Home ಅಂಕಣ ಕಮ್ಯುನಿಸಂ ಮತ್ತು ಹಾಗೇ ಉಳಿದ ಅಂಬೇಡ್ಕರರ ಪ್ರಶ್ನೆಗಳು

ಕಮ್ಯುನಿಸಂ ಮತ್ತು ಹಾಗೇ ಉಳಿದ ಅಂಬೇಡ್ಕರರ ಪ್ರಶ್ನೆಗಳು

0

“..ಭಾರತದ ಜಾತಿ ವ್ಯವಸ್ಥೆಯನ್ನು ಅರಿಯುವಲ್ಲಿ ಮತ್ತು ಸಮಸಮಾಜದ ತಮ್ಮ ಪರಿಕಲ್ಪನೆಯನ್ನು ಜಾತಿನಿರ್ಮೂಲನೆಗೆ ಒಗ್ಗಿಸಿಕೊಳ್ಳುವಲ್ಲಿ ಕಮ್ಯುನಿಷ್ಟರು ಸೋತಿದ್ದೆಲ್ಲಿ?..” ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಎತ್ತಿರುವ ಪ್ರಶ್ನೆಗಳ ಸುತ್ತ ಒಂದು ವಿಶ್ಲೇಷಣೆ.. ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ವಿಮರ್ಶೆಗೆ ಯಾರೂ ಅತೀತರಲ್ಲ. ಅದು ವ್ಯಕ್ತಿಯಾಗಿರಲಿ, ಪಕ್ಷವಾಗಿರಲಿ, ಸಿದ್ದಾಂತವಾಗಿರಲಿ. ಇತ್ತೀಚೆಗೆ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅವರು ಕೇರಳದ ಮಾಜಿ ಸಿಎಂ, ಕಮ್ಯುನಿಷ್ಟ್‌ ನಾಯಕ ವಿ.ಎಸ್‌. ಅಚ್ಯುತಾನಂದನ್‌ ಅವರಿಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿದ್ದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಪ್ರಶಸ್ತಿಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಬಿಜೆಪಿಯ ಕುತಂತ್ರವನ್ನು ಒಪ್ಪುತ್ತಲೇ, ಪ್ರಶಸ್ತಿಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕು ಇರುವುದು ಅವರ ಕುಟುಂಬಕ್ಕೆ ಮಾತ್ರ ಎಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮುಂದುವರೆದು, ಕೇರಳ ಕಮ್ಯುನಿಷ್ಟ್‌ ಪಕ್ಷದ ಜಾತಿ ಪ್ರಾತಿನಿಧ್ಯತೆಯ ನಡವಳಿಕೆಯನ್ನೂ ಅವರು ಓರೆಗಚ್ಚಿದ್ದರು. ಇದರ ವಿರುದ್ಧ ಕಮ್ಯುನಿಷ್ಟ್‌ ಒಡನಾಡಿಗಳು ತೀಕ್ಷ್ಣ ಪ್ರತಿಕ್ರಿಯೆಗೆ ಮುಂದಾಗಿದ್ದಾರೆ. 

ಮುಂಬರಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಬಿಜೆಪಿಯು ಅಚ್ಯುತಾನಂದನ್‌, ನಟ ಮುಮ್ಮಟಿ ತರಹದ ಮಾಸ್‌ಲೀಡರ್‍‌ ನಾಯಕರಿಗೆ ಪ್ರಶಸ್ತಿ ನೀಡಿರುವ ವಿಚಾರದಲ್ಲಿ ಯಾರಿಗೂ ಅನುಮಾನವಿಲ್ಲ. ಬಿಜೆಪಿಗೆ ಇದು ಹೊಸದೂ ಅಲ್ಲ. ಇದನ್ನು ಅಮೀನ್‌ಮಟ್ಟು ಅವರೂ ನಿರಾಕರಿಸುತ್ತಿಲ್ಲ, ಅವರಿಗೆ ಪ್ರತಿಕ್ರಿಯಿಸುತ್ತಿರುವವರೂ ನಿರಾಕರಿಸುತ್ತಿಲ್ಲ. ಇದೇ ಕಾರಣಕ್ಕಾಗಿ ಅವರ ಕುಟುಂಬ ಪ್ರಶಸ್ತಿಯನ್ನು ತಿರಸ್ಕರಿಸಿ, ಫ್ಯಾಸಿಸ್ಟ್ ಕುತಂತ್ರಕ್ಕೆ ತಿರುಗೇಟು ನೀಡಬೇಕೆಂದು ಕಮ್ಯುನಿಷ್ಟ್‌ ಮತ್ತು ಕೆಲವು ಪ್ರಗತಿಪರ ಒಡನಾಡಿಗಳು ಒತ್ತಾಯಿಸುತ್ತಿರುವ ಕಾಳಜಿ ಸ್ವೀಕಾರಾರ್ಹ. ಆದರೆ ಆ ಒತ್ತಾಯ ಅವರ ಕುಟುಂಬದ ಹಕ್ಕಿನ ಮೇಲೆ ಹೇರಿಕೆಯಾಗಬಾರದೆನ್ನುವ ಅಮೀನ್‌ಮಟ್ಟು ಅವರ ಡೆಮಾಕ್ರೆಟಿಕ್‌ ನೋಟವನ್ನು ನಾವಿಲ್ಲಿ ಕಡೆಗಣಿಸಲಾಗದು. ಇದೇ ಡೆಮಾಕ್ರೆಟಿಕ್‌ ಆಯಾಮವನ್ನು ಬಳಸಿಕೊಂಡು ಬಹಳಷ್ಟು ಕಮ್ಯುನಿಷ್ಟರು, ಪ್ರಗತಿಪರರು ಕಾಂಗ್ರೆಸ್‌ ಪಕ್ಷವನ್ನು ಕಾಲಕಾಲಕ್ಕೆ ಸತತವಾಗಿ ವಿಮರ್ಶಿಸಿಕೊಂಡು, ಟೀಕಿಸುತ್ತಾ ಬಂದಿದ್ದಾರೆ; ವಿರೋಧಪಕ್ಷಗಳ ಅಸ್ತಿತ್ವವನ್ನು ಗೌಣವಾಗಿಸುವ ಅಪಾಯಕಾರಿ ಜಿದ್ದಿಗೆ ಬಿಜೆಪಿ ಮುಂದಾಗಿರುವಂತಹ ಸಂದರ್ಭದಲ್ಲಿ ಅಂತಹ ಟೀಕೆಗಳು ಬಿಜೆಪಿಗೆ ಅಥವಾ ಬಲಪಂಥೀಯ ವಿಚಾರಧಾರೆಗೆ ಅನುಕೂಲವಾಗಬಹುದೆಂಬ ಅಪಾಯದ ಅರಿವಿದ್ದೂ ಕಾಂಗ್ರೆಸ್‌ನ ಪ್ರಸ್ತುತ ಮತ್ತು ಚಾರಿತ್ರಿಕ ತಪ್ಪುಗಳನ್ನು ವಿಮರ್ಶಿಸಲಾಗುತ್ತಿದೆ. ಅದು ಖಂಡಿತ ತಪ್ಪಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಟೀಕೆ, ವಿಮರ್ಶೆಗಳು ಇರಲೇಬೇಕು. ಆದರೆ ಈಗ ಬಲಪಂಥೀಯರಿಗೆ ಪೂರಕವಾಗಬಹುದೆಂಬ ಆತಂಕದಲ್ಲಿ ದಿನೇಶ್‌ ಅಮೀನ್‌ಮಟ್ಟು ಅವರಿಗಿರುವ ಡೆಮಾಕ್ರೆಟಿಕ್‌ ಅವಕಾಶವನ್ನು ಪ್ರಶ್ನೆ ಮಾಡಲು ಮುಂದಾಗುವುದು ನಮ್ಮ ದ್ವಂದ್ವವಲ್ಲವೇ?

