Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಬಲ ಹೈನುಗಾರಿಕೆಗೆ ವಿಲೀನ ಕಾರ್ಯಸಾಧುವಲ್ಲ

ದಕ್ಷಿಣ ಕರ್ನಾಟಕದ ತುಮಕೂರು ಜಿಲ್ಲೆಯ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಡೈರಿ ರೈತರು ಸಮಗ್ರ ಸಾವಯವ ಕೃಷಿ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಂಡ ಆನಂತರ ತಮ್ಮ ವಾರ್ಷಿಕ ಆದಾಯವನ್ನು 3-4 ಪಟ್ಟು ಹೆಚ್ಚಿಸಿ ಕೊಂಡಿದ್ದಾರೆ ಎಂಬ  ಅನುಭವ ಕೃಷಿ ಬರಹಗಾರ ಮಂಜುನಾಥ ಹೊಳಲು ಅವರದು.

ವಸಾಹತುಶಾಹಿ ಆಳ್ವಿಕೆಯಿಂದ ಬಿಡುಗಡೆಗಾಗಿ ಹೋರಾಡುತ್ತಾ ಮಹಾತ್ಮ ಗಾಂಧಿಯವರು ತಮ್ಮ ಜೀವನದ ಮಹತ್ವದ ಭಾಗವನ್ನು  ವಾರ್ಧಾ ಜಿಲ್ಲೆಯಲ್ಲಿ ಕಳೆದಿದ್ದರು. ಇಂತಹ ಮಹತ್ವದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಅಧಿಕವಾಗಿ ದಾಖಲಾಗಿವೆ. ಭಾರತದ ಹಸಿರು ಮತ್ತು ಶ್ವೇತ ಕ್ರಾಂತಿಗಳು ತೀವ್ರವಾದ ಆಹಾರ ಕೊರತೆಯಿಂದ ಹುಟ್ಟಿಕೊಂಡಿವೆ ಎಂಬುದು ತಮಗೆಲ್ಲರಿಗೂ ತಿಳಿದಿರುವಂತದ್ದೇ ಆಗಿದೆ. ಈ ಅವಳಿ ಕ್ರಾಂತಿಗಳಿಂದ ಬಹಳಷ್ಟು ಒಳಿತುಗಳಾಗಿವೆ. ಆದರೆ ಕೆಲವು ದುರಾಸೆಯ ಮತ್ತು ರಾಜಕೀಯ ಉದ್ದೇಶದ ಕೆಲವು ತೀರ್ಮಾನಗಳಿಂದ ರೈತಾಪಿ ಜನರಿಗೆ ತೊಂದರೆಯಾಗುತ್ತಿರುವುದನ್ನು ಅಲ್ಲಗಳೆಯಲಾಗದು.

ನಂದಿನಿ-ಅಮುಲ್ ವಿಲೀನದ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕ ಹಾಗೂ ಗುಜರಾತ್ ರಾಜ್ಯ ಹಾಲು ಮಂಡಳಿ ವಿಲೀನದಿಂದ ಮತ್ತಷ್ಟು ಗುರಿ ಸಾಧಿಸಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಬಹು ರಾಜ್ಯಗಳಲ್ಲಿನ  ಸಹಕಾರಿ ಕಾನೂನಿನ ಪ್ರಕಾರ ಯಾವುದೇ ಸಹಕಾರ ಸಂಘದ ಮಹಾಸಭೆಯ ಮೂರನೇ ಎರಡರಷ್ಟು ಸದಸ್ಯರು ವಿಲೀನಕ್ಕೆ ಒಪ್ಪಿಗೆ ಸೂಚಿಸಬೇಕು. ವಿಲೀನದ ಸಂಸ್ಥೆಗಳು ಒಟ್ಟಿಗೆ ಕೆಲಸ ಮಾಡುವುದು ಅವಶ್ಯವಾಗಿದ್ದರೂ ಹೈನುಗಾರಿಕೆಯ ಸಬಲೀಕರಣ ವಿಚಾರಕ್ಕೆ ಇದು ಅನ್ವಯಿಸುವುದಿಲ್ಲ. ಹೈನುಗಾರಿಕೆ ಸೋತಿರುವುದೇ ಉತ್ಪಾದನಾ ವ್ಯವಸ್ಥೆಯ ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪದಿರುವುದರಿಂದಾಗಿ. ಒಂದು ಕರಾವಿನ ಭಾರತದ ಸರಾಸರಿ ಉತ್ಪಾದಕತೆ (Productivity) 1500 ಕೆಜಿ. ಅದರಂತೆಯೇ ಇಸ್ರೇಲ್ ದೇಶದ ಉತ್ಪಾದಕತೆ 12,000 ಕೆಜಿ. ಉತ್ತಮ ಗುಣಮಟ್ಟದ ಸೇವೆಗಳ ಅಲಭ್ಯತೆ, ಗುಣಮಟ್ಟದ ಪಶು ಆಹಾರದ ಕೊರತೆ, ರೈತರು ಮೇವು ಉತ್ಪಾದನೆ ಮಾಡದಿರುವುದು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡದಿರುವುದು ಈ ಅಂತರ ಹೆಚ್ಚಾಗಿರುವುದಕ್ಕೆ ಮುಖ್ಯ ಕಾರಣಗಳಾಗಿವೆ.

