Home ಅಂಕಣ ಬೊಗಸೆಗೆ ದಕ್ಕಿದ್ದು-57 : ಜನರು“ ಧರ್ಮ”ಕ್ಕೆ ಸತ್ತರೆ, “ನ್ಯಾಯ” ಪರಲೋಕದಲ್ಲಿ!

ಬೊಗಸೆಗೆ ದಕ್ಕಿದ್ದು-57 : ಜನರು“ ಧರ್ಮ”ಕ್ಕೆ ಸತ್ತರೆ, “ನ್ಯಾಯ” ಪರಲೋಕದಲ್ಲಿ!

0

“..ಧಾರ್ಮಿಕ ಆಚರಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಾಣಬಲಿಯಾದ ಘಟನೆಗಳು ಕೆಲವುಗಳಿವೆ. ಕಡಿಮೆ ಸಾವುನೋವು ಸಂಭವಿಸಿದ ಘಟನೆಗಳು ಇನ್ನೂ ಬಹಳಷ್ಟಿವೆ. ಈ ಎಲ್ಲಾ ಘಟನೆಗಳಲ್ಲಿ ನಂತರ ಏನಾಯಿತು? ಯಾರಿಗಾದರೂ ಶಿಕ್ಷೆಯಾಯಿತೆ..?” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಸ್ವಾತಂತ್ರ್ಯಪೂರ್ವದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಜನರು ಕಾಲ್ತುಳಿತವೇ ಮುಂತಾದ ಕಾರಣಗಳಿಂದ ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿರುವುದನ್ನು ಮತ್ತು ಬ್ರಿಟಿಷ್ ಸರಕಾರವು “ಜನರ ಧಾರ್ಮಿಕ ನಂಬಿಕೆಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ” ಎಂಬ ಧೋರಣೆಯ ನೆಪ ಹೇಳಿ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಿಲ್ಲ; ನಂತರವೂ ತಾನಂತೂ ಜವಾಬ್ಧಾರಿ ವಹಿಸಿಕೊಳ್ಳಲಿಲ್ಲ; ಜೊತೆಗೆಯೇ ಇಂತಾ ಕಾರ್ಯಕ್ರಮಗಳನ್ನು ಆಯೋಜಿಸಿದವರಿಗೆ ಮತ್ತು ಘಟನೆಗೆ ಕಾರಣಕರ್ತರಾದವರಿಗೆ ಯಾವ ಶಿಕ್ಷೆಯನ್ನೂ ವಿಧಿಸಲಿಲ್ಲ, ಪರಿಹಾರವನ್ನೂ ಕೊಡಲಿಲ್ಲ! ‘ಅವರ ನಂಬಿಕೆ, ಅವರು ಗುಂಪು ಸೇರಿದರು, ಅವರು ಸತ್ತರು; ಅದಕ್ಕೆ ಯಾರು ಜವಾಬ್ದಾರಿ!?’ ಇದು ಬ್ರಿಟಿಷ್ ಸರಕಾರದ ಮನೋಭಾವ ಮತ್ತು ನಿಲುವಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿಯಾದರೂ ಪರಿಸ್ಥಿತಿ ಬದಲಾಗಿದೆಯೆ!?