ನಿಜ ಹೇಳಬೇಕೆಂದರೆ, ದಿನೇಶ್‌ ಅವರು ಮುಂದಿಟ್ಟಿರುವ ಚರ್ಚೆಯಲ್ಲಿ ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ಒಂದು ಪ್ರಶ್ನೆಯಿದೆ. ಆದರೆ ಬಲಪಂಥೀಯರಿಗಾಗಬಹುದಾದ ಲಾಭ-ನಷ್ಟದ ಪ್ರಜ್ಞಾಪೂರ್ವಕ ಆತಂಕದಲ್ಲಿ ಆ ಪ್ರಶ್ನೆ ಹಿನ್ನೆಲೆಗೆ ಸರಿದು, ವೈಯಕ್ತಿಕ ಕೆಸರೆರಚಾಟಕ್ಕೆ ಚರ್ಚೆ ತಿರುಗಿರುವುದು ವಿಪರ್ಯಾಸ.

ಆ ಪ್ರಶ್ನೆ ಹೊಸದೇನೂ ಅಲ್ಲ. ಬಹಳ ಹಿಂದೆಯೇ ಅಂಬೇಡ್ಕರ್‍‌ ಮುನ್ನೆಲೆಗೆ ತಂದಿದ್ದ ಪ್ರಶ್ನೆ ಅದು. ಭಾರತದ ಜಾತಿ ವ್ಯವಸ್ಥೆಯನ್ನು ಅರಿಯುವಲ್ಲಿ ಮತ್ತು ಸಮಸಮಾಜದ ತಮ್ಮ ಪರಿಕಲ್ಪನೆಯನ್ನು ಜಾತಿನಿರ್ಮೂಲನೆಗೆ ಒಗ್ಗಿಸಿಕೊಳ್ಳುವಲ್ಲಿ ಕಮ್ಯುನಿಷ್ಟರು ಸೋತಿದ್ದೆಲ್ಲಿ? ಕೇರಳದ ಕಮ್ಯುನಿಷ್ಟ್‌ ಪಕ್ಷದಲ್ಲಿ ಈಳವರು, ಮುಸ್ಲಿಮರು, ಕ್ರಿಶ್ಚಿಯನ್ನರಂತಹ ಹಿಂದುಳಿದ ಸಮುದಾಯಗಳಿಗಿಂತ ಹೆಚ್ಚಾಗಿ ಮೇಲ್ಜಾತಿ ನಾಯಕರಿಗೆ ಮಣೆಹಾಕುತ್ತಾ ಬಂದಿದ್ದೇಕೆ ಎಂಬುದನ್ನು ಅಚ್ಯುತಾನಂದನ್‌, ಕೆ.ಆರ್‍‌.ಗೌರಿಯಂತವರು ನಿದರ್ಶನದ ಮೂಲಕ ದಿನೇಶ್‌ ಅಮೀನ್‌ಮಟ್ಟು ಅವರು ಪ್ರಶ್ನೆ ಮಾಡಿದ್ದಾರೆ.

