Thursday, June 13, 2024

ಸತ್ಯ | ನ್ಯಾಯ |ಧರ್ಮ

ಮಾನವ ಪ್ರಾಣಿ ಸಂಘರ್ಷ | ನೇತ್ರಾವತಿ ನದಿ ತಿರುವು ಯೋಜನೆ

ಯಾವಾಗ ನೇತ್ರಾವತಿ ತಿರುವು ಯೋಜನೆಗೆ ಕರಾವಳಿಯಿಂದಲೂ ದೊಡ್ಡ ವಿರೋಧ ವ್ಯಕ್ತವಾಯಿತೋ ಕೂಡಲೇ ನೇತ್ರಾವತಿ ನದಿಯ ಹೆಸರನ್ನು  ʼದೊಡ್ಡವರುʼ ಕೈ ಬಿಟ್ಟರು. ಎತ್ತಿನ ಹಳ್ಳವನ್ನು ಎತ್ತಿನ ಹೊಳೆ ಮಾಡಿ ಘಟ್ಟದ ಮೇಲಿರುವ ಮತ್ತು ಮಳೆಗಾಲದಲ್ಲಿವ್ಯರ್ಥವಾಗಿ ಹರಿದು ಹೋಗುವನೀರನ್ನು ಕುಡಿಯುವ ನೀರಿಗಾಗಿ ಬಯಲು ಸೀಮೆಗೆ ತಿರುಗಿಸುವ ಮಾತಾಡ ತೊಡಗಿದರು– ಇದು ಪ್ರಸಾದ್‌ ರಕ್ಷಿದಿಯವರ ಇಂದಿನ ಅಂಕಣ ಹೂರಣ.  

ನೇತ್ರಾವತಿ ನದಿ ತಿರುವು ಯೋಜನೆಗೆ ಮೂಲವಾದ ಎತ್ತಿನ ಹೊಳೆ ಯೋಜನೆ ಸಣ್ಣ ಸಂಗತಿಯಾಗಿ ಪ್ರಾರಂಭವಾದದ್ದು ಸಕಲೇಶಪುರ ತಾಲ್ಲೂಕಿನಲ್ಲೇ ಎನ್ನುವುದು ಅನೇಕರಿಗೆ ತಿಳಿಯದು. 1980 ರ ದಶಕದ ಪ್ರಾರಂಭದಲ್ಲಿ ಸಕಲೇಶಪುರ ಪುರ ಸಭೆಯಲ್ಲಿ ಒಂದು ಸಭೆ ನಡೆದಿತ್ತು. ಅಲ್ಲಿ ಹೇಮಾವತಿ ನದಿ ನೀರು ಕೊಳಕಾಗಿದೆ, ಕುಡಿಯಲು ಯೋಗ್ಯವಾಗಿಲ್ಲ, ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆಂದು ಹಲವರು ಸಲಹೆ ಕೊಟ್ಟರು. ಆಗ ಕುಂಬರಡಿ ಗ್ರಾಮ ಹಾರ್ಲೆ ಎಸ್ಟೇಟ್ ನ ಪಕ್ಕದಲ್ಲಿ ಹರಿಯುವ ಯೆತ್ನಳ್ಳದ ( ಅದೇ ಇಂದಿನ ಎತ್ತಿನ ಹೊಳೆ)  ನೀರನ್ನು ಸಕಲೇಶಪುರಕ್ಕೆ ತರಬೇಕೆಂದು ಸಲಹೆಯಿತ್ತರು. ಅದು ಗ್ರಾವಿಟಿಯಿಂದಲೇ ನೀರು ಹರಿಸಿ ತರಬಲ್ಲಂತ ಒಂದು ಸಣ್ಣ ಕುಡಿಯುವ ನೀರಿನ ಯೋಜನೆಯಾಗಿತ್ತು.

