Home ಅಂಕಣ ಮಾನವ ಪ್ರಾಣಿ ಸಂಘರ್ಷ| ಕಿರು ಜಲ ವಿದ್ಯುತ್ ಯೋಜನೆಗಳ ಪಾತ್ರ

ಮಾನವ ಪ್ರಾಣಿ ಸಂಘರ್ಷ| ಕಿರು ಜಲ ವಿದ್ಯುತ್ ಯೋಜನೆಗಳ ಪಾತ್ರ

0

ಕಿರು ಜಲ ವಿದ್ಯುತ್ ಯೋಜನೆಗಳು ಕೂಡಾ ಮಲೆನಾಡಿನಲ್ಲಿ ಪ್ರಾಣಿಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದವು. ಅನೆ ಸೇರಿದಂತೆ ಇತರ ಪ್ರಾಣಿಗಳ ಹಾವಳಿ ಪ್ರಾರಂಭವಾಯಿತು. ಜತೆಗೆ ಮಲೆನಾಡಿನ ಹಳ್ಳಿಗಳಿಗೆ ನಿರಂತರ ವಿದ್ಯುತ್ ದೊರೆಯುತ್ತದೆ ಎಂದು ಆಸೆ ಪಟ್ಟವರಿಗೆ ಆಘಾತವೂ ಕಾದಿತ್ತು. ಪರಿಸರ ಲೇಖಕ ಪ್ರಸಾದ್‌ ರಕ್ಷಿದಿಯವರ ಅಂಕಣ ಓದಿ.

ಒಂದು ಕಡೆ ಆಲೂರು ತಾಲ್ಲೂಕಿನ ಕಾಫಿ ತೋಟಗಳು ಮತ್ತು ಅರೆಮಲೆನಾಡು ಆನೆ ಮತ್ತು ಮಂಗಗಳ ಹಾವಳಿ ಅನುಭವಿಸುತ್ತಿದ್ದರೆ, ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ, ಅತ್ತಿಹಳ್ಳಿ, ಹೆತ್ತೂರು ವಲಯದಲ್ಲಿಯೂ ಅನೆ ಸೇರಿದಂತೆ ಇತರ ಪ್ರಾಣಿಗಳ ಹಾವಳಿ ಪ್ರಾರಂಭವಾಯಿತು.

ಶಿರಾಡಿ ಘಾಟಿಯ ಪಕ್ಕದಲ್ಲಿ ಹರಿಯುವ ಕೆಂಪೊಳೆ ಮತ್ತು ಕುಮಾರಧಾರಾ ನದಿಗಳನ್ನು ತಡೆದು ಕಟ್ಟಿ ವಿದ್ಯುತ್ ತಯಾರಿಸುವ ಯೋಜನೆಯೊಂದು ಚಾಲ್ತಿಗೆ ಬಂತು. ಅದುವೇ ಗುಂಡ್ಯ ಜಲ ವಿದ್ಯುತ್ ಯೋಜನೆ. ಆದರೆ ಈ ಸಲ ಘಟ್ಟದ ಮೇಲಿನವರು ಮಾತ್ರವಲ್ಲ ಇನ್ನೂ ಹೆಚ್ಚಾಗಿ ಕರಾವಳಿಯವರು ಕೂಡಾ ಎಚ್ಚೆತ್ತಿದ್ದರು, ಯಾಕೆಂದರೆ ಆಗಲೇ ಉಡುಪಿ ಜಿಲ್ಲೆಯಲ್ಲಿ  ಪಡುಬಿದ್ರಿ ಸಮೀಪದ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ  ಯೋಜನೆ  ಪ್ರಾರಂಭವಾಗುತ್ತಿತ್ತು. ಅದರ ವಿರುದ್ಧವೂ ಒಂದು ಹೋರಾಟ ಅಲ್ಲಿ ರೂಪುಗೊಂಡಿತ್ತು. ಆ ಹೋರಾಟಕ್ಕೆ ಬೆಂಬಲವಾಗಿ ನಾವು ಹಾಸನ ಜಿಲ್ಲೆಯ ರೈತಸಂಘದವರು ಕೂಡಾ ಪಡುಬಿದ್ರಿಗೆ ಹೋಗಿ ಹೋರಾಟದಲ್ಲಿ ಭಾಗವಹಿಸಿದ್ದೆವು. ಆನಂತರದ ದಿನಗಳಲ್ಲಿ ಅದು ಏನಾಯಿತು? ಎಲ್ಲಿಗೆ ತಲುಪಿತು?.  ಒಂದಿಂಚೂ ನೆಲ ಕೊಡೆವು ಎನ್ನುತ್ತಿದ್ದ ರೈತರನ್ನು ಸರ್ಕಾರವೇ ಆಮಿಷಗಳನ್ನೊಡ್ಡಿ ದಿಕ್ಕು ತಪ್ಪಿಸಿ ನೆಲ ಪಡೆಯಿತು. ಇಂದು ಆ ವಿದ್ಯುತ್  ಸ್ಥಾವರದಿಂದ ಆಗಿರುವ ಅನಾಹುತಗಳೇನು ಎನ್ನುವುದು ಬೇರೆಯೇ ಒಂದು ಅಧ್ಯಾಯ.

