Saturday, October 26, 2024

ಸತ್ಯ | ನ್ಯಾಯ |ಧರ್ಮ

ಯಾವುದೇ ಧರ್ಮದವರಿರಲಿ, ಜಾತಿಯವರಿರಲಿ ಅವರನ್ನು ಪ್ರೀತಿಬೇಕು ಎನ್ನುವುದನ್ನು ಚನ್ನಮ್ಮ-ರಾಯಣ್ಣ ಕಲಿಸಿಕೊಟ್ಟಿದ್ದಾರೆ: ಸಿಎಂ

ಕಿತ್ತೂರು ಅ 25: ದೇಶ ಅಂದರೆ, ದೇಶದೊಳಗಿರುವ ಜನ. ಯಾವುದೇ ಧರ್ಮದವರಿರಲಿ, ಜಾತಿಯವರಿರಲಿ ಅವರನ್ನು ಪ್ರೀತಿಬೇಕು ಎನ್ನುವುದನ್ನು ಚನ್ನಮ್ಮ-ರಾಯಣ್ಣ ಕಲಿಸಿಕೊಟ್ಟಿದ್ದಾರೆ. ಇದನ್ನು ನಾವು-ನೀವೆಲ್ಲಾ ಪಾಲಿಸಬೇಕು ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

200ನೇ ವರ್ಷದ ಚನ್ನಮ್ಮನ ಕಿತ್ತೂರು ಉತ್ಸವವನ್ನು ವರ್ಣರಂಜಿತ ವೇದಿಕೆಯಲ್ಲಿ ಉದ್ಘಾಟಿಸಿದರು.

ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದ್ದು ನಮ್ಮ ಸರ್ಕಾರ. ಇವತ್ತಿನ‌ ಪೀಳಿಗೆಗೆ ಚನ್ನಮ್ಮನ ಇತಿಹಾಸ ಗೊತ್ತಾಗಬೇಕು ಎನ್ನುವ ಕಾರಣದಿಂದ ನಾವು ಈ ನಿರ್ಧಾರ ಮಾಡಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾಗದು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.

ನಾನು ಸಂಗೊಳ್ಳಿ ರಾಯಣ್ಣ-ಕಿತ್ತೂರು ಚನ್ನಮ್ಮನ ಅಭಿಮಾನಿ.
ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಮುