ದೆಹಲಿ: ಮುಸ್ಲಿಮರಲ್ಲಿ ವಿಚ್ಛೇದನದ ವಿಷಯವನ್ನು ಸುಪ್ರೀಂ ಕೋರ್ಟ್ (Supreme Court) ಮತ್ತೊಮ್ಮೆ ಪರಿಶೀಲಿಸುತ್ತಿದೆ. ‘ತಲಾಖ್-ಎ-ಹಸನ್’ (Talaq-e-Hasan) ಎಂಬ ಟ್ರಿಪಲ್ ತಲಾಖ್ (Triple Talaq) ಪದ್ಧತಿಯ ಕಾನೂನುಬದ್ಧತೆಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಪ್ರಶ್ನಿಸಿದೆ.
ಈ ಪದ್ಧತಿಯ ಪ್ರಕಾರ, ಒಬ್ಬ ಮುಸ್ಲಿಂ ಪುರುಷನು ಸತತವಾಗಿ ಮೂರು ತಿಂಗಳ ಕಾಲ, ತಿಂಗಳಿಗೆ ಒಮ್ಮೆ ‘ತಲಾಖ್’ ಎಂದು ಹೇಳುವ ಮೂಲಕ ತನ್ನ ಹೆಂಡತಿಗೆ ವಿಚ್ಛೇದನ ನೀಡಬಹುದು. ಮುಸ್ಲಿಮರಲ್ಲಿ ಟ್ರಿಪಲ್ ತಲಾಖ್ (ತಲಾಖ್-ಎ-ಬಿದ್ಧತ್) ಅನ್ನು ಎಂಟು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ಆದರೆ ಟ್ರಿಪಲ್ ತಲಾಖ್‌ನ ಮತ್ತೊಂದು ರೂಪವಾದ ‘ತಲಾಖ್-ಎ-ಹಸನ್’ ನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಬುಧವಾರ ನಡೆಸಿತು.
“ಆಧುನಿಕ ಸಮಾಜದಲ್ಲಿ ಇದನ್ನು ಹೇಗೆ ಅನುಮತಿಸುತ್ತಿದ್ದೀರಿ?” ಎಂದು ನ್ಯಾಯಪೀಠವು ತೀಕ್ಷ್ಣವಾಗಿ ಪ್ರಶ್ನಿಸಿತು. ವಿಚ್ಛೇದನ ಪ್ರಕ್ರಿಯೆಯಲ್ಲಿ ಮಾಜಿ ಪತಿ ಸಹಿ ಮಾಡದ ಕಾರಣ, ತನ್ನ ಮಗುವಿನ ಶಾಲಾ ಪ್ರವೇಶಕ್ಕಾಗಿ ಒಬ್ಬ ಮುಸ್ಲಿಂ ಮಹಿಳೆ ಎದುರಿಸುತ್ತಿರುವ ತೊಂದರೆಯ ಪ್ರಕರಣವನ್ನು ಸಹ ನ್ಯಾಯಾಲಯವು ಪ್ರಸ್ತಾಪಿಸಿತು.
ಧಾರ್ಮಿಕ ಆಚರಣೆಯ ಪ್ರಕಾರ ತಲಾಖ್ ನಡೆಯಬೇಕಾದರೆ ನಿರ್ದಿಷ್ಟಪಡಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳುತ್ತಾ, ತನ್ನ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆ ಮಹಿಳೆಯನ್ನು ನ್ಯಾಯಾಲಯವು ಶ್ಲಾಘಿಸಿತು.