ಆಗಲೇ ಈ ಯೆತ್ನಳ್ಳದಲ್ಲಿ ಮೀನು ಹಿಡಿಯಲು ಬರುತ್ತಿದ್ದ ಪೂರ್ಣಚಂದ್ರ ತೇಜಸ್ವಿಯರಿಗೆ ಈ ಸುದ್ದಿ ತಿಳಿಯಿತು. ಆಗ ಅವರು “ಹೇಮಾವತಿ ನೀರು ಕೆಟ್ಟಿದ್ದರೆ ಅದನ್ನು ಕೆಡಿಸಿದವರು ಯಾರು? ಮನೆ ಬಾಗಿಲು ನೀರು ಕೆಡಿಸಿಕೊಂಡು ದೂರದಿಂದ ನೀರು ತರ್ತೀವಿ ಅನ್ನೋದು ಮೂರ್ಖತನ” ಎಂದಿದ್ದರು.

ಆದರೆ ಈ ಸುದ್ದಿ ಕೂಡಲೇ ಅಂದಿನ ದೊಡ್ಡ ರಾಜಕಾರಣಿಗಳಿಗೆ ತಲುಪಿತು.  ಆಗಿನ ನೀರಾವರಿ ಮಂತ್ರಿಗಳು ಎತ್ತಿನ ಹಳ್ಳದ ನೀರನ್ನು ಹೇಮಾವತಿಗೇ ತಿರುಗಿಸಿ ಬಯಲುಸೀಮೆಯಲ್ಲಿ ನೀರಾವರಿಗೆ ಬಳಸುವ ಮಾತಾಡಿದರು. ಆಗ ಮತ್ತೆ ಮಲೆನಾಡಿನ  ಭಾಗದ ಜನ ಅದನ್ನು ವಿರೋಧಿಸಿದರು.

ಈ ವಿಚಾರಕ್ಕೆ ಕರ್ನಾಟಕದ ನೀರಾವರಿ ತಜ್ಞರಿಂದಲೂ ವಿರೋಧ ಬಂತು ಯಾಕೆಂದರೆ, ಒಮ್ಮೆ ಎತ್ತಿನ ಹಳ್ಳದ ನೀರು ಹೇಮಾವತಿಯನ್ನು ಬೆರೆತರೆ ಅದು ಕಾವೇರಿ ಕೊಳ್ಳದ ನೀರಾಗುತ್ತಿತ್ತು ಮತ್ತು ಅದರಲ್ಲಿ ತಮಿಳುನಾಡು ಕೂಡಾ ಪಾಲು ಕೇಳುವ ಸಂಭವ ಇತ್ತು. ಆದ್ದರಿಂದ ಅದು ನೆನೆಗುದಿಗೆ ಬಿತ್ತು. ಗುಂಡ್ಯ ಜಲ ವಿದ್ಯುತ್ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಿರುವಾಗಲೇ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿತ್ತು.

