Saturday, June 15, 2024

ಸತ್ಯ | ನ್ಯಾಯ |ಧರ್ಮ

ಮಾನವ ಪ್ರಾಣಿ ಸಂಘರ್ಷ | ರಾಜಕೀಯ ಲಾಭದ ಯೋಜನೆಗಳು

ಒಮ್ಮೆ  ರಸ್ತೆಗಳಾದರೆ ಜನ ಸಂಪರ್ಕ ಏರ್ಪಡುತ್ತದೆ. ಜಮೀನಿನ ಬೆಲೆ ಏರುತ್ತದೆ. ಮಲೆನಾಡಿನಲ್ಲಿ ರೆಸಾರ್ಟು – ಹೋಮ್ ಸ್ಟೇಗಳೂ ಹೆಚ್ಚುತ್ತವೆ. ಇವೆಲ್ಲದರ ಒಟ್ಟು ಪರಿಣಾಮ ಅರಣ್ಯ ನಾಶ!….ಇದು ಪ್ರಸಾದ್‌ ರಕ್ಷಿದಿಯವರ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಅಂಕಣದ ಈ ದಿನದ ಹೂರಣ.

ಎತ್ತಿನ ಹೊಳೆ ಯೋಜನೆ ಎಂದು ಮರು ನಾಮಕರಣಗೊಂಡ ನದೀ ತಿರುವು ಯೋಜನೆಗೆ  ಭರದಿಂದ ಸಿದ್ಧತೆ ನಡೆಯಿತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಯೋಜನೆಗೆ ಪ್ರಾರಂಭದ ಭೂಮಿ ಪೂಜೆ ನಡೆದದ್ದು ಮಲೆನಾಡಿನಲ್ಲಿ ಅಲ್ಲ. ಬದಲಿಗೆ ಈ ಯೋಜನೆಯ ಫಲಾನುಭವಿಗಳು ಎಂದು ಹೆಸರಿಸಲಾದ ಜನರಿರುವ ತುಮಕೂರು ಜಿಲ್ಲೆಯಲ್ಲಿ!  ಈ ಯೋಜನೆ ಎಲ್ಲರಿಗೂ ನಿರಂತರ ಹಾಲು ಕರೆಯುವ ಹಸುವಾಗಬಲ್ಲದು ಹಾಗೂ ಹಲವರಿಗೆ ರಾಜಕೀಯ ಲಾಭವನ್ನೂ ತಂದು ಕೊಡಬಲ್ಲದು ಎಂಬ ವಿಚಾರ ರಾಜಕಾರಣಿಗಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳೂ ಇಬ್ಬಗೆಯ ನೀತಿ ಅನುಸರಿಸ ತೊಡಗಿದರು.

ಕರಾವಳಿ ಮತ್ತು ಮಲೆನಾಡಿನಲ್ಲಿ ಇದೊಂದು ಸಣ್ಣ ಕುಡಿಯುವ ನೀರಿನ ಯೋಜನೆಯೆಂದು ಹೇಳಿದರೆ ಬಯಲು ಸೀಮೆಯ ಜನರಿಗೆ ಅದರಲ್ಲಿಯೂ ಮುಖ್ಯವಾಗಿ ತುಮಕೂರು, ಕೋಲಾರದ ಜನರಿಗೆ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಇದು ಪರಿಹಾರವೆಂಬಂತೆ ಇದನ್ನು ಬಿಂಬಿಸಿದರು. ಮತ್ತೆ ಜನರಿಂದ ವಿರೋಧ ಪ್ರಾರಂಭವಾಯಿತು. ಆದರೆ ಈಗ ಆಳುವವರು ಬಹಳ ಎಚ್ಚೆತ್ತಿದ್ದರು. ಜನರ ವಿರೋಧವನ್ನು ಹೇಗೆ ತಣ್ಣಗಾಗಿಸಬೇಕು ಎನ್ನುವುದನ್ನು ಬಹಳ ಚೆನ್ನಾಗಿ ಅವರು ಅರಿತಿದ್ದರು.  ಅದರ ಭಾಗವಾಗಿ ಎಲ್ಲೆಲ್ಲಿ “ಅಭಿವೃದ್ಧಿ ಯೋಜನೆ”ಗಳು ಪ್ರಾರಂಭವಾಗುತ್ತವೆಯೋ ಅಲ್ಲಿ ತಾವೇ ಮುಂದೆ ನಿಂತು ಒಂದಷ್ಟು ತೋರಿಕೆ ಪ್ರತಿರೋಧವನ್ನು ಹುಟ್ಟುಹಾಕುವುದು. ಆಗ ನಿಜವಾದ ಹೋರಾಟಗಾರರು ಮತ್ತು ಈ ನಕಲಿ ಹೋರಾಟಗಾರರ ಮಧ್ಯೆ ಗೊಂದಲವಾಗುತ್ತದೆ. ಆ ಮೂಲಕ ಜನರ ಮನಸ್ಸಿನಲ್ಲಿಯೂ ಗೊಂದಲವಾಗುತ್ತದೆ.