ಇದೇ ಅಂಬೇಡ್ಕರರ ಪ್ರಶ್ನೆಯೂ ಆಗಿತ್ತು. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಬಾಬಾ ಸಾಹೇಬರು ಭಾರತೀಯ ಕಮ್ಯುನಿಷ್ಟರನ್ನು “ A bunch of Brahmin boys” (Dr. Babasaheb Ambedkar: Writings and Speeches (BAWS), Vol. 17, Part 1, p. 425) ಎಂದು ಕಟುವಾಗಿ ವಿಮರ್ಶಿಸಿದ್ದುಂಟು. ಮಾರ್ಕ್ಸ್‌ವಾದವು ಸಮಾಜವನ್ನು ಆರ್ಥಿಕ ಶೋಷಣೆಯ ಆಧಾರದಲ್ಲಿ ಬಂಡವಾಳಶಾಹಿಗಳು ಮತ್ತು ಕಾರ್ಮಿಕ ವರ್ಗ ಎಂದು ವಿಂಗಡಿಸಿ ನೋಡುತ್ತದೆ. ಆದರೆ ಭಾರತದಲ್ಲಿ ಕಾರ್ಮಿಕ ವರ್ಗವನ್ನಷ್ಟೇ ಅಲ್ಲ, ಕಾರ್ಮಿಕರನ್ನೆ ಪರಸ್ಪರ ವಿಂಗಡಿಸಲಾಗಿದೆ. ಶ್ರಮಿಕರನ್ನು ಹಾಗೆ ವಿಂಗಡಿಸಲು ಜಾತಿಯನ್ನು ಬಳಸಿಕೊಳ್ಳಲಾಗಿದೆ. ಆದರೆ ಆ ಜಾತಿಯ ಸಂಕೀರ್ಣತೆಯನ್ನು ಅರಿಯಲು ಭಾರತದ ಕಮ್ಯುನಿಷ್ಟರು ವಿಫರಾಗಿದ್ದಾರೆ ಎಂಬುದು ಬಾಬಾಸಾಹೇಬರ ದೃಢವಾದ ನಿಲುವಾಗಿತ್ತು. ರಷ್ಯಾದ ಮಾರ್ಕ್ಸ್‌ವಾದಿಗಳು ತಮ್ಮ ಕಮ್ಯನಿಸಂ ಚಳವಳಿಯನ್ನು ಭಾರತದ ಮೇಲ್ಜಾತಿ ಜನರ ಕೈಗೊಪ್ಪಿಸಿ (ನಿರ್ದಿಷ್ಟವಾಗಿ ಬ್ರಾಹ್ಮಣರಿಗೆ) ತಪ್ಪು ಮಾಡಿದ್ದಾರೆ ಎಂದು ನನಗನ್ನಿಸುತ್ತದೆ ಎಂದು ಅಂಬೇಡ್ಕರರು ಹೇಳಿದ್ದು ಕಮ್ಯುನಿಷ್ಟರ ಇದೇ ಜಾತಿ ಪ್ರಾತಿನಿಧ್ಯದ ಕುರಿತು. ಗ್ರಾಮೀಣಕೇಂದ್ರಿತ ಕೃಷಿ ಪ್ರಧಾನವಾದ ಭಾರತದ ಸಮಾಜದಲ್ಲಿ ಜಾತಿವ್ಯವಸ್ಥೆಯ ಆಳವನ್ನು ಅರಿಯದ ಹೊರತು, ವರ್ಗವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಮ್ಯುನಿಷ್ಟ್‌ ಪಕ್ಷದ ನಾಯಕತ್ವ ಡಾಂಗೆ ತರಹದ ಮೇಲ್ಜಾತಿಯವರ ಕೈಯಲ್ಲೇ ಇರುವುದರಿಂದ, ಈ ಜಾತಿವ್ಯವಸ್ಥೆಯ ಫಲಾನುಭವಿಗಳಾದ ಅವರು ಜಾತಿಯನ್ನು ಗಂಭೀರವಾಗಿ ಪರಿಗಣಿಸಲಾರರು ಎಂಬುದು ಅವರ ನಿಲುವಾಗಿತ್ತು.

