ಪೋರ್ಟ್ ಆಫ್ ಸ್ಪೇನ್: ಏಕದಿನ ಕ್ರಿಕೆಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ದ 3-0 ಅಂತರದ ಕ್ಲೀನ್‌ಸ್ವೀಪ್ ಜಯಸಾಧಿಸಿದ ಭಾರತೀಯ ಕ್ರಿಕೆಟ್ ತಂಡ.
ಮಳೆ ಬಾಧಿತ ಅಂತಿಮ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 119 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.1983ರಲ್ಲಿ ಕೆರಿಬಿಯನ್ನರ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಲು ಪ್ರಾರಂಭಿಸಿದ ನಂತರ ಇಲ್ಲಿಯವರೆಗೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಿರಲಿಲ್ಲ, ಆದರೆ ಈಗ ಧವನ್ ಪಡೆ ಅದನ್ನು ಸಾಧಿಸಿದ್ದು, ಭರ್ಜರಿಯಾಗಿ ಗೆಲ್ಲುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ಮಳೆ ಅಡ್ಡಿಪಡಿಸಿತ್ತು, ಹಾಗಾಗಿ ಮೊದಲು ಪಂದ್ಯವನ್ನು 40 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಭಾರತ 36 ಓವರ್ ಪೂರೈಸಿದ್ದಾಗ ಪುನಃ ಮಳೆ ಬಂದ ಕಾರಣ ಪಂದ್ಯವನ್ನು ಅಷ್ಟಕ್ಕೆ ಸೀಮಿತಗೊಳಿಸಲಾಯಿತು. ಆಗ 98 ರನ್ ಗಳಿಸಿದ್ದ ಶುಭ್‌ಮನ್ ಗಿಲ್ ಮಳೆಯಿಂದಾಗಿ ಶತಕಗಳಿಸುವುದರಿಂದ ವಂಚಿತರಾದರು. ಗಿಲ್, ಧವನ್, ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 36 ಓವರ್ ಗಳಲ್ಲಿ 225 ರನ್ ಗಳಿಸಿತು.ನಂತರ ಇನ್ನಿಂಗ್ಸ್ ಅಷ್ಟಕ್ಕೆ ಅಂತ್ಯಗೊಂಡಿತು.
ಡಿಎಲ್‌ಎಸ್ ನಿಯಮದಂತೆ ವೆಸ್ಟ್ ಇಂಡೀಸ್ ತಂಡ ಗೆಲುವಿಗಾಗಿ 35 ಓವರ್ ಗಳಲ್ಲಿ 257 ರನ್ ಗಳಿಸಬೇಕಾಗಿತ್ತು. ಆದರೆ ಭಾರತದ ಬೌಲಿಂಗ್ ದಾಳಿಗೆ ಬೆದರಿದ ವೆಸ್ಟ್ ಇಂಡೀಸ್ 137 ರನ್ ಗಳಿಸಿ ಆಲೌಟ್ ಆಯಿತು. ಯುಜುವೇಂದ್ರ ಚಾಹಲ್ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಹಾಗಾಗಿ ಸರಣಿಯ ಕೊನೆ ಪಂದ್ಯವನ್ನು 119 ರನ್‌ಗಳ ಭಾರಿ ಅಂತರದಿಂದ ಗೆದ್ದ ಟೀಮ್ ಇಂಡಿಯಾ ಹೊಸ ದಾಖಲೆ ನಿರ್ಮಿಸಿದೆ.ಈ ಮೂಲಕ ಶುಭಮನ್ ಗಿಲ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು.