ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ನೀಡಿರುವ ಗಡುವುದು ಇದೇ ತಿಂಗಳ 30ಕ್ಕೆ ಮುಗಿಯಲಿದೆ. ಈ ಗಡುವು ಮುಗಿದ ನಂತರ ದಂಡ ವಿಧಿಸುವುದಾಗಿ ಇಲಾಖೆ ಎಚ್ಚರಿಕೆ ಕೊಟ್ಟಿದೆಯಾದರೂ HSRP ನಂಬರ್ ಪ್ಲೇಟ್ ಆಳವಡಿಸಬೇಕಿರುವ ವಾಹನಗಳ ಸಂಖ್ಯೆ ಲಕ್ಷದಲ್ಲಿದೆ.
HSRP ನಂಬರ್ ಪ್ಲೇಟ್ ಹಾಕಿಸಲು ಮೊದಲು ವಾಹನಗಳ ಮಾಲೀಕರು ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಕುರಿತು ಸಾರಿಗೆ ಇಲಾಖೆ ಈಗಾಗಲೇ ಸಾಕಷ್ಟು ಪ್ರಚಾರವನ್ನು ಮಾಡಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಸ್ಪಂದಿಸುತ್ತಿಲ್ಲ.
ಈ ಹಿಂದಿನ 8 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 35 ಲಕ್ಷ ವಾಹನಗಳು HSRP ನಂಬರ್ ಪ್ಲೇಟ್ ಆಳವಡಿಸಿಕೊಂಡಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ತಿಂಗಳು ಅಂದರೆ ಮೇ 31 ಕೊನೆಯ ದಿನಾಂಕವಾಗಿದ್ದರೂ ಸಾವಿರಾರು ಸರ್ಕಾರಿ ವಾಹನಗಳು ಸೇರಿದಂತೆ ಲಕ್ಷಾಂತರ ವಾಹನಗಳು ಇನ್ನಷ್ಟೇ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕಿದೆ.
ಒಂದೆಡೆ ಜನರು ಈಗಾಗಲೇ ಧಾವಂತದಿಂದ HSRP ನೋಂದಣಿಗೆ ಓಡಾಡುತ್ತಿದ್ದರೆ ಇನ್ನೊಂದಷ್ಟು ಜನರು ಈ ಗಡುವು ಮುಂದಕ್ಕೆ ಹೋಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಬುಕ್ ಮಾಡಿರುವವರಿಗೂ ನಂಬರ್ ಪ್ಲೇಟ್ ಬಂದಿಲ್ಲದ ಕಾರಣ ಜನರು ಆತಂಕಕ್ಕೆ ಒಳಗಾಗಿ ಕಾಯುತ್ತಿದ್ದಾರೆ.
ಈ ನಡುವೆ ಚುನಾವಣಾ ಮಾದರಿ ನೀತಿ ಸಂಹಿತೆ ಮುಗಿದ ಕೂಡಲೇ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ಜೂನ್ 4ನೇ ತಾರೀಖು ಚುನಾವಣಾ ಎಣಿಕೆ ಮುಗಿಯಲಿದ್ದು, ಅದರ ನಂತರ ಸರ್ಕಾರ ಜೂನ್ 6 ಅಥವಾ 7ಕ್ಕೆ ಈ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಿದೆ ಎನ್ನಲಾಗಿದೆ.