ಎರಡನೇ ಹಂತ ಭೂ ಸ್ವಾಧೀನ. ಅದಕ್ಕೆ ಕಂತ್ರಾಟುದಾರರನ್ನೇ ಮುಂದೆ ಬಿಡುವುದು. ಅವರು ಯೋಜನೆಗೆ ಅಗತ್ಯವಾದ ಜಮೀನಿನ ಮಾಲೀಕರೊಂದಿಗೆ ಮಾತನಾಡಿ ಅವರಿಗೆ ಸರ್ಕಾರದಿಂದ ಬರಬೇಕಾದ ಎಲ್ಲ ಪರಿಹಾರವನ್ನು ಕೊಡಿಸುವುದಲ್ಲದೆ, ಈ ಕೂಡಲೇ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟರೆ ಅದಕ್ಕೊಂದಷ್ಟು ಆಕರ್ಷಕವಾದ ಗುಡ್ ವಿಲ್ ಹಣ ( ಇದು ಕೆಲವು ಕಡೆ ಎಕರೆಗೆ ಎರಡು ಮೂರು ಲಕ್ಷದಷ್ಟಿತ್ತು) ವನ್ನು ಕೊಡುವುದು,  ಈ ಬಗ್ಗೆ ಒಂದು ಅಧಿಕೃತ ಒಪ್ಪಂದವನ್ನೂ ಮಾಡಿಕೊಂಡರು. ಸರ್ಕಾರವೂ ಕೂಡಾ ಈಗ ಜಮೀನಿಗೆ ಸರ್ಕಾರಿ ದಾಖಲೆಯ ಬೆಲೆಯ ಮೂರು ಪಟ್ಟು ಹಾಗೂ ಅಲ್ಲಿರುವ ಬೆಳೆಗೆ ಇನ್ನೊಂದಿಷ್ಟು ವಿಶೇಷ ಪರಿಹಾರವನ್ನೂ ನಿಗದಿ ಮಾಡಿತು. ಇದರಿಂದಾಗಿ ಕಾಫಿ ವಲಯದಲ್ಲಿ ಒಂದು ಎಕರೆಗೆ ಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷಗಳ ವರೆಗೆ ಬೆಲೆ ಇದ್ದ ಭೂಮಿಗೆ ಮೂವತ್ತು ನಲುವತ್ತು ಕೆಲವು ಕಡೆ ಐವತ್ತು ಲಕ್ಷಗಳವರೆಗೆ ಪರಿಹಾರ ಸಿಕ್ಕಿತು.  ಜಮೀನು ಕೊಟ್ಟವರೇ ಬುದ್ಧಿವಂತರು ಎನ್ನುವ ವಾತಾವರಣ ನಿರ್ಮಾಣವಾಯಿತು. ಪಕ್ಕದಲ್ಲಿದ್ದವರು ವಿರೋಧಿಸುವುದು ಹೋಗಲಿ ತನ್ನ ಜಮೀನು ಕೇಳಲಿಲ್ಲವಲ್ಲ ಎಂದು ಹಲುಬಿದರು.  ಅದರೊಂದಿಗೆ ಎತ್ತಿನ ಹೊಳೆ ಯೋಜನೆ ಪ್ರದೇಶದಲ್ಲಿ ಎಲ್ಲ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳಿತು.  ಇದರಿಂದಾಗಿ ಮಲೆನಾಡಿನ ಭಾಗದಲ್ಲಿ ರಸ್ತೆ ಇಲ್ಲದೆ ವರ್ಷದ ಆರು ತಿಂಗಳು ಹೊರಜಗತ್ತಿನ ಸಂಪರ್ಕದಿಂದ ಹೊರಗುಳಿಯುತ್ತಿದ್ದ ಹಲವಾರು ಗ್ರಾಮಗಳ ಜನರು ಈಗಲಾದರೂ ತಮ್ಮ ಸಮಸ್ಯೆ ಬಗೆಹರಿಯುತ್ತದೆಂದು ಸಂತಸ ಗೊಂಡರು.

