೀ ತೂಕದ ಲಾರಿಗಳು ಸಂಚರಿಸಿದ್ದನ್ನು ಕಂಡ ಜನರು ರೊಚ್ಚಿಗೆದ್ದಿದ್ದಾರೆ. ನಗರದ ಒಳಗೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಇಷ್ಟೊಂದು ದೊಡ್ಡ ತೂಕದ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಿದ್ದೇಕೆ? ಅಮಾಯಕರ ಜೀವ ಹೋದರೆ ಯಾರು ಹೊಣೆ ಎಂದು ನೂರಾರು ಸಾರ್ವಜನಿಕರು ಪೊಲೀಸರ ವಿರುದ್ಧ ವಾಗ್ವಾದ ನಡೆಸಿ ಕಿಡಿಕಾರಿದ್ದಾರೆ.

ಸರಿಯಾದ ಸಂಚಾರಿ ಸಿಗ್ನಲ್‌ಗಳಿಲ್ಲದಿರುವುದು, ಸಂಚಾರ ಫಲಕಗಳ ಅಭಾವ ಹಾಗೂ ಪೊಲೀಸರ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ಹೊರಹಾಕಿರುವ ಸಾರ್ವಜನಿಕರು, ನಗರದೊಳಗೆ ಬೃಹತ್ ಲಾರಿಗಳ ಸಂಚಾರಕ್ಕೆ ತಕ್ಷಣವೇ ತಡೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

You cannot copy content of this page

Exit mobile version