ಹಾಸನ : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ, ಅದರ ಹಿಂದೆ ದೃಢವಾದ ಅಧ್ಯಯನ, ಸಂಕಲ್ಪ ಮತ್ತು ಏಕಾಗ್ರತೆ ಇರಬೇಕು. ನಮ್ಮ ಬದುಕಿನ ದಿಕ್ಕು ಶಿಕ್ಷಕರು ತೋರಿಸುತ್ತಾರೆ. ಅವರ ಪಾತ್ರ ಅಮೂಲ್ಯವಾದುದು ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ| ತಾರಾನಾಥ್ ಕಿವಿಮಾತು ಹೇಳಿದರು. ನಗರದ ಸರಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್, ಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜುಗಳ ಸಹಯೋಗದಲ್ಲಿ ಮಂಗಳವಾರ ನಡೆದ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಮಗ್ರ ಗುಣಮಟ್ಟ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ನ್ಯೂನ್ಯತೆಗಳು ಮತ್ತು ಗಟ್ಟಿತನಗಳನ್ನು ಅರಿಯುವಲ್ಲಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಕನ್ನಡಿ. ಕಲಿಯುವ ಮನಸ್ಸು ಇದ್ದರೆ ಯಾವುದೇ ದುರ್ಬಲತೆಯೂ ಬಲವಾಗಿ ಮಾರ್ಪಡಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಎಸ್.ಎಸ್. ರಘು ಗೌಡ ಮಾತನಾಡಿ, ವಿಜ್ಞಾನ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಮ್ಮ ಜಿಲ್ಲೆಯ ಹಿರಿಯರನ್ನು ಮಾದರಿಯನ್ನಾಗಿ ತೆಗೆದುಕೊಳ್ಳಿ. ಶ್ರಮ ಮತ್ತು ಶ್ರದ್ಧೆಯಿಂದ ನಡೆದುಕೊಂಡರೆ ಯಶಸ್ಸು ನಿಮ್ಮ ಹಾದಿ ತಪ್ಪದು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರತ್ನಮ್ಮ ಮಾತನಾಡಿ, ಮೊದಲು ನಾವು ನಮ್ಮನ್ನು ಸಬಲರನ್ನಾಗಿ ಮಾಡಿಕೊಳ್ಳಬೇಕು. ಬುದ್ಧಿವಂತಿಕೆಗಿಂತಲೂ ಇಂದಿನ ಕಾಲದಲ್ಲಿ ಭಾವನಾತ್ಮಕ ಬಲ ಹೆಚ್ಚು ಮುಖ್ಯ. ಅದು ಮಾನವ ಸಂಪನ್ಮೂಲ ಅಭಿವೃದ್ಧಿಯಿಂದಲೇ ಸಾಧ್ಯ ಎಂದರು..ಕಾರ್ಯಕ್ರಮ ಸಂಯೋಜಕ ಡಾ. ಡಿ.ಜಿ. ಕೃಷ್ಣೇಗೌಡ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನೇಕ ಸಂಪನ್ಮೂಲಗಳಿವೆ. ಆದರೆ ಕಾಲದ ಅಲೆಗಳಲ್ಲಿ ಅವು ಮಾಯವಾಗುವ ಅಪಾಯವಿದೆ. ಅವುಗಳನ್ನು ಉಳಿಸಿ ಬೆಳೆಸುವುದೇ ಈ ಕಾರ್ಯಾಗಾರದ ಉದ್ದೇಶ ಎಂದು ಹೇಳಿದರು.ಪರಿಪೂರ್ಣ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿ, ಜ್ಞಾನ ಮಾತ್ರ ಸಾಕಾಗುವುದಿಲ್ಲ, ಅನುಭವ ಮತ್ತು ಮಾನವೀಯತೆ ಸೇರಿದಾಗ ನಿಜವಾದ ಶಿಕ್ಷಣ ಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಮುರಳೀಧರ್ ಕೆ.ಡಿ., ಕೆ.ಟಿ. ಸತ್ಯಮೂರ್ತಿ, ಡಾ. ಶಶಿಕುಮಾರ್, ಡಾ. ವೆಂಕಟನರಸಯ್ಯ, ಟ್ರಸ್ಟ್‌ನ ಡಾ|| ಹೇಮಲತಾ, ವೆಂಕಟರಾಮು ಹಾಗೂ ಪರಿಪೂರ್ಣ ಟ್ರಸ್ಟ್ ನ ಟ್ರಸ್ಠಿ ಕೃಷ್ಣ ಅಯ್ಯಂಗಾರ್ ಉಪಸ್ಥಿತರಿದ್ದರು. ವಿಶ್ವನಾಥರಾವ್ ಚವಾಣ್ ವಂದಿಸಿದರು.
