Home ಅಂಕಣ ಪ್ರಾಣಿಗಳು ನೀಡುವ ತೊಂದರೆಗಳಿಗೆ ಮನುಷ್ಯರೇ ಕಾರಣ

ಪ್ರಾಣಿಗಳು ನೀಡುವ ತೊಂದರೆಗಳಿಗೆ ಮನುಷ್ಯರೇ ಕಾರಣ

0

ಅನೇಕರು ನೀವು ಬೇರೆ ಬೆಳೆ ಬೆಳೆಯಬಾರದೇ? ಬೇರೆ ಉದ್ಯೋಗ ಮಾಡಬಾರದೇ? ನೀವು ಕಾಡಿನಲ್ಲಿ ಹೋಗಿ ಕೃಷಿ ಮಾಡಲು ಹೇಳಿದವರು ಯಾರು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ವಾಸ್ತವದ ಅರಿವಿಲ್ಲದಿರುವವರು ಕೇಳುವ ಈ ಪ್ರಶ್ನೆಗಳಿಗೆ  ಒಂದೊಂದಾಗಿ ಉತ್ತರ ಕಂಡುಕೊಳ್ಳಬೇಕು – ಪ್ರಸಾದ್‌ ರಕ್ಷಿದಿ, ʼಕಾಡು ಹೆಜ್ಜೆಯ ಜಾಡಿನಲ್ಲಿʼ ಅಂಕಣದಲ್ಲಿ.

ನಮ್ಮ ಮಲೆನಾಡಿನ ಆನೆ, ಕಾಟಿ, ಮಂಗ, ನವಿಲು ಮುಂತಾದ ಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಯೋಚಿಸೋಣ. ಇಲ್ಲಿ ಆಗುತ್ತಿರುವ ಎಲ್ಲಾ ತೊಂದರೆಗಳಿಗೂ ಮೂಲ ಕಾರಣ ಮನುಷ್ಯನೇ ಎನ್ನುವುದನ್ನೂ  ಬಹುಷಃ ಯಾರೂ ಅಲ್ಲಗಳೆಯಲಾರರು.

ಆದರೆ ಈ ವಿಚಾರದಲ್ಲಿ ಮಲೆನಾಡಿನ  ಅಥವಾ ಇತರ ಪ್ರದೇಶದ ರೈತರ, ಕಾರ್ಮಿಕರ, ಅರಣ್ಯದಲ್ಲೇ ಬದುಕುತ್ತಿದ್ದ ಇತರ ಹಲವು ಸಮುದಾಯಗಳ  ಬಗ್ಗೆ ಹಾಗೂ  ಅವರ ಜೀವನದ ಬಗ್ಗೆ ಹೊರಗಿನವರಿಗೆ ಅಂದರೆ ನಗರ ಮಧ್ಯಮ ವರ್ಗಕ್ಕೆ ಬಹಳವಾಗಿ ತಪ್ಪು ತಿಳುವಳಿಕೆಗಳೇ ಇವೆ. ಇದಕ್ಕೆ ಮುಖ್ಯ ಕಾರಣ  ನಮ್ಮ ಮಾಧ್ಯಮಗಳು ಇಲ್ಲಿನ ಜೀವನವನ್ನು ಮತ್ತು ಸುದ್ದಿಗಳನ್ನು ಬಿಂಬಿಸುತ್ತಿರುವ ರೀತಿ. ನಮ್ಮ ಹೆಚ್ಚಿನ ಎಲ್ಲಾ ಮಾಧ್ಯಮಗಳು ಉದ್ಯಮಿಗಳ ಮತ್ತು ರಾಜಕಾರಣಿಗಳ ಕೈಯಲ್ಲಿ ಇರುವುದರಿಂದ  ಅವುಗಳು ಅವರ ಹಿತಾಸಕ್ತಿಯನ್ನೇ ಕಾಪಾಡುತ್ತವೆ.  ಆದ್ದರಿಂದ ಪರಿಸರ ಸಂಬಂಧಿತ ಸುದ್ದಿಗಳು ಬಂದಾಗಲೂ ಅರ್ಧ ಸತ್ಯವನ್ನು ಹೇಳುತ್ತವೆ. ಎಲ್ಲಾ ವಿಚಾರಗಳನ್ನು ಹೇಳಿದ ನಂತರವೂ ಈ “ಅಭಿವೃದ್ಧಿ” ಕೆಲಸಗಳು ಅನಿವಾರ್ಯ ಎನ್ನುವ ಮನಸ್ಥಿತಿಯ ನಿರ್ಮಾಣಕ್ಕೆ ಒತ್ತು ಕೊಡುತ್ತವೆ.

