Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಹೊಸ ಪೆನ್ಸಿಲ್‌ ಕೇಳಿದರೆ ಅಮ್ಮನಿಂದ ಪೆಟ್ಟು:ಪ್ರಧಾನಿಗೆ ಪತ್ರ ಬರೆದ 6 ವರ್ಷದ ಕೃತಿ

ಹೊಸ ಪೆನ್ಸಿಲ್‌ ಕೇಳಿದರೆ ಅಮ್ಮನಿಂದ ಪೆಟ್ಟು:ಪ್ರಧಾನಿಗೆ ಪತ್ರ ಬರೆದ 6 ವರ್ಷದ ಕೃತಿ

0

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯ 6 ವರ್ಷದ ಪುಟ್ಟ ಬಾಲಕಿ ಕೃತಿ ದುಬೆ ಅಮ್ಮ ಹೊಡೆಯುತ್ತಾಳೆಂದು  ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾಳೆ.

 ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು ದೇಶದ ಕೆಳ & ಮಧ್ಯಮ ವರ್ಗದವರಿಗೆ ಅದರ ಬಿಸಿ ತಟ್ಟುತ್ತಿದ್ದು ಇದೀಗ ಮಕ್ಕಳಿಗೂ ಬೆಲೆ ಏರಿಕೆಯಿಂದ ಅವರಿಗಾಗುವ ಸಮಸ್ಯೆಗಳನ್ನ ಗುರುತಿಸಿಕೊಳ್ಳುವಂತಾಗಿದೆ. ಹೀಗಿರುವಾಗ ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯ ಛಿಬ್ರಮೌ ಪಟ್ಟಣದಲ್ಲಿರುವ 1ನೇ ತರಗತಿಯ ಕೃತಿ ದುಬೆ ಎಂಬ 6 ವರ್ಷದ ಬಾಲಕಿಯೊಬ್ಬಳು ಹಣದುಬ್ಬರದಿಂದ ತನಗಾಗುತ್ತಿರುವ ಸಂಕಷ್ಟವನ್ನು ನೇರವಾಗಿ ಪ್ರಧಾನಿ ಮೋದಿಯವರಿಗೆ ಪತ್ರದ ಮುಖಾಂತರ ತಿಳಿಸಿ ಗಮನ ಸೆಳೆದಿದ್ದಾಳೆ. ಆ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದಿಯಲ್ಲಿ ಬರೆದಿರುವ ಈ ಪತ್ರದಲ್ಲಿ ನಮಸ್ಕಾರ ಮೋದಿಜಿ, “ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನಗೆ ಬೇಕಾದ ಪೆನ್ಸಿಲ್‌, ರಬ್ಬರ್‌ನ ಜೊತೆಗೆ ನನಗೆ ತುಂಬಾ ಇಷ್ಟವಾದ ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ಅಮ್ಮನಿಗೆ ಪೆನ್ಸಿಲ್, ರಬ್ಬರ್‌ ಕೇಳಿದ್ರೆ ಅವರು ಕೊಡಿಸಲಾಗದ್ದಕ್ಕೆ ನನ್ನ ಮೇಲೆ ರೇಗುತ್ತಾರೆ. ನನ್ನ ಜೊತೆ ಓದುವವರು ಪೆನ್ಸಿಲ್‌ ಕದಿಯುತ್ತಾರೆ, ಕಲಿಕೆಗೆ ಇವೆಲ್ಲಾ ಅಗತ್ಯ. ಪೆನ್ಸಿಲ್‌ ಇಲ್ಲದಾಗ ಅಮ್ಮನಿಗೆ ಕೇಳದೆ ನಾನೇನು ಮಾಡಲಿ’? ಎಂದು ಮುಗ್ಧವಾಗಿ ಮೋದಿಗೆ ಪ್ರಶ್ನಿಸಿದ್ದಾಳೆ.

ವಕೀಲರಾದ ಕೃತಿಯ ತಂದೆ ವಿಶಾಲ್‌ ದುಬೆ ಅವರು, ಇದು ನನ್ನ ಮಗಳ ʼಮನ್‌ ಕಿ ಬಾತ್‌ʼ, ಅವಳು ಪೆನ್ಸಿಲ್‌ ಕಳೆದುಕೊಂಡಾಗ ನನ್ನ  ಹೆಂಡತಿ ಅವಳನ್ನು ಬೈದಿದ್ದಕ್ಕೆ ಕೋಪಗೊಂಡು ಈ ರೀತಿಯ ಪತ್ರವನ್ನು ಬರೆದಿದ್ದಾಳೆ. ಹೆಚ್ಚಾದ ಹಣದುಬ್ಬರದಿಂದ ಮಕ್ಕಳೂ ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೀಗ ಬಾಲಕಿ ಬರೆದ ಪತ್ರ ಜಾಲತಾಣಗಳಲ್ಲಿ ಬಹಳ ವೈರಲ್‌ ಆಗಿದ್ದು ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೂ ಬಂದಿದೆ. ಆ ಮಗುವಿನ ಪತ್ರ, ಸಂಬಂಧ ಪಟ್ಟವರಿಗೆ ತಲುಪುವುದಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.        

You cannot copy content of this page

Exit mobile version