ಸರಾಸರಿ ಭೂಹಿಡುವಳಿಯು ಕಡಿಮೆಯಾಗುತ್ತಿದೆ ಮತ್ತು ಸುಮಾರು 80% ರೈತ ಕುಟುಂಬಗಳು ಕನಿಷ್ಠ ಮತ್ತು ಸಣ್ಣ ರೈತ ವರ್ಗಗಳಿಗೆ ಸೇರಿವೆ. ಬೆಳೆ, ಜಾನುವಾರುಗಳ ಸಮಗ್ರ ಉತ್ಪಾದನಾ ವ್ಯವಸ್ಥೆಗಳ ಮೂಲಕ ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುವುದು, ಸರಿಯಾದ ಬೆಳೆ ಏಕೀಕರಣದೊಂದಿಗೆ ಸುಸ್ಥಿರ ಡೈರಿ ಮೂಲಕ ಬಹು ಉದ್ಯಮಶೀಲತೆಯ ಅವಕಾಶಗಳನ್ನು ಉಳಿಸಿಕೊಳ್ಳುವುದು ಆಹಾರ ಉತ್ಪಾದನೆಯ ಗುರಿಗಳನ್ನು ಪೂರೈಸಲು ಅವಶ್ಯಕವಾಗಿದೆ.

ನಮ್ಮಲ್ಲಿ ಬಹುಪಾಲು ರೈತರು ಸಣ್ಣ ಹಿಡುವಳಿದಾರರು. ನಿರ್ಲಕ್ಷ್ಯ, ಸರಕಾರದ ಒಪ್ಪಿಕೊಳ್ಳಲಾಗದ ನೀತಿ ಹಾಗೂ  ರೈತ ಸ್ನೇಹಿಯಲ್ಲದ ಪರಿಸರದ ಕಾರಣದಿಂದಾಗಿ ಅವರು ಬಡತನದಲ್ಲಿದ್ದಾರೆ. ಒಂದು ಉದಾಹರಣೆಯನ್ನು ಹೇಳುವುದಾದರೆ, ಕಳೆದ ಐದು ದಶಕಗಳಿಂದ ನಾವು ಬೆಂಬಲಿಸಿ ಉಳಿಸಿಕೊಳ್ಳಲು  ಪ್ರಯತ್ನಿಸಿದ  ಕನಿಷ್ಠ ಬೆಂಬಲ ಬೆಲೆಯ ವಿದ್ಯಮಾನವು ಏಕ ಬೆಳೆಗಳಂತಹ ದೊಡ್ಡ ಸಮಸ್ಯೆಗಳಿಗೆ ಕಾರಣವಾಯಿತು. ಈ ಸಮಸ್ಯೆಯು ಇನ್ನೂ ದೊಡ್ಡ ಆರ್ಥಿಕ ಮತ್ತು ಪರಿಸರ ಸವಾಲುಗಳಿಗೆ ಕಾರಣವಾಗಿದೆ. ನಾವು ಹೆಚ್ಚು ನೀರು ಬಳಸುವ ಅಕ್ಕಿಯನ್ನು ಉತ್ಪಾದಿಸುತ್ತೇವೆ. ಕಡಿಮೆ ನೀರನ್ನು ತೆಗೆದುಕೊಳ್ಳುವ ರಾಗಿ ನಮ್ಮ ಆರೋಗ್ಯಕ್ಕೆ ಸರಿಹೊಂದುವುದಿಲ್ಲ. ನಿಜವಾದ ದುರಂತವೆಂದರೆ ರಸಗೊಬ್ಬರಗಳು, ಪ್ರತಿಜೀವಕಗಳು(Antibiotics) ಸೇರಿದಂತೆ ರಾಸಾಯನಿಕ ಬಳಕೆಗಳ ಮೇಲೆ ಹೆಚ್ಚು ಅವಲಂಬಿಸಿರುವ, ಸಮರ್ಥನೀಯವಲ್ಲದ ಕೃಷಿ ಪದ್ಧತಿಗಳು ಭಾರತಕ್ಕೆ ಸೂಕ್ತವಾಗಿಲ್ಲ. ಇದು ನಮ್ಮ ವಸಾಹತುಶಾಹಿ ಕಾಲದ್ದಾಗಿದೆ!