ಫ್ರೆಂಚ್‌ ಕ್ರಾಂತಿಯ ಸೋದರತೆ, ಸ್ವಾತಂತ್ಯ್ರ ಮತ್ತು ಸಮಾನತೆಯ ಆಶಯಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರರು, “ರಷ್ಯಾದ ಕಮ್ಯುನಿಷ್ಟ್‌ ಕ್ರಾಂತಿ ಸಮಾನತೆ ಸಾಧಿಸಲು ಯತ್ನಿಸಿದ್ದನ್ನು ನಾವು ಸ್ವಾಗತ ಮಾಡಬಹುದಾದರೂ, ಭ್ರಾತೃತ್ವ ಮತ್ತು ಸ್ವಾತಂತ್ಯ್ರಗಳ ಬಲಿದಾನದ ಮೇಲೆ ಆ ಸಮಾನತೆಯನ್ನು ಸಾಧಿಸುತ್ತೇವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಭ್ರಾತೃತ್ವ ಅಥವಾ ಸ್ವಾತಂತ್ಯ್ರಗಳು ಇಲ್ಲದೆ ಹೋದರೆ ಸಮಾನತೆಗೆ ಯಾವ ಅರ್ಥವೂ ಇರಲಾರದು. ಬುದ್ಧ ಧಮ್ಮ ಮಾತ್ರ ಈ ಮೂರನ್ನು ಕೊಡಬಲ್ಲವು. ಕಮ್ಯುನಿಸಂ ಕೇವಲ ಒಂದನ್ನು ಮಾತ್ರ (ಸಮಾನತೆ) ಕೊಡಬಲ್ಲದು.” ಎಂದು ತಮ್ಮ Buddha or Karl marx ಪ್ರಬಂಧದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವ್ಯಕ್ತಿಘನತೆಯನ್ನು ಕುಂದಿಸುವ ಮೂಲಕ ವ್ಯಕ್ತಿ ಸ್ವಾತಂತ್ರ್ಯಗಳನ್ನು ಕಿತ್ತಕೊಂಡದ್ದು ಈ ಜಾತಿಪದ್ದತಿ. “ಕಮ್ಯುನಿಷ್ಟರು ಮನೆಯ ಸೂರನ್ನು ಸರಿಪಡಿಸಲು ತೋರುತ್ತಿರುವ ಆಸಕ್ತಿ ಸ್ವಾಗತಾರ್ಹ. ಆದರೆ ಮನೆಯ ಅಡಿಪಾಯವೇ ಸಡಿಲಗೊಂಡು ಕುಸಿದುಬೀಳುವಂತಿರುವಾಗ, ಸೂರನ್ನು ಸರಿಪಡಿಸಿ ಏನು ಪ್ರಯೋಜನ?” ಎಂಬ ಅಂಬೇಡ್ಕರರ ಮಾತು, ಜಾತಿಯನ್ನು ಅರಿಯುವಲ್ಲಿ ಕಮ್ಯುನಿಷ್ಟರು ಎಡವಿದ್ದನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