ಆದರೆ  ಅದರಿಂದಾಗಿ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ಬಂತು, ಅಪ್ಪಿಕೋ ಚಳುವಳಿಯ ಖ್ಯಾತಿಯ ಸುಂದರಲಾಲ್ ಬಹುಗುಣ ಅವರೂ ಬಂದು ಈ ಚಳುವಳಿಯಲ್ಲಿ ಭಾಗವಹಿಸಿದರು. ಸರ್ಕಾರ ಸ್ವಲ್ಪ ಹಿಂದೆ ಸರಿದಂತೆ ಕಂಡು ಬಂತು. ಗುಂಡ್ಯ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವುದಾಗಿಯೂ ಬದಲಿಗೆ ಘಟ್ಟದ ಮೇಲ್ಭಾಗದಲ್ಲಿರುವ ಸಣ್ಣ ಸಣ್ಣ ಹೊಳೆಗಳಿಗೆ ಸಣ್ಣ ಅಂದರೆ ಹತ್ತರಿಂದ ಇಪ್ಪತ್ತು ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆ ಮಾಡುವುದಾಗಿ ತಿಳಿಸಿತು.  ಶಿರಾಡಿ ಘಟ್ಟ ಪ್ರದೇಶದಲ್ಲಿ ಇಂತಹ ಕೆಲವು ಯೋಜನೆಗಳು ಬಂದವು. ಅವೇ ಇಂದು ನಾವು ಕಾಣುತ್ತಿರುವ ಇಂಟರ್ ನ್ಯಾಷನಲ್ ಪವರ್ ಪ್ರಾಜೆಕ್ಟ್ (ಹದಿನೆಂಟು ಮೆ.ವಾ) ಮಾರುತಿ ಜೆನ್ ಕಂಪೆನಿ, ನಾಗಾರ್ಜುನ ಎಲೆಕ್ಟ್ರಿಕ್ ಕಂಪನಿ (ತಲಾ ಹನ್ನೆರಡು ಮೆ.ವಾ). ಈ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಕಾಲದಲ್ಲಿ ಮಾತ್ರ. ಬೇಸಿಗೆಯಲ್ಲಿ ಇದು ತೀರ ಕಡಿಮೆಯಾಗುತ್ತದೆ.