ಹೌದು! “ಜಾತ್ಯತೀತ” ಸರಕಾರಗಳೇ ಧಾರ್ಮಿಕ ಆಚರಣೆಗಳನ್ನು “ನಂಬಿಕೆ”ಯ ಹೆಸರಿನಲ್ಲಿ ಮತ್ತು ಮತಗಳಿಕೆಯ ಸಾಧನಗಳಾಗಿ ಪೋಷಿಸುತ್ತಿವೆ ಮಾತ್ರವಲ್ಲ; ಉತ್ತರ ಪ್ರದೇಶದಂತಾ ರಾಜ್ಯಗಳ ಸರಕಾರಗಳು ಅವುಗಳನ್ನು ಪೋಷಿಸುತ್ತಿವೆ. ಸರಕಾರಗಳು ಗುಪ್ತವಾಗಿ ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋದ್ಯಮ ಮತ್ತು ವ್ಯಾಪಾರ-ವಾಣಿಜ್ಯದ ದೃಷ್ಟಿಕೋನದಿಂದ ನೋಡುತ್ತಿವೆ ಮತ್ತು ಸ್ವತಃ ಪ್ರಾಯೋಜಿಸುತ್ತಿವೆ. ನಿಜ! ಯಾತ್ರಿಕರಿಗೆ ಸೇರಲು ವಾಹನ ವ್ಯವಸ್ಥೆ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಭದ್ರತೆ ಮುಂತಾದ ಕ್ರಮಗಳನ್ನು ಎಲ್ಲಾ ಸರಕಾರಗಳು ಕೈಗೊಳ್ಳುತ್ತಿವೆ. ಆದರೆ ಅಷ್ಟು ಸಾಕೆ!? ಲಕ್ಷಾಂತರ ಜನರು ಸೇರುವ ಇಂತಾ ಅಪಾಯಕಾರಿ ಆಚರಣೆಗಳಲ್ಲಿ ದುರ್ಘಟನೆಗಳು ನಡೆದು ಭಾರೀ ಪ್ರಮಾಣದ ಸಾವು- ನೋವುಗಳು ಆಗದಂತೆ ತಡೆಯ ಬೇಡವೆ? ತಡೆಯಲಾಗಿದೆಯೇ? ಜವಾಬ್ದಾರರನ್ನು ಶಿಕ್ಷಿಸಲಾಗಿದೆಯೇ? ಒಂದಿಷ್ಟು ಪರಿಹಾರವನ್ನಷ್ಟೇನೋ ಒದಗಿಸಲಾಗಿದೆ. ಆದರೆ, ಮೃತರಿಗೆ, ನೊಂದವರಿಗೆ ನಿಜವಾದ ನ್ಯಾಯ ಸಿಕ್ಕಿದೆಯೇ? ಮುಂದೆ ನೋಡೋಣ.

ಮೊದಲಿಗೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದಿರುವ ಕೆಲವು ಗಂಭೀರ ಘಟನೆಗಳ ಮೇಲೆ ಒಮ್ಮೆ ಮೇಲುಮೇಲಕ್ಕಾದರೂ ದೃಷ್ಟಿ ಹರಿಸುವುದು ಒಂದು ಸಮಗ್ರ ಚಿತ್ರಣವನ್ನು ನೀಡುತ್ತದೆ.

1954ರಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಆಧುನಿಕ ಭಾರತದಲ್ಲಿಯೇ ಅತ್ಯಂತ ದೊಡ್ಡ ದುರಂತವೊಂದು ಸಂಭವಿಸಿ, ಸುಮಾರು 800 ಮಂದಿ ಬಲಿಯಾಗಿದ್ದರು. ಕೆಟ್ಟ ಜನಸಂದಣಿ ನಿರ್ವಹಣೆ, ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿತ್ತು. ಇದರ ನಂತರವೂ ಇಂತಾ ದುರಂತ ಘಟನೆಗಳು ನಡೆಯುತ್ತಾ ಬಂದವು. ಅವುಗಳನ್ನು ಇಲ್ಲಿ ಪಟ್ಟಿಮಾಡುವುದೂ ಸಾಧ್ಯವಿಲ್ಲ.

ಕಳೆದ ಇಪ್ಪತ್ತು ವರ್ಷಗಳನ್ನು ಮಾತ್ರವೇ ನೋಡುವುದಾದಲ್ಲಿ, 2005ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಂದಾರದೇವಿ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 340ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದರು. ರಸ್ತೆ ಬದಿಯ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು, ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದರು. ನೂರಾರು ಭಕ್ತರು ತೆಂಗಿನಕಾಯಿ ಒಡೆದು, ಎಣ್ಣೆ ಸುರಿದ ನೆಲದಲ್ಲಿ, ಮೆಟ್ಟಿಲುಗಳಲ್ಲಿ ಜಾರಿ ಬಿದ್ದು, ನೂರಾರು ಜನರು ಅವರನ್ನು ತುಳಿದು ಓಡಿದ್ದರು. ಜೊತೆಗೆ ಕೆಟ್ಟದಾಗಿ ನಿರ್ಮಿಸಿದ್ದ ಭದ್ರತಾ ಬೇಲಿಗಳು ಮುರಿದು ಬಿದ್ದು ಭದ್ರತಾ ವ್ಯವಸ್ಥೆಯೇ ಕುಸಿದಿತ್ತು.

