ಪುಣೆ, ಸೆಪ್ಟೆಂಬರ್ 17: ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ನಾಯಕರು ಹುದ್ದೆಗಳಿಗಾಗಿ ಹರಸಾಹಸ ಪಡುತ್ತಿದ್ದಾರೆ. ಮೈತ್ರಿಕೂಟದಿಂದ ಉಪಮುಖ್ಯಮಂತ್ರಿಯಾಗಿದ್ದ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಮುಖ್ಯಮಂತ್ರಿ ಹುದ್ದೆಯ ಕುರಿತು ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಪುಣೆಯ ಪ್ರತಿಷ್ಠಿತ ದಗ್ಡೂಶೇಟ್ ಹಲ್ದಾಯಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಎಲ್ಲರ ಆಸೆಯೂ ಈಡೇರುವುದಿಲ್ಲ.
ಸಿಎಂ ಬೇಕಾದರೆ ಬಹುಮತ ಪಡೆಯಬೇಕು. ಅದೆಲ್ಲ ಜನರ ಕೈಯಲ್ಲಿದೆ. ಮ್ಯಾಜಿಕ್ ಫಿಗರ್ 145 ಪಡೆಯುವುದು ಬಹಳ ಮುಖ್ಯ ಎಂದುʼ ಅವರು ಹೇಳಿದರು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಒಳಗೊಂಡ ಮಹಾಯುತಿ ಮೈತ್ರಿಕೂಟ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.