Monday, June 24, 2024

ಸತ್ಯ | ನ್ಯಾಯ |ಧರ್ಮ

ಅರ್ಜಿಗಳು ಇಲ್ಲದೆ 27 ಲಕ್ಷ ಮತದಾರರ ಹೆಸರು ತೆಗೆದಿದ್ದು ಹೇಗೆ?: ಡಿಕೆಶಿ

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯುವುದಕ್ಕೆ ಅಥವಾ ಸೇರಿಸುವುದಕ್ಕೆ ಫಾರಂ 7 ಅತ್ಯಗತ್ಯ. ಅರ್ಜಿಗಳು ಇಲ್ಲದೆ 27 ಲಕ್ಷ ಹೆಸರು ತೆಗೆದಿದ್ದು ಹೇಗೆ? ಇವುಗಳಿಗೆ ಸಹಿ ಹಾಕಿದವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರಶ್ನಿಸಿ ಕಿಡಿಕಾರಿದ್ದಾರೆ.

ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿ ಕಳವು ಪ್ರಕರಣದ ಕುರಿತು ಮಂಗಳವಾರದಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ʼಬೇರೆ ಸಮಯದಲ್ಲಿ ಚಿಲುಮೆ ಸಂಸ್ಥೆಗೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ ಅವುಗಳಿಗೂ ಈ ಚುನಾವಣೆ ಪ್ರಕ್ರಿಯೆಗೂ ಬಹಳ ವ್ಯತ್ಯಾಸವಿದೆ. ಚುನಾವಣಾ ಆಯೋಗ ಅಧಿಕಾರಿಗಳ ಭೇಟಿಗೆ ಇಂದು ಸಮಯಾವಕಾಶ ಕೇಳಲಾಗಿತ್ತು. ಹಿರಿಯ ಅಧಿಕಾರಿ ಭೇಟಿ ಮಾಡಬೇಕಿದ್ದು, ಬುಧವಾರಕ್ಕೆಸಮಯ ನೀಡಿದ್ದಾರೆ. ಬುಧವಾರ ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ. ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8250 ಬೂತ್ ಗಳಿವೆ. ಪ್ರತಿ ಬೂತ್ ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, 7 ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿ ಮೇಲೂ ಪ್ರಕರಣ ದಾಖಲಿಸಬೇಕುʼ ಎಂದು ಹೇಳಿದ್ದಾರೆ.

ಒತ್ತಡದ ಮೇಲೆ ಈ ಕೆಲಸ ಮಾಡಿದ್ದೇವೆ ಎಂದು ಕೆಲವು ಬಂಧಿತ ಆರೋಪಿಗಳು ಹೇಳಿಕೆ ನೀಡಿರುವ ಸುದ್ದಿ ಬಗ್ಗೆ ಕೇಳಿದಾಗ, ‘ಈ ವಿಚಾರ ನನಗೆ ಗೊತ್ತಿಲ್ಲ. ಆತ ಕಳ್ಳತನ ಮಾಡಿದ್ದರೆ, ಅದನ್ನು ಮಾಡಿಸಿದವರು ಯಾರು? ಹೀಗೆ ಮಾಡಬೇಕು ಎಂದು ಹೇಳಿಕೊಟ್ಟವರು ಯಾರು? ಅಧಿಕಾರಿಯೊಬ್ಬರು ಮೇಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದು, ಈ ಮೇಲಾಧಿಕಾರಿಗಳು ಯಾರು? ನಾನಾ, ಸಿದ್ದರಾಮಯ್ಯನವರಾ, ಯಡಿಯರಪ್ಪನವರಾ, ಬೊಮ್ಮಾಯಿ ಅವರಾ? ಈ ವಿಚಾರ ತನಿಖೆಯಾಗಬೇಕು. ಆದರೆ ಇದು ಇವರಿಂದ ಸಾಧ್ಯವಿಲ್ಲ. ನಾವು ಎಲ್ಲವನ್ನೂ ಈಗಲೇ ಬಹಿರಂಗ ಮಾಡುವುದಿಲ್ಲ.  ದೂರು ಕೊಟ್ಟ ನಂತರ ಏನು ದೂರು ಕೊಟ್ಟಿದ್ದೇವೆ ಎಂದು ತಿಳಿಸುತ್ತೇವೆ ‘ ಎಂದರು.

Related Articles

ಇತ್ತೀಚಿನ ಸುದ್ದಿಗಳು