ಆಗಲೇ ದೊಡ್ಡ ದೊಡ್ಡವರಿಗೆ ನೇತ್ರಾವತಿ ನೀರನ್ನು ಬಯಲು ಸೀಮೆಗೆ ತಿರುಗಿಸುವ ಮೂಲಕ ತಮ್ಮ ರಾಜಕೀಯ ನೆಲೆಗಳನ್ನೂ ಗಟ್ಟಿಯಾಗಿಸಿಕೊಳ್ಳುವ ಕನಸು ಬೀಳತೊಡಗಿದ್ದು. ಯಾವಾಗ ನೇತ್ರಾವತಿ ತಿರುವು ಯೋಜನೆಗೆ ಕರಾವಳಿಯಿಂದಲೂ ದೊಡ್ಡ ವಿರೋಧ ವ್ಯಕ್ತವಾಯಿತೋ ಕೂಡಲೇ  ನೇತ್ರಾವತಿ ನದಿಯ ಹೆಸರನ್ನು ಕೈ ಬಿಟ್ಟರು. ಎತ್ತಿನ ಹಳ್ಳವನ್ನು ಎತ್ತಿನ ಹೊಳೆ ಮಾಡಿ ಘಟ್ಟದ ಮೇಲಿರುವ ಮತ್ತು ಮಳೆಗಾಲದಲ್ಲಿ “ವ್ಯರ್ಥವಾಗಿ ಹರಿದು ಹೋಗುವ” ನೀರನ್ನು ಕುಡಿಯುವ ನೀರಿಗಾಗಿ ಬಯಲು ಸೀಮೆಗೆ ತಿರುಗಿಸುವ ಮಾತಾಡ ತೊಡಗಿದರು. ಮೊದಲಿನ ಹಂತದಲ್ಲಿ, ಮೊದಲಿನ ಹಂತದಲ್ಲಿ ಎನ್ನುವ ಪದವನ್ನು ಗಮನಿಸಿ, ಇದರಂತೆ ಸಕಲೇಶಪುರ ತಾಲ್ಲೂಕಿನಲ್ಲಿ ಪಶ್ಚಿಮಕ್ಕೆ ಹರಿಯುವ ಐದು ಸಣ್ಣ ಸಣ್ಣ ಹೊಳೆಗಳನ್ನು ಸೇರಿಸಿ ಎತ್ತಿನ ಹೊಳೆ ಯೋಜನೆ ತಯಾರಾಯಿತು. ಇವೆಲ್ಲದರಿಂದ ಇಪ್ಪತ್ತನಾಲ್ಕು ಟಿ.ಎಂ.ಸಿ ನೀರು ದೊರೆಯಲಿದೆ ಎಂದೂ ಹೇಳಿಕೆ ಕೊಟ್ಟರು. ತುಮಕೂರು, ಕೋಲಾರ ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚಿದರು.

ಮಲೆನಾಡಿನಲ್ಲಿ ಮತ್ತೆ ವಿರೋಧ ಪ್ರಾರಂಭವಾಯಿತು. ಆಗಲೂ ಕೆಲವರು ಈಗಾಗಲೇ ಅದೇ ನೀರನ್ನು ಬಳಸಿಕೊಂಡು ಶಿರಾಡಿಘಾಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಕಿರು ಜಲವಿದ್ಯುತ್ ಯೋಜನೆಗಳು ಕೆಲಸ ಮಾಡುತ್ತಿರುವುದರಿಂದ  ಎತ್ತಿನ ಹೊಳೆ ಯೋಜನೆಯನ್ನು ಜಾರಿ ಮಾಡಲಾರರೆಂದು ನಂಬಿದ್ದರು.

ಅದೇ ಸಮಯದಲ್ಲಿ ಇನ್ನೊಂದು ಕಡೆಯಿಂದ ಕೇಂದ್ರ ಸರ್ಕಾರವೇ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನೇಮಿಸಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್  ಅವರ ವರದಿ ಬಂದಿತ್ತು. ಮಾಧವ ಗಾಡ್ಗೀಳ್ ಸಕಲೇಶಪುರ ತಾಲ್ಲೂಕಿಗೆ ಭೇಟಿ ನೀಡಿದಾಗ ಇಲ್ಲಿನ ಪರಿಸರ ಹೋರಾಟಗಾರರೂ ಎತ್ತಿನ ಹೊಳೆ ಯೋಜನೆ ವಿರುದ್ಧ ಮನವಿ ಸಲ್ಲಿಸಿದ್ದರು. ಆದರೆ ಕೆಲವೇ ಸಮಯದಲ್ಲಿ ಸರ್ಕಾರ ಉದ್ಯಮಿಗಳ ಒತ್ತಡಕ್ಕೆ ಮಣಿದು ಗಾಡ್ಗೀಳ್ ವರದಿ ಬದಲಿಗೆ ಇನ್ನೊಂದು ವರದಿ ತರಿಸಿಕೊಳ್ಳಲು ಕಸ್ತೂರಿ ರಂಗನ್ ಅವರನ್ನು ನೇಮಿಸಿತು. ಅದು ಇನ್ನಷ್ಟು ಗೊಂದಲಗಳಿಗೆ ಕಾರಣವಾಯಿತು.

(ಮುಂದುವರಿಯುವುದು)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು