Home ಅಂಕಣ ತಪ್ಪಾದ ʼಅಭಿವೃದ್ಧಿʼ ಎಂಬ ಮಾಯಾಜಾಲ

ತಪ್ಪಾದ ʼಅಭಿವೃದ್ಧಿʼ ಎಂಬ ಮಾಯಾಜಾಲ

0

ನಮ್ಮ ಎಲ್ಲ ಸಮಸ್ಯೆಗಳ ಮೂಲ ತಪ್ಪಾದ “ಅಭಿವೃದ್ಧಿ” ಎಂಬ ಮಾಯಾಜಾಲ. ಇದೊಂದು ಅತಿದೊಡ್ಡ ಭ್ರಷ್ಟಾಚಾರ. ನಾವು ಇದರ ಸುಳಿಯಲ್ಲಿ ಸಿಕ್ಕಿ ಕೊಂಡಿದ್ದೇವೆ. ಇಡೀ ಭೂಮಂಡಲವನ್ನೇ ಸೂರೆ ಮಾಡುತ್ತಿದ್ದೇವೆ. ನಮ್ಮ  ಕೃತಕ ಅಭಿವೃದ್ಧಿಗಾಗಿ ಹೊಳೆ, ಸಮುದ್ರ, ಕಾಡು, ಗುಡ್ಡ ಎಲ್ಲವನ್ನೂ ಲೂಟಿ ಮಾಡಿದ್ದೇವೆ – ಪ್ರಸಾದ್‌ ರಕ್ಷಿದಿ

ಆದರೆ ನಮ್ಮ ಅಭಿವೃದ್ದಿ ಯೋಜನೆಗಳು ಮತ್ತು ಅವುಗಳನ್ನು  ಮಾಡುತ್ತಿರುವ ರೀತಿ ಅರಿವಿಲ್ಲದ ಅಸಂಬದ್ಧತೆಯೋ ಅಥವಾ ಉದ್ದೇಶಿತ ಹುನ್ನಾರಗಳೋ ಈ ಬಗ್ಗೆ ನಾವೇ ಅರಿತು ಕೊಳ್ಳಬೇಕು. ಇದಕ್ಕೆ ಉದಾಹರಣೆ ಮೊದಲೇ ನಾನು ಹೇಳಿದಂತೆ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ. ಇದು ಪ್ರಾರಂಭವಾಗುವಾಗಲೇ ದೊಡ್ಡ ಪ್ರಮಾಣದಲ್ಲಿಯೇ ವಿರೋಧ ಬಂತು ಮತ್ತು ಅದನ್ನು ಹೇಗೆ ನಿವಾರಿಸಲಾಯಿತು  ಎನ್ನುವುದು ಸಾಕಷ್ಟು ಚರ್ಚೆ ಆಗಿದೆ.  ಇಲ್ಲೀಗ ಅದರ ಪುನರಾವರ್ತನೆ ಬೇಡವೆನಿಸುತ್ತದೆ.

ಅದರೆ ಈ ಸ್ಥಾವರವನ್ನು ಸ್ಥಾಪಿಸಿದ್ದು ಕರಾವಳಿಯ ಉದ್ಯಮಗಳಿಗೆ ಅನುಕೂಲವಾಗಲಿ ಎಂದು. ಅದೇ ಕಾಲದಲ್ಲಿ ವಾರಾಹಿ ವಿದ್ಯುತ್ ಯೋಜನೆಯ ವಿದ್ಯುತ್ ಅನ್ನು ಅದೇ ಕರಾವಳಿಯ ಪಕ್ಕದಲ್ಲೇ ಹಾದು ಹಾಸನಕ್ಕೆ ತರುವ ಸಿದ್ಧತೆ ನಡೆಯುತ್ತಿತ್ತು!  ಅದರ ಬದಲಿಗೆ  ವಾರಾಹಿ ವಿದ್ಯುತ್ತನ್ನು ಹತ್ತಿರದ ಕರಾವಳಿಗೆ ಕೊಟ್ಟು ನಂದಿಕೂರಿನಲ್ಲಿ ಸ್ಥಾಪಿಸಿದ ಉಷ್ಣ ವಿದ್ಯುತ್ ಸ್ಥಾವರವನ್ನು ಹಾಸನಕ್ಕೆ ಸ್ಥಳಾಂತರಿಸ ಬಹುದಿತ್ತಲ್ಲ !