ಈಗ ಬೇಕಿರುವುದು ವಿಲೀನ ಪ್ರಕ್ರಿಯೆ ಅಲ್ಲ…

ವಿಲೀನ ಪ್ರಕ್ರಿಯೆ ಪಕ್ಕಕ್ಕಿಟ್ಟು, ರೈತರ ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವ ರೈತ ಸ್ನೇಹಿ ಹಾಗೂ ಪ್ರಾಯೋಗಿಕ ಮಾದರಿಗಳ ಬಗ್ಗೆ ಮಾತಾಡಬೇಕಿದೆ. ರೈತ ಸ್ನೇಹಿ ಮಾದರಿಗಳನ್ನು ಈಗಾಗಲೇ ಪ್ರಯೋಗಿಸುತ್ತಿರುವ ʼಅಕ್ಷಯಕಲ್ಪʼವು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಅಕ್ಷಯಕಲ್ಪ ಮಾದರಿಯಲ್ಲಿ ಸರಾಸರಿ ಹಾಲಿನ ಉತ್ಪಾದಕತೆಯನ್ನು ಒಂದು ಕರಾವಿಗೆ 3,200 ಲೀಟರ್ ಉತ್ಪಾದಿಸಲು ಸಾಧ್ಯವಾಗಿದೆ. ಅಕ್ಷಯಕಲ್ಪ ಪರಿಕಲ್ಪನೆಯ ಉಗಮಕ್ಕೆ ಕಾರಣರಾದವರು ಡಾ. ಜಿಎನ್ಎಸ್ ರೆಡ್ಡಿ ಹಾಗು ಶಶಿಕುಮಾರ್ ರವರು. ಇವರಿಬ್ಬರೂ ಹಳ್ಳಿಗಳಿಗೆ ಹೊಸ ಹುರುಪು ತುಂಬಿದವರು ಹಾಗೂ ಹಸಿರು ಆರ್ಥಿಕತೆಗೆ ಒತ್ತು ನೀಡಿದವರು (ಡಾ. ಜಿಎನ್ಎಸ್ ರೆಡ್ಡಿಯವರು ಈಗ ನೆನಪು ಮಾತ್ರ). ಅಮೆರಿಕಾದಲ್ಲಿ ಉತ್ತಮ ಕೆಲಸದಲ್ಲಿ ಇದ್ದ ಶಶಿಕುಮಾರ್,  ಕೆಲಸಕ್ಕೆ ವಿದಾಯ ಹೇಳಿ ಹೈನುಗಾರಿಕಾ ಕ್ಷೇತ್ರದಲ್ಲಿ ಉನ್ನತ ಬದಲಾವಣೆ ತರುವ ಕನಸಿನೊಂದಿಗೆ  ಭಾರತಕ್ಕೆ ಮರಳಿದವರು.

ಅಕ್ಷಯಕಲ್ಪ ಮಾದರಿ..

ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆಗೆ ಒಳಪಡುವ ಜಾಬಘಟ್ಟದಲ್ಲಿ ನೆಲೆಸಿರುವ ರಮೇಶ್, ಸುತ್ತಮುತ್ತಲಿನ ಇತರ ರೈತರಂತೆ ಸುಮಾರು 18 ಎಕರೆಗಳಷ್ಟು ಪಿತ್ರಾರ್ಜಿತ ಆಸ್ತಿಯನ್ನು  ಹೊಂದಿದ್ದರು. ಆದರೆ ಮೂಲ ಸೌಕರ್ಯಗಳ ಕೊರತೆ ಮತ್ತು ಕೃಷಿ ವೆಚ್ಚ ಹೆಚ್ಚಾದ ಕಾರಣ ಅವರು ತನ್ನ ಬದುಕಿನ ಬಂಡಿ ಎಳೆಯಲು ಹೆಣಗಾಡುತ್ತಿದ್ದರು. ಅವರ ಕುಟುಂಬವು ಹಳ್ಳಿಯಲ್ಲಿ ಎಲ್ಲರಂತೆ ಕೃಷಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅವರು ಸಹ ಆರಂಭದಲ್ಲಿ ನಾಲ್ಕು ಎಮ್ಮೆಗಳನ್ನು ಹೊಂದಿದ್ದರು. ಅದರ ಹಾಲನ್ನು ಮನೆ ಖರ್ಚಿಗೆ ಮಾತ್ರ ಬಳಸುತ್ತಿದ್ದರು. ಆನಂತರ ಅವರು ಆ ಎಮ್ಮೆಗಳನ್ನು ಮಾರಾಟ ಮಾಡಿ ಎರಡು ಹಸುಗಳನ್ನು ಖರೀದಿಸಿದರು. ಅದು ಅವರಿಗೆ ಐದು ಸಾವಿರ ರುಪಾಯಿಗಳ ತಿಂಗಳ ಆದಾಯವನ್ನು ತಂದುಕೊಟ್ಟಿತು. ಫಲವತ್ತತೆಯ ಕೊರತೆ ಹಾಗು ಬೇರೆ ಬೇರೆ ಕಾರಣಗಳಿಂದ ಅವರಿಗೆ ಹೈನುಗಾರಿಕೆ ಲಾಭದಾಯಕವಾಗಲಿಲ್ಲ. ಆದರೆ ಸಾಕಷ್ಟು ಜಮೀನಿತ್ತಾದರೂ ತಮ್ಮ 18 ಎಕರೆ ತೆಂಗಿನ ತೋಟದಿಂದ ಕೇವಲ 6,000 ತೆಂಗಿನಕಾಯಿಗಳನ್ನು ಪಡೆಯುತ್ತಿದ್ದರು! ಆದಾಯ ಕಡಿಮೆ ಇದ್ದುದರಿಂದ ಅವರು ತಮ್ಮ ಜೀವನೋಪಾಯಕ್ಕಾಗಿ ತನ್ನ ಇಬ್ಬರು ಪುತ್ರರನ್ನು ಇತರ ನಗರಗಳಿಗೆ ದುಡಿಯಲು ಕಳುಹಿಸಿದರು. ಆದರೆ 2010 ರಲ್ಲಿ ಅಕ್ಷಯಕಲ್ಪ ಸಂಸ್ಥೆಯವರು ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿ, ಸಂಸ್ಥೆಯ ಉದ್ದೇಶಗಳು ಮತ್ತು ಹೈನುಗಾರಿಕೆಯ ಹೊಸ ವಿಧಾನದ ಬಗ್ಗೆ ವಿವರಿಸಿದರು. ಅವರು ಮೊದಲ ನೋಟದಲ್ಲಿ ಹೊಸ ಮಾದರಿಗೆ ಅಷ್ಟೊಂದು ಪ್ರಭಾವಿತರಾಗಲಿಲ್ಲ. ಕ್ರಮೇಣ ಹೊಸ ವಿಧಾನಗಳತ್ತ ಆಕರ್ಷಿತರಾಗಿ, ಆನಂತರದಲ್ಲಿ ದಿನಕ್ಕೆ ಸರಾಸರಿ 2೦೦ ಲೀಟರ್ ನಷ್ಟು ಹಾಲು ಉತ್ಪಾದಿಸತೊಡಗಿದರು. ಇದರಿಂದಾಗಿ ಸರಾಸರಿ ತಿಂಗಳ ಆದಾಯ ಇದೀಗ ಎರಡು ಲಕ್ಷ ಮುಟ್ಟಿದೆ! ಜೊತೆಗೆ ಅದೇ 18 ಎಕರೆಯಲ್ಲಿ ತೆಂಗು ಇಳುವರಿ ವರ್ಷಕ್ಕೆ 6೦ ಸಾವಿರ ತೆಂಗಿನಕಾಯಿ ಇಳುವರಿಯನ್ನು ಪಡೆಯುತ್ತಿದ್ದಾರೆ!