ಒಮ್ಮೆ  ರಸ್ತೆಗಳಾದರೆ ಜನ ಸಂಪರ್ಕ ಏರ್ಪಡುತ್ತದೆ.  ಜಮೀನಿನ ಬೆಲೆ ಏರುತ್ತದೆ. ಮಲೆನಾಡಿನಲ್ಲಿ ರೆಸಾರ್ಟು -ಹೋಮ್ ಸ್ಟೇಗಳೂ ಹೆಚ್ಚುತ್ತವೆ. ಜನರಿಗೆ ಉದ್ಯೋಗ ಹೆಚ್ಚುತ್ತದೆ.  ಹೀಗಾಗಿ ಕೂಲಿ ಕಾರ್ಮಿಕರು, ಟೀ ಅಂಗಡಿಯವರು, ಇತರ ಸಣ್ಣ ವ್ಯಾಪಾರದವರು, ಮರ- ಮರಳು ದಂಧೆಯವರು, ಗಾರೆಯವರು, ಇನ್ನಿತರ ಕುಶಲ ಕರ್ಮಿಗಳು ಎಲ್ಲರೂ ಒಂದಷ್ಟು ಕಾಸು ಕಾಣುತ್ತಾರೆ.

ದಶಕಗಳ ಕಾಲ ನಿರಂತರ ಪ್ರಾಕೃತಿಕ ತೊಂದರೆಗಳು, ಕಾಯಂ ನಷ್ಟವನ್ನೇ ತರುತ್ತಿದ್ದ ಬೆಲೆ ವ್ಯವಸ್ಥೆ, ಕೂಲಿ ಕಾರ್ಮಿಕರ ಕೊರತೆ, ನಗರಗಳಿಗೆ ಹೋಲಿಸಿದರೆ ಯಾವುದೇ ರೀತಿಯ ಅಭಿವೃದ್ಧಿ ಕಾಣದ ಹಳ್ಳಿಗಳು ಮುಂತಾದ ಬವಣೆ ಅನುಭವಿಸುತ್ತಿದ್ದವರಿಗೆ ಇದರಿಂದ ಬಿಡುಗಡೆ ದೊರೆತೀತು ಎಂಬ ಮಾನವ ಸಹಜ ಆಸೆಯನ್ನೂ ನಾವು ಕಡೆಗಣಿಸಬಾರದು.

ಇವೆಲ್ಲವೂ ಸೇರಿ,  ಮಲೆನಾಡಿನಲ್ಲಿ ಎತ್ತಿನ ಹೊಳೆ ಯೋಜನೆಯ ಬಗ್ಗೆ ವಿರೋಧ ಕೇವಲ ಕೆಲವೇ ಜನರದ್ದೂ ಅದೂ ಅವರು ಹೊರಗಿನವರು, ನಗರ ಪ್ರದೇಶದವರು ಎಂಬ ವಾದ ಬಹಳ ಬೇಗ ಚಾಲ್ತಿಗೆ ಬಂತು. ಕೊನೆಗೆ ಇದು ಪರಿಸರವಾದಿಗಳೇ ಜನರ ಶತ್ರುಗಳು ಎನ್ನುವಲ್ಲಿಗೆ ತಲುಪಿತು!

(ಮುಂದುವರಿಯುವುದು)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು