Home ರಾಜ್ಯ ಮೈಸೂರು ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳುವುದೇ ಮಾನವೀಯತೆ: ಸಿಎಂ

ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳುವುದೇ ಮಾನವೀಯತೆ: ಸಿಎಂ

0

ಮೈಸೂರು, ಅಕ್ಟೋಬರ್ 15: ಜಡ್ಡುಗಟ್ಟಿದ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ ಹೆಚ್ಚು ಜನರಿಗೆ ಬುದ್ಧ ಬಸವ, ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯ ಭಿಕ್ಷು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವಮೇತ್ರಿ ಬುದ್ಧ ವಿಹಾರ ಇವರ ಸಂಯುಕ್ತಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025 ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳಬೇಕು

ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು. ಪರಧರ್ಮ ಸಹಿಷ್ಣುತೆ ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಸತ್ಯ ನೆಲೆಗೊಳ್ಳಲು ಸಾಧ್ಯ ಎಂದು ಹೇಳಿದರು ಎಂದರು.

ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅಗತ್ಯ

ಎಸ್ ಸಿಎಸ್ ಪಿ /ಟಿಎಸ್ ಪಿ ಯೋಜನೆಗಾಗಿ 42 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸಮಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಬರಲೇಬೇಕು. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ಕೊಡದಿದ್ದರೂ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಯಿತು ಎಂದರು.

ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನಮ್ಮ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

ಶಕ್ತಿ ಯೋಜನೆಯಿಂದಾಗಿ ಒಂದು ದಿನದಲ್ಲಿ ಹಾಸನಾಂಬೆ ದರ್ಶನಕ್ಕೆ ಭೇಟಿ ನೀಡಿದ ಒಟ್ಟು 9 ಲಕ್ಷ ಜನರಲ್ಲಿ ಪೈಕಿ ಶೇ 70 ರಷ್ಟು ಮಹಿಳೆಯರೇ ಇದ್ದಾರೆ. ದೇವಸ್ಥಾನ, ಕೆಲಸದ ಸ್ಥಳಗಳಿಗೆ ಮಹಿಳೆಯರು ಓಡಾಡುವಂತಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ 4 ರಿಂದ 5 ಸಾವಿರ ರೂ.ಗಳು ದೊರೆಯುತ್ತಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ

ಸಮಾಜದ ಅಸಮಾನತೆ ತೊಲಗಿಸಲು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ಜನರಲ್ಲಿ ತುಂಬಬೇಕು. ಬುದ್ಧ , ಬಸವಣ್ಣ ಹಾಗೂ ಅಂಬೇಡ್ಕರ್ ರಂತಹ ಮಹಾನ್ ಚೇತನರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ. ಸಚಿವ ಪ್ರಿಯಾಂಕ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ ಎಂದರು.

ಶಿಕ್ಷಣ, ಸಂಘಟನೆ ಹಾಗೂ ಹೋರಾಟ

ಅಂಬೇಡ್ಕರ್ ರವರು ಯಾವುದೇ ಜಾತಿಯ ಪರವಾಗಿಯೂ ನಿಂತವರಲ್ಲ. ಎಲ್ಲಾ ಜಾತಿವರ್ಗಗಳನ್ನು ಒಂದೇ ಎಂದು ಪರಿಗಣಿಸುವ ಸಮಾನತೆ ಹಾಗೂ ಸಮಸಮಾಜ ನಿರ್ಮಾಣವಾಗಬೇಕೆಂದು ಬಯಸಿದವರು. ಚಲನೆಯಿಲ್ಲದ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಮೂಲಕ ಚಲನೆಯನ್ನು ನೀಡಬೇಕಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮಂತ್ರವನ್ನು ಪಠಿಸಿದ್ದ ಅಂಬೇಡ್ಕರ್ ರವರು ಇದರ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿದ್ದರು. ಈ ಹಿಂದೆ ಶೂದ್ರರಿಗೆ, ಮಹಿಳೆಯರನ್ನು ಶಿಕ್ಷಣದಿಂದ ದೂರವಿಡಲಾಗುತ್ತಿತ್ತು. ತನ್ನ ವಿದ್ಯಾರ್ಥಿದೆಸೆಯ ಘಟನೆಯನ್ನು ಸ್ಮರಿಸಿಕೊಂಡರು.
ಸಮಾಜದಲ್ಲಿನ ಜಾತಿವ್ಯವಸ್ಥೆಯೂ ಸಹ, ಬದಲಾವಣೆಯ ಪ್ರಯತ್ನಗಳ ನಡುವೆಯೂ ಮತ್ತೆ ಮರುಕಳಿಸುತ್ತಿದೆ ಎಂದು ತಮ್ಮ ಅನುಭವವನ್ನು ಮುಖ್ಯಮಂತ್ರಿಗಳು ಹಂಚಿಕೊಂಡರು.

ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು

ಎಸ್ ಸಿ ಪಿ/ ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ಯಾವುದೇ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಪ್ರತಿ ಬಡವರಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕು.ನಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆಯಬೇಕು, ತನ್ಮೂಲಕ ಎಲ್ಲರೂ ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಬುದ್ಧ ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಿದೆ ಎಂದರು.

You cannot copy content of this page

Exit mobile version