ಇದರಿಂದ ವಿದ್ಯುತ್ ಸಾಗಾಣಿಕೆಗಾಗಿ ಸಾವಿರಾರು ಎಕರೆ ಅರಣ್ಯ ನಾಶವಾಗುವುದು ತಪ್ಪುತ್ತಿತ್ತು. ಯೋಜನೆಗಳ ಖರ್ಚು ಕೂಡಾ ಕಡಿಮೆಯಾಗುತ್ತಿತ್ತು. ಅಲ್ಲದೆ ಹಾಸನಕ್ಕೆ ಹೇಗೂ ದೇಶದ ಪೂರ್ವ ಮತ್ತು ಪಶ್ಚಿಮದ ಎರಡೂ ಬಂದರುಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ಇದೆ. ಕಲ್ಲಿದ್ದಲು ಸಾಗಣೆಗೂ ಅನುಕೂಲವಿತ್ತು.

ಉಷ್ಣವಿದ್ಯುತ್ ಸ್ಥಾವರಕ್ಕೆ ಅಪಾರ ಪ್ರಮಾಣದ ಕಲ್ಲಿದ್ದಲು ಬೇಕು, ನಂದಿಕೂರು ಕರಾವಳಿಯ ಬಂದರಿಗೆ ಹತ್ತಿರದಲ್ಲಿದೆ ಇತ್ಯಾದಿ ವಾದಗಳನ್ನು ಆಗ ಮುಂದಿಡಲಾಯಿತು. ಈ ಸ್ಥಾವರಕ್ಕಾಗಿ ಮಂಗಳೂರು ಬಂದರಿನಿಂದ ಹೊಸದಾಗಿ ರೈಲು ಹಳಿ ಹಾಕಬೇಕಾಯಿತು.

ಹಾರುಬೂದಿ-ನಂದಿಕೂರು ವಿದ್ಯುತ್ ಸ್ಥಾವರ

ನಂದಿಕೂರು ವಿದ್ಯುತ್ ಸ್ಥಾವರ  ಮಾನ್ ಸೂನ್ ಗಾಳಿ ಬೀಸುವ ಹಾಗೂ ಹೆಚ್ಚು ಮಳೆಯಾಗುವ ಪಡುಬಿದ್ರಿ ಪ್ರದೇಶದಲ್ಲಿ ಇದೆ. ಈಗಾಗಲೇ ಅಲ್ಲಿನ ಜನ ಹಾರು ಬೂದಿ  ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತು ಘಟ್ಟ ಪ್ರದೇಶದಲ್ಲಿ ಮಳೆಯಲ್ಲಿ ಆಮ್ಲಗಳ ಪ್ರಮಾಣ ಹೆಚ್ಚಾಗುವಂತಹ ಅನೇಕ ಸಮಸ್ಯೆಗಳನ್ನು ಇದು ತಂದಿಟ್ಟಿದೆ. ಆದರೆ ಹಾಸನ ಘಟ್ಟದ ಮೇಲೆ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಇದೆ. ವಾರಾಹಿ ವಿದ್ಯುತ್ ಕರಾವಳಿಗೆ ಕೊಟ್ಟು ನಂದಿಕೂರಿನ ಬದಲಿಗೆ ಹಾಸನದಲ್ಲಿ ಉಷ್ಣವಿದ್ಯುತ್ ಸ್ಥಾವರ ಮಾಡಿದ್ದರೆ (ಇದೂ ಸಂಪೂರ್ಣ ಸರಿಯಲ್ಲ ಯಾಕೆಂದರೆ ಉಷ್ಣ ವಿದ್ಯುತ್ ಸ್ಥಾವರಗಳು ನಿರಂತರ ಪರಿಸರ ಸಮಸ್ಯೆಯೇ)  ಈ ಪ್ರದೇಶದಲ್ಲಿ ಪರಿಸರ ನಾಶದ ಪ್ರಮಾಣ ತುಂಬ ಕಡಿಮೆಯಾಗುತ್ತಿತ್ತು. ದೇಶದ ತುಂಬ ಇಂತಹ ಯೋಜನಾ ತಪ್ಪುಗಳನ್ನು ಕಾಣಬಹುದು.