ಹಾಗೆಯೇ ಕೃಷಿಯ ವಿಚಾರಕ್ಕೆ ಬಂದಾಗ ಗಮನಿಸಿ, ಉದಾಹರಣೆಗೆ- ಯಾವುದಾದರೂ ಒಂದು ಬೆಳೆಗೆ ಒಂದು ಬಾರಿ ಉತ್ತಮ ಬೆಲೆ ಬಂದರೆ ಕೂಡಲೇ ನಮ್ಮ ಮಾಧ್ಯಮಗಳು  “ಮೆಣಸಿಗೆ ಉತ್ತಮ ಬೆಲೆ ರೈತರ ಮೊಗದಲ್ಲಿ ಸಂತಸ” ಎಂದು ಬರೆಯುತ್ತವೆ.  ಕಳೆದ ವರ್ಷ ಯಾವನೋ ಒಬ್ಬ  “ಅಡಿಕೆಗೆ ಉತ್ತಮ ಬೆಲೆ ಚಿನ್ನದಂಗಡಿಯಲ್ಲಿ ನೂಕು ನುಗ್ಗಲು” ಎಂದು ಬರೆದಿದ್ದ. ಇಂತಹ ವಾಕ್ಯಗಳು ವರ್ಷಗಟ್ಟಲೆ ರೈತರ ಬದುಕಿನ ಹೋರಾಟವನ್ನು ಮರೆಮಾಚುತ್ತವೆ. ಹವಾಮಾನ ವೈಪರೀತ್ಯ ಮತ್ತು ರೋಗಗಳಿಂದ ಮೆಣಸು, ಅಡಿಕೆ ತೋಟಗಳೇ ನಾಶವಾಗಿ ಕಂಗೆಟ್ಟವರು  ಕಾಣಿಸುವುದಿಲ್ಲ.

ಕಾಫಿ ನಾಡಿನಲ್ಲಿ ಒಂದು ಹೂವಿನ ಮಳೆ ಬಿದ್ದರೆ, ಬೆಲೆ ಒಂದಿಷ್ಟು ಚೇತರಿಸಿಕೊಂಡರೆ, ಮಾಧ್ಯಮದವರಿಗೆ “ಐಷಾರಾಮೀ ದೊರೆಗಳು” ಮಾತ್ರ ಕಣ್ಣಿಗೆ ಬೀಳುತ್ತಾರೆ.

ಇದರಿಂದಾಗಿ ಅನೇಕರು ನೀವು ಬೇರೆ ಬೆಳೆ ಬೆಳೆಯಬಾರದೇ? ಬೇರೆ ಉದ್ಯೋಗ ಮಾಡಬಾರದೇ ? ನೀವು ಕಾಡಿನಲ್ಲಿ ಹೋಗಿ ಕೃಷಿ ಮಾಡಲು ಹೇಳಿದವರು ಯಾರು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ವಾಸ್ತವದ ಅರಿವಿರುವುದಿಲ್ಲ.

ಈ ಪ್ರಶ್ನೆಗಳನ್ನು ಒಂದೊಂದಾಗಿ ನೋಡೋಣ.

ಬೇರೆ ಬೆಳೆಗಳನ್ನು ಬೆಳೆಯುವುದು ಸುಲಭವೂ ಅಲ್ಲ, ಕೆಲವನ್ನು ಸಾಧ್ಯವೂ ಇಲ್ಲ. ಉದಾಹರಣೆಗೆ ಮಲೆನಾಡಿನ ಕಾಫಿ, ಏಲಕ್ಕಿ , ಮೆಣಸು ಬೇರೆ ಕಡೆ ಪ್ರಯತ್ನ ಪಟ್ಟು ಬೆಳೆಯಬಹುದು ಆದರೆ ಇಲ್ಲಿನ ಗುಣಮಟ್ಟ ಬರಲಾರದು ಹಾಗೇ ಕರಾವಳಿಯ ಬೆಟ್ಟಗಳಲ್ಲಿ ಬೆಳೆಯುವ ರಬ್ಬರ್, ಅಡಿಕೆ, ಗೋಡಂಬಿ ಇಲ್ಲಿ ಬರಲಾರದು. ಎಲ್ಲಾ ಬೆಳೆಗಳಿಗೂ ಒಂದು ಪ್ರಾದೇಶಿಕ  ವೈಶಿಷ್ಟ್ಯ ಮತ್ತು ಗುಣಗಳಿವೆ. ಇವೆಲ್ಲ ಪ್ರಯೋಗಳನ್ನು ಕೃಷಿಕರು ಕಾಲ ಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ.