2008ರಲ್ಲಿ ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾದೇವಿ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿ, 162 ಮಂದಿ ಮೃತಪಟ್ಟಿದ್ದರು. ದೇವಾಲಯವಿರುವ ಬೆಟ್ಟದ ಮೇಲೆ ಭೂಕುಸಿತ ಉಂಟಾಗಿದೆ ಎಂಬ ವದಂತಿ ಅಗಲ ಕಿರಿದಾದ, ಕಡಿದಾದ ಏರು ದಾರಿಯಲ್ಲಿ ಕಾಲ್ತುಳಿತ ಉಂಟಾಗಿತ್ತು.

2008ರಲ್ಲಿಯೇ ರಾಜಸ್ಥಾನದ ಜೋಧ್‌ಪುರದ ಚಾಮುಂಡಾದೇವಿ ದೇವಾಲಯದಲ್ಲಿ ದಸರಾ ಸಂದರ್ಭದಲ್ಲಿ ಸೇರಿದ್ದ ಭಾರೀ ಜನಸಂದಣಿಯು ಸ್ಥಳದಲ್ಲಿ ಬಾಂಬ್ ಸ್ಫೋಟಿಸಲಿದೆ ಎಂಬ ವದಂತಿಯ ಕಾರಣದಿಂದ ದ್ವಾರದ ಬಳಿಗೆ ಒಮ್ಮೆಲೇ ನುಗ್ಗಿದುದರಿಂದ ಸುಮಾರು 250 ಜನರು ಪ್ರಾಣಕಳೆದುಕೊಂಡಿದ್ದರು.

2010ರಲ್ಲಿ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಕುಂದ ಎಂಬಲ್ಲಿ ಸ್ವಯಂ ಘೋಷಿತ ದೇವ ಮಾನವ ಕೃಪಾಳು ಮಹಾರಾಜ್ ಎಂಬಾತನ ರಾಮ್ ಜಾನಕಿ ಮಂದಿರದ ಸಂಕೀರ್ಣದಲ್ಲಿ ಕಾಲ್ತುಳಿತ ಉಂಟಾಗಿ, ಅರ್ಧದಷ್ಟು ಮಕ್ಕಳು ಸೇರಿದಂತೆ, 63 ಮಂದಿ ಮೃತರಾಗಿದ್ದರು. ಯಾವುದೇ ಸರಿಯಾದ ಭದ್ರತಾ ಕ್ರಮ ಇಲ್ಲದೇ ಈತ ಬಟ್ಟೆಬರೆ, ಪಡಿತರ ಸಾಮಗ್ರಿ ದಾನಮಾಡುವುದಾಗಿ ಹೇಳಿದ್ದುದರಿಂದ ಸೇರಿದ್ದ 10,000 ಮಂದಿ ನೂಕುನುಗ್ಗಲಿನಲ್ಲಿ ತೊಡಗಿದ್ದರು.

2011ರಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ಪುಲ್‌ಮೇಡು ಎಂಬಲ್ಲಿ ಶಬರಿಮಲೆಯಿಂದ ಹಿಂತಿರುಗಿ ದಟ್ಟ ಅರಣ್ಯಗಳ ನಡುವಿನ ಬೆಟ್ಟದ ರಸ್ತೆಯಲ್ಲಿ ಸಾಗಿ ಬರುತ್ತಿದ್ದ ಯಾತ್ರಿಕರ ಸಂದಣಿಯ ಮೇಲೆ ಜೀಪೊಂದು ಉರುಳಿದ ಪರಿಣಾಮವಾಗಿ ಗೊಂದಲ ಉಂಟಾಗಿ, ಭಾರೀ ಕಾಲ್ತುಳಿತ ನಡೆದಿತ್ತು. ಆಗ 36 ಮಂದಿ ಸಾವಿಗೀಡಾಗಿದ್ದರು.

2013ರಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕುಂಭಮೇಳದ ಸಮಯದಲ್ಲಿ ಅಲ್ಲಿನ ರೈಲು ನಿಲ್ದಾಣದಲ್ಲಿ ಮುಖ್ಯ ಸ್ನಾನದ ದಿನ ಸಾವಿರಾರು ಮಂದಿ ಮನೆಗೆ ತೆರಳಲು ಜಮಾಯಿಸಿದ್ದರು. ಕಿಕ್ಕಿರಿದ ಜನರಿಂದ ತುಂಬಿದ್ದ ಕಾಲು ಸೇತುವೆಯೊಂದು ಮುರಿದು ಕೆಳಗಿದ್ದ ಜನರ ಮೇಲೆ ಬಿದ್ದಿತ್ತು. ಪರಿಣಾಮವಾಗಿ ಕಾಲ್ತುಳಿತವೂ ಉಂಟಾಗಿತ್ತು. ಸುಮಾರು 115 ಮಂದಿ ಜೀವಂತವಾಗಿ ಮನೆ ತಲುಪಲಿಲ್ಲ.

