ಟರ್ಕಿಯಿಂದ ಭಾರತಕ್ಕೆ ತೆರಳುತ್ತಿದ್ದ ಸರಕು ಹಡಗನ್ನು (cargo ship) ಭಾನುವಾರ ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ಅಪಹರಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಹಡಗಿನ 25 ಸಿಬ್ಬಂದಿಯನ್ನು ಒತ್ತೆಯಾಳಾಗಿ ಈ ಸಂಘಟನೆ ವಶಪಡಿಸಿಕೊಂಡಿದೆ.
ಇಸ್ರೇಲ್ ಜೊತೆಗೆ ಈ ಹಡಗು ಸಂಪರ್ಕ ಹೊಂದಿದ್ದರಿಂದ ಇರಾನ್ ಬೆಂಬಲಿತ ಹೌತಿಗಳು (Houthi) ವಶಪಡಿಸಿಕೊಂಡಿದ್ದಾರೆ. ಗಾಝಾದ ಮೇಲಿನ ಇಸ್ರೇಲ್‌ನ ದಾಳಿ ಕೊನೆಯಾಗುವ ವರೆಗೆ ಅಂತರರಾಷ್ಟ್ರೀಯ ಸಮುದ್ರಮಾರ್ಗದಲ್ಲಿ ಇಸ್ರೇಲಿಗೆ ಸಂಬಂಧಿಸಿದ ಅಥವಾ ಅದರ ಒಡೆತನದ ಹಡಗುಗಳನ್ನು ಗುರಿಯಾಗಿಸುತ್ತೇವೆ ಎಂದು ಈ ಸಂಘಟನೆ ಹೇಳಿದೆ.
“ಇಸ್ರೇಲಿ ಹಡಗನ್ನು ವಶಮಾಡಿಕೊಂಡಿರುವುದು ಯೆಮೆನ್ ಸಶಸ್ತ್ರ ಪಡೆ ಕಡಲ ಯುದ್ಧವನ್ನು ನಡೆಸಲು ಹೊರಟಿರುವ ಪ್ರಾಯೋಗಿಕ ಹೆಜ್ಜೆ, ಇದು ಆರಂಭ ಅಷ್ಟೇ” ಎಂದು ಹೌತಿಗಳ ವಕ್ತಾರ ಮೊಹಮ್ಮದ್ ಅಬ್ದುಲ್-ಸಲಾಮ್ ಹೇಳಿದ್ದಾರೆ.
ಇಸ್ರೇಲಿ ರಕ್ಷಣಾ ಪಡೆ ತನ್ನ X ನಲ್ಲಿ ಈ ಅಪಹರಣವನ್ನು ದೃಢಪಡಿಸಿದ್ದು, ಇದನ್ನು “ಜಾಗತಿಕ ಪರಿಣಾಮ ಬೀರಬಲ್ಲ ಅತ್ಯಂತ ಗಂಭೀರ ಘಟನೆ” ಎಂದು ಕರೆದಿದೆ.
“ನೌಕೆಯು ಟರ್ಕಿಯಿಂದ ಭಾರತಕ್ಕೆ ಹೋಗುವ ದಾರಿಯಲ್ಲಿತ್ತು, ಇಸ್ರೇಲಿಗರು ಸೇರಿದಂತೆ ವಿವಿಧ ದೇಶದ ನಾಗರಿಕರು ಮತ್ತು ಸಿಬ್ಬಂದಿಗಳು ಇದ್ದರು. ಆದರೆ ಇದು ಇಸ್ರೇಲಿ ಹಡಗು ಅಲ್ಲ,” ಎಂದು ಇಸ್ರೇಲಿ ರಕ್ಷಣಾ ಪಡೆ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಈ ಅಪಹರಣವನ್ನು “ಇರಾನ್ ಭಯೋತ್ಪಾದನೆಯ ಕೃತ್ಯ” ಎಂದು ಖಂಡಿಸಿದೆ.
“ಇದು ಮುಕ್ತ ಪ್ರಪಂಚದ ನಾಗರಿಕರ (citizens of the free world) ವಿರುದ್ಧ ಇರಾನ್‌ನ ಆಕ್ರಮಣ, ಜಾಗತಿಕ ಕಡಲ ಮಾರ್ಗಗಳ ಸುರಕ್ಷತೆಯ ಮೇಲೆ ಅಂತರರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತದೆ” ಎಂದು ನೆತನ್ಯಾಹ ಕಚೇರಿ ಹೇಳಿದೆ.
ಈ ಹಡಗು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಜಪಾನಿನ ಸಂಸ್ಥೆಯೊಂದರಿಂದ ನಿರ್ವಹಿಸಲ್ಪಡುತ್ತದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ: ಇಸ್ರೇಲ್‌ನ ಶ್ರೀಮಂತರಲ್ಲಿ ಒಬ್ಬರಾದ ಅಬ್ರಹಾಂ “ರಾಮಿ” ಉಂಗಾರ್ (Abraham “Rami” Ungar) ಒಡೆತನದ ರೇ ಕಾರ್ ಕ್ಯಾರಿಯರ್ಸ್‌ಗೆ (Ray Car Carriers) ಹಡಗಿನ ಮಾಲೀಕರು ಸಂಬಂಧವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕ ಶಿಪ್ಪಿಂಗ್ ಡೇಟಾಬೇಸ್ ದಾಖಲೆಗಳು ತೋರಿಸುತ್ತವೆ.
ಗಾಜಾದ ಮೇಲಿನ ಇಸ್ರೇಲ್‌ನ ದಾಳಿ ಏಳನೇ ವಾರಕ್ಕೆ ಮುನ್ನುಗ್ಗುತ್ತಿದ್ದು, ಇದುವರೆಗೆ 13,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಅಕ್ಟೋಬರ್ 7 ರಂದು ಪ್ಯಾಲೇಸ್ತೇನಿ ಬಂಡುಕೋರ ಗುಂಪು ಹಮಾಸ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ನಡೆಸಲಾಗುತ್ತಿದೆ ಎಂದಿರುವ ಇಸ್ರೇಲ್, ಈ ದಾಳಿಯಲ್ಲಿ 1,200 ಇಸ್ರೇಲಿಗಳು ಹತರಾಗಿದ್ದರು.