ಇದನ್ನೂ ಓದಿhttp://ಪರಿಸರ ನಾಶದಲ್ಲಿ ಭೂಸ್ವಾಧೀನದ ಕಬಂಧ ಬಾಹು

ಅಭಿವೃದ್ಧಿ ಯೋಜನೆ ಎಂದರೆ ದೊಡ್ಡ ಗಾತ್ರದ, ಸಾವಿರಾರು ಕೋಟಿಗಳ ಕೆಲವರಿಗೆ ಲಾಭದಾಯಕವಾದ ಯೋಜನೆಯೇ ಆಗಿರಬೇಕೆಂಬ “ಸಿದ್ಧಾಂತ”ದ ನಡುವೆ ಇವೆಲ್ಲ ವಿಷಯಗಳು ಪಕ್ಕಕ್ಕೆ ಸರಿಸಲ್ಪಡುತ್ತವೆ.

ನಾನು ಮತ್ತೆ ಮತ್ತೆ ಇಂತಹ ವಿಷಯಗಳನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ನಾವು ಮಾನವ ಪ್ರಾಣಿ ಸಂಘರ್ಷ ಎನ್ನುವ ತಪ್ಪಾದ ನುಡಿಗಟ್ಟನ್ನು ಬಳಸುವ ಮೂಲಕ ನಮ್ಮ ಯೋಚನಾ ವಿಧಾನವನ್ನೂ ಸೀಮಿತ ಗೊಳಿಸಿ ಕೊಳ್ಳುತ್ತಿದ್ದೇವೆ. ನಮ್ಮ ಯೋಜನೆಗಳು ದಿಕ್ಕು ತಪ್ಪುತ್ತಿವೆ. ನಮಗೆ ಇದು ಗೋಚರವಾಗುವಾಗ ಸರಿಪಡಿಸಲಾಗದಷ್ಟು ಅಪಾರ ಹಾನಿಯಾಗಿರುತ್ತದೆ. ಇದು ಮಾನವ ನಾಗರಿಕತೆಯ ಸಮಸ್ಯೆ, ಮನುಷ್ಯನ ದುರಾಸೆಯ ಸಮಸ್ಯೆ.

ನಮ್ಮ ಎಲ್ಲ ಸಮಸ್ಯೆಗಳ ಮೂಲ  ಈ ತಪ್ಪಾದ “ಅಭಿವೃದ್ಧಿ” ಎಂಬ ಮಾಯಾಜಾಲ. ಇದೊಂದು ಅತಿದೊಡ್ಡ ಭ್ರಷ್ಟಾಚಾರ. ನಾವು ಇದರ ಸುಳಿಯಲ್ಲಿ ಸಿಕ್ಕಿ ಕೊಂಡಿದ್ದೇವೆ.  ಇಡೀ ಭೂಮಂಡಲವನ್ನೇ ಸೂರೆ ಮಾಡುತ್ತಿದ್ದೇವೆ. ನಮ್ಮ  ಕೃತಕ ಅಭಿವೃದ್ಧಿಗಾಗಿ ಹೊಳೆ, ಸಮುದ್ರ, ಕಾಡು, ಗುಡ್ಡ ಎಲ್ಲವನ್ನೂ ಲೂಟಿ ಮಾಡಿದ್ದೇವೆ. ಈಗ ಆಕಾಶಕ್ಕೂ ಕೈಹಾಕಿದ್ದೇವೆ. ಇದಕ್ಕಾಗಿ ಯುದ್ಧಗಳಾಗಿವೆ. ಸರ್ಕಾರಗಳು ಉರುಳಿವೆ, ಬದಲಾಗಿವೆ.

ಮನುಷ್ಯ ಮತ್ತು ಪ್ರಾಣಿ ಎನ್ನುವ ವಿಭಜನೆಯೇ ಅಸಹಜವಾದದ್ದು. ಜೀವಸಂಕುಲ ಒಂದೇ ಎನ್ನುವುದೇ ನಮ್ಮ ಅರಿವಿನ ಮೂಲವಾಗಬೇಕು. ಈ ನಿಟ್ಟಿನಲ್ಲಿ ಏನು ಮಾಡಬಹುದು ಮುಂದೆ ಚರ್ಚಿಸೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ

ಇದನ್ನೂ ಓದಿ-http://ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ

You cannot copy content of this page

Exit mobile version