2013ರಲ್ಲಿ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್‌ಗಢ್ ಮಾತಾ ದೇವಾಲಯದಲ್ಲಿ ಜನರು ಸಾಗುತ್ತಿದ್ದ ಸಿಂಧ್ ನದಿಯ ಸೇತುವೆ ಕುಸಿಯಲಿದೆ ಎಂಬ ವದಂತಿ ಹಬ್ಬಿ, ಜನರ ನೂಕು ನುಗ್ಗಲು ಆರಂಭವಾಗಿ, ಜನರು ಒಂದೋ ಕಾಲ್ತುಳಿತಕ್ಕೆ ಇಲ್ಲವೇ ನದಿಗೆ ಬಿದ್ದು ಸುಮಾರು 115 ಪ್ರಾಣಗಳು ಬಲಿಯಾಗಿದ್ದವು.

2015ರಲ್ಲಿ ಆಂಧ್ರಪ್ರದೇಶದ ರಾಜಮುಂಡ್ರಿಯ ಮಹಾಪುಷ್ಕರಲುವಿನಲ್ಲಿ ಗೋದಾವರಿ ಪುಷ್ಕರಂ ಉತ್ಸವದ ಆರಂಭದ ದಿನ ಕೋಟಗುಮ್ಮಂ ಸ್ನಾನ ಘಟ್ಟದಲ್ಲಿ ವಿಐಪಿಗಳ ಓಡಾಟ ಮತ್ತು ಕೆಟ್ಟ ನಿರ್ವಹಣೆಯ ಕಾರಣದಿಂದ ಕಾಲ್ತುಳಿತ ಉಂಟಾಗಿ, 27 ಮಂದಿ ಸತ್ತಿದ್ದರು.

2016ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಪುತ್ತಿಂಗಲ್ ದೇವಿ ದೇವಾಲಯದಲ್ಲಿ ಎರಡು ಗುಂಪುಗಳ ನಡುವೆ ಸುಡುಮದ್ದು ಪೈಪೋಟಿ ಉಂಟಾಗಿ, ಭಾರೀ ಪ್ರಮಾಣದ ಬೆಂಕಿ ಅನಾಹುತವಾದುದಲ್ಲದೇ ನಡುನಡುವೆ ಪಟಾಕಿ ದಾಸ್ತಾನುಗಳ ಸರಣಿ ಸ್ಫೋಟ ಉಂಟಾಗಿತ್ತು. ಈ ದುರ್ಘಟನೆಯಲ್ಲಿ 113-117 ಮಂದಿ ಮೃತಪಟ್ಟಿದ್ದರು.

ಇನ್ನು ಇತ್ತೀಚಿಗಿನ ಘಟನೆಗಳಿಗೆ ಬರುವುದಾದಲ್ಲಿ 2023ರಲ್ಲಿ ಮಧ್ಯಪ್ರದೇಶದ ಬೇಲೇಶ್ವರ್ ದೇವಾಲಯದಲ್ಲಿ ಪುರಾತನ ಕಾಲದ ಮೆಟ್ಟಲು ಬಾವಿ (ಬಾವ್ಡಿ) ಮೇಲೆ ಕಟ್ಟಲಾಗಿದ್ದ  ಕಾಂಕ್ರಿಟ್ ರಚನೆಯು ರಾಮನವಮಿಯ ಹವನದಲ್ಲಿ ಭಾಗವಹಿಸುತ್ತಿದ್ದ ಭಕ್ತರ ಭಾರ ತಡೆಯಲಾರದೇ ಕುಸಿದು, 36 ಮಂದಿ ಪ್ರಾಣ ಕಳೆದುಕೊಂಡಿದ್ದರು.

2024ರಲ್ಲಿ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಚನದ ವೇಳೆ ಅವಕಾಶಕ್ಕೆ ಮೀರಿ ಜನರು ಸೇರಿದುದರಿಂದ ಕಿರಿದಾದ ಓಣಿಗಳು ಮತ್ತು ದ್ವಾರಗಳಲ್ಲಿ ಕಾಲ್ತುಳಿತ ಉಂಟಾಗಿ, 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇವು ಧಾರ್ಮಿಕ ಆಚರಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಾಣಬಲಿಯಾದ ಘಟನೆಗಳು ಮಾತ್ರ. ಕಡಿಮೆ ಸಾವುನೋವು ಸಂಭವಿಸಿದ ಘಟನೆಗಳು ಇನ್ನೂ ಬಹಳಷ್ಟಿವೆ. ಈ ಎಲ್ಲಾ ಘಟನೆಗಳಲ್ಲಿ ನಂತರ ಏನಾಯಿತು? ಯಾರಿಗಾದರೂ ಶಿಕ್ಷೆಯಾಯಿತೆ? 1954ರ ಪ್ರಯಾಗ್ ರಾಜ್ ಘಟನೆಯ ಬಗ್ಗೆ ಗಂಗಾನಾಥ್ ಸಮಿತಿಯು- ಕೆಲವು ಆಖಾಡಗಳ “ಸಂತ”ರಿಗೆ ಮತ್ತು ವಿಐಪಿಗಳಿಗೆ ಅವಕಾಶ ಕಲ್ಪಿಸಲು ಸಾಮಾನ್ಯ ಜನರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದುದು, ಒಂದೇ ಹೊತ್ತಿಗೆ ಎಲ್ಲರಿಗೂ ಸ್ನಾನದ ಅವಕಾಶ ಕಲ್ಪಿಸಿದುದು ದುರಂತಕ್ಕೆ ಕಾರಣವಾಯಿತೆಂದು ಹೇಳಿ, ಸಂಪೂರ್ಣ ನಿರ್ಲಕ್ಷ್ಯಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸರನ್ನು ದೋಷಿ ಮಾಡಿತು. ಕ್ರಮ? ಏನೂ ಇಲ್ಲ.

ಇದೇ ರೀತಿ ಮೇಲೆ ಹೇಳಿದ ಎಲ್ಲಾ ಘಟನೆಗಳ ತನಿಖೆ ಬಗ್ಗೆ ಪರಿಶೀಲಿಸಿದಾಗಲೂ ಕಂಡುಬಂದ ಒಂದೇ ಅಂಶವೆಂದರೆ ಪ್ರತಿಯೊಂದರಲ್ಲೂ ನ್ಯಾ. ರಂಜನ್ ಕೋಚಾರ್, ನ್ಯಾ. ಜಸ್‌ರಾಜ್ ಚೋಪ್ರಾ, ನ್ಯಾ. ರಾಕೇಶ್ ಸಕ್ಸೇನಾ, ನ್ಯಾ. ಎಸ್. ಗೋಪಿನಾಥನ್ ಆಯೋಗ… ಹೀಗೆ ನ್ಯಾಯಾಂಗ ಆಯೋಗಗಳನ್ನು ತಕ್ಷಣವೇ ನೇಮಿಸಲಾಗಿದೆ. ಪ್ರತಿಯೊಂದರಲ್ಲೂ ಆಡಳಿತದಲ್ಲಿರುವವರ ಸಾರಾಸಗಟು ಭ್ರಷ್ಟಾಚಾರ, ನಿರ್ಲಕ್ಷ್ಯ, ಬೇಜವಾಬ್ದಾರಿ, ಸುರಕ್ಷತಾ ಕ್ರಮಗಳ ಕೊರತೆ.. ಹೀಗೆ ಕಾರಣಗಳನ್ನು ಬೆಟ್ಟು ಮಾಡಲಾಗಿದೆ. ಇವೆಲ್ಲವುಗಳ ವರದಿಗಳೂ ತೀರಾ ವಿಳಂಬವಾಗಿ ಬಂದಿದ್ದವು. ಅವುಗಳು ಬಂದಾಗ ಘಟನೆಯ ಬಗ್ಗೆಯೇ ಎಲ್ಲರೂ ಮರೆತಿದ್ದರು. ಭಾರತದಲ್ಲಿ ಯಾವುದೇ ದೊಡ್ಡ ಘಟನೆ ನಡೆದಾಗ ಎಲ್ಲರೂ ನ್ಯಾಯಾಂಗ ತನಿಖೆ, ನ್ಯಾಯಾಂಗ ತನಿಖೆ ಎಂದು ಕೂಗುತ್ತಾರೆ. ಸರಕಾರಗಳು ತಕ್ಷಣವೇ ಕಾಯುತ್ತಿರುವಂತೆ ಅದನ್ನು ನೇಮಿಸಿ, ಜನರ ಬಾಯಿ ಮುಚ್ಚಿಸುತ್ತದೆ. ತನಿಖೆ, ವರದಿ ವಿಳಂಬವಾಗುತ್ತದೆ. ಅದು ಬಂದಾಗ ಅದನ್ನು ಮೂಸಿನೋಡುವವರೂ ಇರುವುದಿಲ್ಲ. ಅಷ್ಟೆಲ್ಲಾ ಸಾರ್ವಜನಿಕ ಹಣ, ಶ್ರಮ ಖರ್ಚು ಮಾಡಿದ ವರದಿಗಳು “ಮುಂದಿನ ಸುರಕ್ಷಾ ಕ್ರಮಗಳಿಗೆ ಮಾದರಿ”ಯಾಗಿ, ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಇದೇನೂ ಬೀಸು ಹೇಳಿಕೆಯಲ್ಲ! ವಾಸ್ತವಾಂಶಗಳು ಇದನ್ನು ಸಮರ್ಥಿಸುತ್ತವೆ.