ಇನ್ನು ಕಾಡಿನಲ್ಲಿ ಕೃಷಿ ಮಾಡಿರುವ ಬಗ್ಗೆ- ಹೌದು ಅರಣ್ಯ ಒತ್ತುವರಿ ಮಾಡಿಲ್ಲವೆಂದಲ್ಲ. ಸಾಕಷ್ಟು  ಕಡೆಗಳಲ್ಲಿ ಒತ್ತುವರಿ ಆಗಿದೆ. ಅದಕ್ಕೆ ಕಾರಣ ಯಾರು? ನಮ್ಮ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಏನು ಮಾಡುತ್ತಿದೆ ? ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ನಡೆದಿರುವುದು ದೊಡ್ಡ ಬೆಳೆಗಾರರರಿಂದಲೇ. ಇವರಿಗೆಲ್ಲ ರಾಜಕಾರಣಿಗಳ ಬೆಂಬಲವಿದೆ. ಉಳಿದವರು ಒತ್ತುವರಿ ಮಾಡಿರುವುದು ಕಂದಾಯ ಭೂಮಿಯನ್ನು. ಆದು ಕೃಷಿ ಭೂಮಿಯೇ. 

ಶಿರಾಡಿ ಬೆಟ್ಟ ಸಾಲಿನ ಕೆಳಭಾಗದಲ್ಲಿ ಕೇರಳದಿಂದ ಬಂದ ವಲಸಿಗರು ಲೆಮನ್ ಗ್ರಾಸ್(ಸಿಟ್ರೊನೆಲ್ಲಾ) ಎನ್ನುವ  ಸುಗಂಧದ ಎಣ್ಣೆಯ ಹುಲ್ಲನ್ನು ಬೆಳೆದರು. ತಮ್ಮ ಸಣ್ಣ ಸಣ್ಣ ಜಮೀನಿನಲ್ಲಿ ಅಲ್ಲದೆ ಸರ್ಕಾರಿ ನೆಲದಲ್ಲೂ ಬೆಳೆದರು. ಘಟ್ಟದ ಮೇಲೂ ಕೆಲವರು ಇದನ್ನು ಬೆಳೆದರು. ಮೊದಲಿಗೆ ಇದು ಲಾಭದಾಯಕವಾಗಿತ್ತು. ನಂತರದ ದಿನಗಳಲ್ಲಿ ಈ ಸುಗಂಧಕ್ಕೆ ಬದಲಿಯಾಗಿ ಅಗ್ಗದ ಕೃತಕ ಸುಂಗಂಧವೊಂದು ಬಂದಿತು. ಇದರಿಂದಾಗಿ  ಸಿಟ್ರೋನೆಲ್ಲ ಎಣ್ಣೆಗೆ ಬೇಡಿಕೆಯಿಲ್ಲದೆ  ರೈತರು ಅದರ ಕೃಷಿಯನ್ನು ಬಿಟ್ಟರು. ಆಗಲೇ ಅರಣ್ಯ ಇಲಾಖೆ ಎಚ್ಚರ ವಹಿಸಬೇಕಿತ್ತು. ಯಾಕೆಂದರೆ ಈ ಹುಲ್ಲನ್ನು ಪ್ರಾಣಿಗಳು ತಿನ್ನುವುದಿಲ್ಲ. ಅದೀಗ ಘಟ್ಟ ಪ್ರದೇಶಗಳಿಗೂ ಹಬ್ಬಿ ನಮ್ಮೂರಿನ ರಸ್ತೆ ಬದಿಯವರೆಗೂ ಬಂದಿದೆ. ಈಗ ಮಲೆನಾಡಿನ ಎಲ್ಲ ರಸ್ತೆಗಳ ಬದಿಯಲ್ಲಿ ಬೆಳೆದಿರುವ ಲೆಮನ್ ಗ್ರಾಸ್ ಅನ್ನು ನಾವು ಕಾಣಬಹುದು. ಇದರಿಂದಾಗಿ ಶಿರಾಡಿ ಘಟ್ಟ ಪ್ರದೇಶದಲ್ಲಿ ಆನೆ, ಕಾಟಿ ಮುಂತಾದ ಪ್ರಾಣಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮೇವಿನ ಕೊರತೆ ಆಯಿತು. ಅವು ಮೇವಿಗಾಗಿ ಕೃಷಿ ಭೂಮಿಯತ್ತ ಬಂದವು.

ಹೀಗೇ ಇನ್ನೂ ಹಲವಾರು ಸಂಗತಿಗಳಿವೆ…

(ಮುಂದುವರಿಯುವುದು..)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ

ಇದನ್ನೂ ಓದಿ-https://peepalmedia.com/the-magic-of-false-development/ http://ತಪ್ಪಾದ ʼಅಭಿವೃದ್ಧಿʼ ಎಂಬ ಮಾಯಾಜಾಲ

You cannot copy content of this page

Exit mobile version