ಇದೇ ಪ್ರಶ್ನೆಯನ್ನು ದಿನೇಶ್‌ ಅಮೀನ್‌ಮಟ್ಟು ಅವರು ತಮ್ಮ ಬರಹದಲ್ಲಿ ಮುಂದಿಟ್ಟಿದ್ದಾರೆ. ಇಷ್ಟು ವರ್ಷಗಳ ನಂತರ ಕಮ್ಯುನಿಷ್ಟರು ಈ ವಿಚಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆಯೇ? ಅಂಬೇಡ್ಕರರು ಹೇಳಿದ “A bunch of Brahmin boys” ಅಪವಾದದಿಂದ ಮುಕ್ತವಾಗಿ, ಕಮ್ಯುನಿಷ್ಟ್‌ ನಾಯಕತ್ವದಲ್ಲಿ ಜಾತಿಗಳ ಸಮಾನ ಪ್ರತಿನಿಧಿತ್ವವನ್ನು ಕಾಣಬಹುದೇ? ಹಾಗಾದ ನಂತರವೂ ಕಮ್ಯುನಿಷ್ಟರಿಗೆ ಭಾರತದಲ್ಲಿ ರಾಜಕೀಯ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣಗಳೇನು? ಸೈಧ್ದಾಂತಿಕವಾಗಿ ತುಂಬಾ ಕಮಿಟೆಡ್ ಕಾರ್ಯಕರ್ತರನ್ನು  ತಯಾರು ಮಾಡುವ ಕಮ್ಯುನಿಷ್ಟ್ ಪಕ್ಷದಲ್ಲಿ ಇತ್ತೀಚೆಗೆ ಎರಡು ಮೂರು ಬಾರಿ ಶಾಸಕರಾದಂತವರೇ ಬಿಜೆಪಿ ಸೇರುತ್ತಿರುವುದಕ್ಕೆ ಕಾರಣವೇನಿರಬಹುದು (ಪಶ್ಚಿಮ ಬಂಗಾಳದ ಬಹುತೇಕ ಕಮ್ಯುನಿಷ್ಟ್ ಕಾರ್ಯಪಡೆ ಟಿಎಂಸಿ ರಾಜಕಾರಣವನ್ನು ಪ್ರತಿರೋಧಿಸುವ ಕಾರಣಕ್ಕಾಗಿ ಬಿಜೆಪಿ ಸೇರಿದ್ದು ಸುಡುವಾಸ್ತವ)? ಎಂಬ ಪ್ರಶ್ನೆಗಳತ್ತ ಈ ಚರ್ಚೆ ತಿರುಗಬೇಕಿದೆ. ಬದಲಾಗಿ, ಬಲಪಂಥೀಯರಿಗೆ ಲಾಭವಾಗಬಹುದೆನ್ನುವ ಆತಂಕದಲ್ಲಿ ಕಮ್ಯುನಿಷ್ಟರ ವಿಮರ್ಶೆಯ ಈ ಚರ್ಚೆಯನ್ನು ಒಂದು ಅಪರಾಧವೆಂಬಂತೆ ವೈಯಕ್ತಿಕ ದಾಳಿಗೆ ಸೀಮಿತಗೊಳಿಸುವುದಾದರೆ, ನಾಳೆಯಿಂದ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷ ಅಥವಾ ಸಿದ್ದಾಂತವನ್ನು ವಿಮರ್ಶಿಸುವ, ಟೀಕಿಸುವ ನೈತಿಕತೆ ನಮಗೆ ಉಳಿವುದೇ? ಖಂಡಿತ ಬೇಡ…. ಎಲ್ಲರನ್ನೂ ವಿಮರ್ಶಿಸುವ ನಮ್ಮ ನೈತಿಕತೆಯನ್ನು ಉಳಿಸಿಕೊಳ್ಳೋಣ.

ಅಂದಹಾಗೆ, ಇಂತಹ ಸಂವಾದಗಳು ಮುನ್ನೆಲೆಗೆ ಬಂದಾಗಲೆಲ್ಲ ಯಾರದೋ ಭುಜದ ಮೇಲೆ ತಮ್ಮ ಕೋವಿಯಿಟ್ಟು ತಮ್ಮ ಎದುರಾಳಿಗಳಿಗೆ ಗುಂಡು ಹಾರಿಸಿ, ಜಾಣತನದಿಂದ ಮರೆಯಾಗಿಬಿಡುವ ಕೆಲ ಜಾತಿವಾದಿ ಜನರು ಅಖಾಡಕ್ಕಿಳಿಯುತ್ತಾರೆ. ಈ ಚರ್ಚೆಯು ಅಂತವರಿಗೆ ಆಹಾರವಾಗಿ ಪ್ರಗತಿಪರ ವಲಯ ಮತ್ತಷ್ಟು ಸಡಿಲಗೊಳ್ಳದಂತೆ ಎಚ್ಚರವಹಿಸಬೇಕಾದ ತುರ್ತು ಎರಡೂ ಬಣಗಳಿಗಿದೆ. ಅಂತವರು ಅದಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನುವುದು ಎಲ್ಲರ ಗಮನದಲ್ಲಿದ್ದರೆ ಒಳಿತು.

You cannot copy content of this page

Exit mobile version