ರೈತರು ಮತ್ತು ಮಣ್ಣನ್ನು ಕೇಂದ್ರೀಕರಿಸಿಕೊಂಡು ನಮ್ಮ ಸಂಪನ್ಮೂಲಗಳು ಮತ್ತು ಶಕ್ತಿಯನ್ನು ವ್ಯಯಿಸಲು ಪ್ರಾರಂಭಿಸಿದಾಗ, ರಾಸಾಯನಿಕ ಕೃಷಿ ಪದ್ಧತಿ ದೂರ ಸರಿಯಲು ಪ್ರಾರಂಭಿಸಿತು. ಅಕ್ಷಯಕಲ್ಪ ಮಾದರಿಯಿಂದಾಗಿ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ರೈತರು ತಮ್ಮ ಮಣ್ಣಿನಿಂದ ಗಳಿಸುವ ಆದಾಯದಲ್ಲಿ ಸುಧಾರಣೆ ಕಂಡಿತು. ಇದು ಬರೇ ಸಿದ್ಧಾಂತವಲ್ಲ. ನಿಜ ಜೀವನದಲ್ಲಿ ಏನಾದರೂ ಕೆಲಸ ಮಾಡುವಂತದ್ದು. ದಕ್ಷಿಣ ಕರ್ನಾಟಕದ ತುಮಕೂರು ಜಿಲ್ಲೆಯ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಡೈರಿ ರೈತರು ಸಮಗ್ರ-ಸಾವಯವ ಕೃಷಿ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ತಮ್ಮ ವಾರ್ಷಿಕ ಆದಾಯವನ್ನು 3-4 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಬದಲಾವಣೆ ಅಷ್ಟು ಸುಲಭವಲ್ಲ, ವಿಶೇಷವಾಗಿ, ಮೊದಲ ಒಂದೆರಡು ವರ್ಷಗಳಲ್ಲಿ ಸಾವಯವ ಬದಲಾವಣೆಗೆ ಭೂಮಿಯನ್ನು ಸಿದ್ಧಪಡಿಸಬೇಕು. ಈ ಹಂತದಲ್ಲಿ ರೈತರು ತಮ್ಮದೇ ಆದ ಜಾನುವಾರುಗಳನ್ನು ಸಾಕುತ್ತಿದ್ದಾರೆ. ತೆಂಗು, ಹಣ್ಣುಗಳು, ತರಕಾರಿ ಸೇರಿದಂತೆ ಇತರ ವಾಣಿಜ್ಯ ಬೆಳೆಗಳನ್ನು ನೆಡುತ್ತಿದ್ದಾರೆ. ಜೇನುಸಾಕಣೆ ಮತ್ತು ಮೊಟ್ಟೆಗಳಿಗಾಗಿ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಹಾಲು ಸೇರಿದಂತೆ ಅವರು ಜಮೀನಿನಲ್ಲಿ ಉತ್ಪಾದಿಸುವ ಪ್ರತಿಯೊಂದು ಬೆಳೆಯೂ ಅತ್ಯುತ್ತಮ ಬೆಲೆಯನ್ನು ಪಡೆಯುತ್ತದೆ. ಏಕೆಂದರೆ ಗ್ರಾಹಕರು ಆ ಉತ್ಪನ್ನಗಳಲ್ಲಿ  ಗುಣಮಟ್ಟವನ್ನು ನೋಡುತ್ತಾರೆ.

ನಿರಾಸಕ್ತಿ ಮತ್ತು ಅಜ್ಞಾನಕ್ಕೆ  ಇದೇ ರೈತರು ಮತ್ತು ಇದೇ ಭೂಮಿ ಹಲವಾರು ತಲೆಮಾರುಗಳಿಂದ ಬಲಿಯಾಗಿರುವುದು ವಿಪರ್ಯಾಸ!

ಮಂಜುನಾಥ ಹೊಳಲು

ಕೃಷಿ ಬರಹಗಾರರರು.

Related Articles

ಇತ್ತೀಚಿನ ಸುದ್ದಿಗಳು