ಬೆಂಗಳೂರು: ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯಲ್ಲಿ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಚುನಾವಣಾ ಸಿದ್ಧತೆಗಳು ಚುರುಕುಗೊಂಡಿವೆ. ಇದರ ನಡುವೆಯೇ, ಐದು ನಗರಪಾಲಿಕೆಗಳ ವಾರ್ಡ್‌ಗಳಲ್ಲಿ ಮತದಾರರ ಅಸಮಾನ ಹಂಚಿಕೆ ಇರುವ ವಿಚಾರ ಬೆಳಕಿಗೆ ಬಂದಿದೆ.
ಕರಡು ಮತದಾರರ ಪಟ್ಟಿ ಬಿಡುಗಡೆ ಬಳಿಕ ನಡೆದ ಪರಿಶೀಲನೆಯಲ್ಲಿ, ಒಂದೊಂದು ವಾರ್ಡ್‌ನಲ್ಲೂ ಮತದಾರರ ಸಂಖ್ಯೆ ಭಿನ್ನವಾಗಿರುವುದು ಪತ್ತೆಯಾಗಿದೆ. ಇದರಿಂದ ‘ಒಬ್ಬ ವ್ಯಕ್ತಿ–ಒಂದು ಮತ’ ಎಂಬ ಮೂಲಭೂತ ಪ್ರಜಾಸತ್ತಾತ್ಮಕ ತತ್ವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪೂರ್ವ ನಗರಪಾಲಿಕೆಯ ಕೊತ್ತನೂರು ವಾರ್ಡ್ (ವಾರ್ಡ್ 16)ನಲ್ಲಿ ಕೇವಲ 10,926 ಮತದಾರರಿದ್ದರೆ, ಪಶ್ಚಿಮ ನಗರಪಾಲಿಕೆಯ ರಾಜರಾಜೇಶ್ವರಿನಗರ ವಾರ್ಡ್ (23)ನಲ್ಲಿ 49,530 ಮತದಾರರು ಇದ್ದಾರೆ. ಈ ವ್ಯತ್ಯಾಸವು ಕೆಲ ವಾರ್ಡ್‌ಗಳಲ್ಲಿ ಕಡಿಮೆ ಮತಗಳಿಂದಲೇ ಕಾರ್ಪೊರೇಟರ್ ಆಯ್ಕೆಯಾಗುವ ಸಾಧ್ಯತೆ ಇರುವುದನ್ನು ಸೂಚಿಸುತ್ತದೆ.
ಉತ್ತರ ನಗರಪಾಲಿಕೆಯಲ್ಲಿ ಅತಿಹೆಚ್ಚು ಅಸಮತೋಲನ ಕಂಡುಬಂದಿದ್ದು, ನಾಲ್ಕು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ 40 ಸಾವಿರ ದಾಟಿದರೆ, ಕೆಲ ವಾರ್ಡ್‌ಗಳಲ್ಲಿ 17 ಸಾವಿರಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ನಗರಪಾಲಿಕೆಯಲ್ಲಿ ಕೆಲವು ಚಿಕ್ಕ ವಾರ್ಡ್‌ಗಳಲ್ಲಿ 14 ಸಾವಿರ ಮತದಾರರು ಇದ್ದರೆ, ದೊಡ್ಡ ವಾರ್ಡ್‌ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮತದಾರರು ದಾಖಲಾಗಿದ್ದಾರೆ.
ಒಟ್ಟಾರೆ369 ವಾರ್ಡ್‌ಗಳಪೈಕಿ:
- 234 ವಾರ್ಡ್‌ಗಳಲ್ಲಿ 20–30 ಸಾವಿರ ಮತದಾರರು
- 88 ವಾರ್ಡ್‌ಗಳಲ್ಲಿ 10–20 ಸಾವಿರ ಮತದಾರರು
- 39 ವಾರ್ಡ್‌ಗಳಲ್ಲಿ 30–40 ಸಾವಿರ ಮತದಾರರು
- 8 ವಾರ್ಡ್‌ಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ
ಈ ಅಸಮಾನ ಹಂಚಿಕೆ ಚುನಾವಣಾ ಸಮಾನತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಗೆಲುವಿಗೆ ಹೆಚ್ಚಿನ ಸವಾಲು
ಹೆಚ್ಚು ಮತದಾರರಿರುವ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಕಾರ್ಪೊರೇಟರ್‌ಗಳು, ಕಡಿಮೆ ಮತದಾರರಿರುವ ವಾರ್ಡ್‌ಗಳಿಗಿಂತ ಹೆಚ್ಚಿನ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಜೆಟ್ ಹಂಚಿಕೆ, ಮೂಲಸೌಕರ್ಯ ಒದಗಿಕೆ ಹಾಗೂ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲೂ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ.
ನಗರಪಾಲಿಕೆವಾರುಪ್ರಮುಖ ಅಂಕಿ-ಅಂಶಗಳು:
- ಕೇಂದ್ರ ನಗರಪಾಲಿಕೆ (63 ವಾರ್ಡ್‌ಗಳು)
ಒಟ್ಟು ಮತದಾರರು: 14.2 ಲಕ್ಷ
ಕಡಿಮೆ: ಇಂದಿರಾನಗರ – 15,407
ಹೆಚ್ಚು: ಪಾದರಾಯನಪುರ – 32,898 - ಉತ್ತರ ನಗರಪಾಲಿಕೆ (72 ವಾರ್ಡ್‌ಗಳು)
ಒಟ್ಟು ಮತದಾರರು: 19.5 ಲಕ್ಷ
ಕಡಿಮೆ: ಜಾಲಹಳ್ಳಿ – 16,968
ಹೆಚ್ಚು: ಸಂಪಿಗೆಹಳ್ಳಿ – 45,892 - ಪೂರ್ವ ನಗರಪಾಲಿಕೆ (50 ವಾರ್ಡ್‌ಗಳು)
ಒಟ್ಟು ಮತದಾರರು: 10.4 ಲಕ್ಷ
ಕಡಿಮೆ: ಕೊತ್ತನೂರು – 10,926
ಹೆಚ್ಚು: ಕಲ್ಕೆರೆ – 35,678 - ದಕ್ಷಿಣ ನಗರಪಾಲಿಕೆ (72 ವಾರ್ಡ್‌ಗಳು)
ಒಟ್ಟು ಮತದಾರರು: 17.4 ಲಕ್ಷ
ಕಡಿಮೆ: ಜಯನಗರ (ಪೂರ್ವ) – 14,454
ಹೆಚ್ಚು: ಸುಬ್ರಮಣ್ಯಪುರ – 49,518 - ಪಶ್ಚಿಮ ನಗರಪಾಲಿಕೆ (112 ವಾರ್ಡ್‌ಗಳು)
ಒಟ್ಟು ಮತದಾರರು: 27.2 ಲಕ್ಷ
ಕಡಿಮೆ: ನೆಲಗದರನಹಳ್ಳಿ – 15,059
ಹೆಚ್ಚು: ಆರ್.ಆರ್.ನಗರ – 49,530