ನನಗೆ ಈ ವಿದ್ಯುತ್ ಯೋಜನೆಯ ಇಂಜಿನಿಯರ್  ಒಬ್ಬರ ಪರಿಚಯವಿತ್ತು. ಅವರು ಪರಿಸರದ ಬಗ್ಗೆ ತುಂಬ ಕಾಳಜಿ ಇದ್ದವರೇ, ಯುರೋಪು ಅಮೆರಿಕಾಗಳಲ್ಲಿಯೂ ಕಿರು ವಿದ್ಯುತ್ ಯೋಜನೆಯನ್ನೂ ಮಾಡಿದವರು. ಅವರು ಈ ವಿದ್ಯುತ್ ಯೋಜನೆ ಇತರ ಸಿಬ್ಬಂದಿ ಮತ್ತು ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಕಡಿಮೆ ಪರಿಸರ ನಾಶವಾಗುವ ಹಾಗೆ ನೋಡಿಕೊಂಡರು. ಆದರೆ ಇದೂ ಕೂಡಾ ಅರ್ಧ ಸತ್ಯವೇ, ಯಾಕೆಂದರೆ  ವಿದ್ಯುತ್ ಯೋಜನೆಗಳಲ್ಲಿ ಅತಿ ಹೆಚ್ಚು ಅರಣ್ಯ ನಾಶವಾಗುವುದು ಟ್ರಾನ್ಸ್ ಮಿಷನ್ ಲೈನ್ ಗಳಲ್ಲಿ ಅದು ಈ ಯೋಜನೆಗಳಲ್ಲಿಯೂ ಆಯಿತು.

ಈ ಯೋಜನೆಗಳ ಇನ್ನೊಂದು ಮುಖವೆಂದರೆ ಇದೆಲ್ಲದರಿಂದ ಮಲೆನಾಡಿನ ಹಳ್ಳಿಗಳಿಗೆ ನಿರಂತರ ವಿದ್ಯುತ್ ದೊರೆಯುತ್ತದೆ ಎಂದು ಆಸೆ ಪಟ್ಟವರಿಗೆ ಆಘಾತ ಕಾದಿತ್ತು. ಇದರಲ್ಲಿ ಉತ್ಪಾದನೆ ಆಗುವ ವಿದ್ಯುತ್ ಆಗಲೇ ಬೇರೆ ರಾಜ್ಯಗಳ ಉದ್ಯಮಗಳಿಗೆ ಮೊದಲೇ ಮಾರಾಟವಾಗಿತ್ತು.

ಆದರೆ ಈ ಕಿರು ಜಲ ವಿದ್ಯುತ್ ಯೋಜನೆಗಳು ಕೂಡಾ ಮಲೆನಾಡಿನಲ್ಲಿ ಪ್ರಾಣಿಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದವು. ಒಂದು ಕಡೆ ಆಲೂರು ತಾಲ್ಲೂಕಿನ ಕಾಫಿ ತೋಟಗಳು ಮತ್ತು ಅರೆಮಲೆನಾಡು ಆನೆ ಮತ್ತು ಮಂಗಗಳ ಹಾವಳಿ ಅನುಭವಿಸುತ್ತಿದ್ದರೆ, ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ, ಅತ್ತಿಹಳ್ಳಿ, ಹೆತ್ತೂರು ವಲಯದಲ್ಲಿಯೂ ಅನೆ ಸೇರಿದಂತೆ ಇತರ ಪ್ರಾಣಿಗಳ ಹಾವಳಿ ಪ್ರಾರಂಭವಾಯಿತು. ಆ ಪ್ರದೇಶದ ರೈತರಿಗೆ ಕೃಷಿ ಮಾಡುವುದು ಕಷ್ಟವಾಗತೊಡಗಿತು. ಅಷ್ಟರಲ್ಲಿ ನೇತ್ರಾವತಿ ತಿರುವು ಯೋಜನೆ ಎನ್ನುವ ಮತ್ತೊಂದು ಸುದ್ದಿಯನ್ನು ರಾಜಕಾರಣಿಗಳು ಹಬ್ಬಿಸಿದರು. ಇದರದ್ದೇ ಒಂದು ಕಥೆಯಿದೆ. ಮುಂದೆ ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

You cannot copy content of this page

Exit mobile version