ಮೇಲೆ ಹೇಳಿದ ಕಾರಣಗಳಲ್ಲದೇ ಕೆಲವೊಂದು ವಿಶೇಷ ಕಾರಣಗಳನ್ನು ನೋಡೋಣ. ಮಹಾರಾಷ್ಟ್ರದ ಮಂದಾರದೇವಿ ದೇವಾಲಯದಲ್ಲಿ ನೆಲ, ಮೆಟ್ಟಲುಗಳೆಲ್ಲವೂ ಎಣ್ಣೆ, ಒಡೆದ ತೆಂಗಿನಕಾಯಿಗಳಿಂದ ಜಾರುತ್ತಿದ್ದವು. ಮಧ್ಯಪ್ರದೇಶದ ರತನ್‌ಘಡ್ ಮಾತಾ ಸೇತುವೆ ಮೇಲೆ ವಾಹನಗಳನ್ನು ಬಿಡಲು ಪೊಲೀಸರು ಲಂಚಪಡೆದಿದ್ದರು, ಜನರನ್ನು ನಿಯಂತ್ರಿಸಲು ಸಾಧ್ಯವಾಗದಾಗ ಲಾಠಿ ಚಾರ್ಚ್ ಮಾಡಿದ್ದರು. ಅದೂ ನಡೆಯದಾಗ ಜನರು ಓಡಿಹೋಗಲಿ ಎಂದು ಸೇತುವೆ ಬೀಳುತ್ತಿದೆ ಎಂಬ ವದಂತಿಯನ್ನು ಅವರೇ ಹಬ್ಬಿಸಿದ್ದರು! ಕೇರಳದ ಪುತ್ತಿಂಗಲ್‌ನಲ್ಲಿ ಪರವಾನಿಗೆ ಇಲ್ಲದೆಯೇ ಪಟಾಕಿಗಳ ದಾಸ್ತಾನು, ಪ್ರದರ್ಶನ ಎಲ್ಲವೂ ನಡೆದಿತ್ತು. ಮಧ್ಯಪ್ರದೇಶದ ಬೇಲೇಶ್ವರ ದೇವಾಲಯದ ಮೆಟ್ಟಲು ಬಾವಿಯ ಮೇಲೆ ಕಟ್ಟಿದ್ದ ಕಾಂಕ್ರೀಟ್ ಸೇತುವೆಗೆ ಪರವಾನಿಗೆಯೂ ಇರಲಿಲ್ಲ ಮತ್ತು ಈ ಅಕ್ರಮ ಸೇತುವೆಗೆ ಅಷ್ಟೊಂದು ಜನರನ್ನು ತಾಳುವ ಶಕ್ತಿಯೇ ಇರಲಿಲ್ಲ! ಪ್ರತೀಯೊಂದು ಘಟನೆಯನ್ನು ನೀವು ಪರಿಶೀಲಿಸಿದರೆ, ಇಂತದ್ದೇ ನೋಡಲು ಸಿಗುತ್ತದೆ. ಧರ್ಮದ ಹೆಸರಲ್ಲಿ ನೀವು ಏನೂ ಮಾಡಬಹುದು, ಜೀವಗಳ ಜೊತೆಗೆ ಚೆಲ್ಲಾಟವನ್ನೂ ಆಡಬಹುದು.

ಈ ಪ್ರಕರಣಗಳಲ್ಲಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ, ವರ್ಗಾವಣೆ ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಇದನ್ನೂ ಮಾಡಲಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಕ್ರಿಮಿನಲ್ ಕೇಸುಗಳೂ ಆಗಿವೆ. ವಿಚಾರಣೆಗಳು ಮುಂದುವರಿಯುತ್ತಲೇ ಇವೆ. ಉದಾಹರಣೆಗೆ ಕೇರಳದ ಪುತ್ತಿಂಗಲ್ ಪಟಾಕಿ ದುರಂತದಲ್ಲಿ ದೇವಾಲಯದ ಆಡಳಿತ ಮತ್ತು ಪಟಾಕಿ ಗುತ್ತಿಗೆದಾರರೂ ಸೇರಿದಂತೆ 56 ಮಂದಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಆದರೇನು? ಇಷ್ಟು ವರ್ಷಗಳಾದರೂ ವಿಚಾರಣೆ ಇನ್ನೂ ಮುಗಿದಿಲ್ಲ. ಈ ಒಂದೇ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ರಚಿಸುವಂತೆಯೂ ಈ ವಿಳಂಬದಿಂದ ರೋಸಿದ ಕೇರಳ ಹೈಕೋರ್ಟ್ ಸಲಹೆಯನ್ನೂ ನೀಡಿತ್ತು. ಆದರೆ, ಏನೂ ಆಗಿಲ್ಲ. ಎಲ್ಲಾ ಪ್ರಕರಣಗಳ ಎಲ್ಲಾ ಆರೋಪಿಗಳು ಜಾಮೀನಿನಲ್ಲಿ ತಿರುಗುತ್ತಿದ್ದಾರೆ ಇಲ್ಲವೇ ಸತ್ತಿದ್ದಾರೆ. ಒಬ್ಬರಿಗೂ ಜೈಲು ಶಿಕ್ಷೆಯಾದ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ!

“ಧರ್ಮ”ಕ್ಕೆ ಸತ್ತ ಜನರಿಗೆ ಪರಲೋಕದಲ್ಲಷ್ಟೇ “ನ್ಯಾಯ” ಸಿಗಬಹುದೇನೋ!

ಆದರೂ, ವರ್ಷ ವರ್ಷವೂ ನಡೆಯುತ್ತಿರುವ ಇಂತಾ ಘಟನೆಗಳಿಗೆ ಪರಿಹಾರವಿಲ್ಲವೆ? ಸಾಮಾನ್ಯವಾಗಿ ರಾಜಕಾರಣಿಗಳು, ಪೊಲೀಸರನ್ನು ದೂರುತ್ತಾರೆ. ಪೊಲೀಸರು ಸೂಕ್ತ ಸಂಪನ್ಮೂಲ ಇಲ್ಲವೆಂದು ರಾಜಕಾರಣಿಗಳನ್ನು ದೂರುತ್ತಾರೆ. ಆಯೋಜಕರನ್ನು ಪ್ರಶ್ನಿಸುವಂತಿಲ್ಲ; ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ! ನಿಯಮಗಳಿದ್ದರೂ ಅನುಸರಿಸುವವರಿಲ್ಲ. ವಾಸ್ತವದಲ್ಲಿ ವಿಪತ್ತು ನಿರ್ವಹಣಾ ಏಜೆನ್ಸಿಗಳ ಮಾರ್ಗದರ್ಶಿ ಸೂತ್ರಗಳಿದ್ದರೂ ಅನುಷ್ಟಾನವಿಲ್ಲ. ಯಾಕೆಂದು ಕೇಳುವವರಿಲ್ಲ. ಇದೊಂದು ವಿಷವರ್ತುಲ. ತನಿಖಾ ಆಯೋಗಗಳು ಕಾರಣಗಳನ್ನು ಹುಡುಕುತ್ತವೆ, ಜವಾಬ್ದಾರಿಯನ್ನು ನಿಗದಿಪಡಿಸುತ್ತವೆ. ಆದರೆ, ಅನುಷ್ಟಾನ ಮಾತ್ರ ಬಹುತೇಕ ಸೊನ್ನೆ. ಇಂತಾ ಸಂದರ್ಭಗಳಲ್ಲಿ ಮಾಡಬಹುದಾದದ್ದು ಏನು? ಮುಂದೆ ನೋಡೋಣ.

You cannot copy content of this page

Exit mobile version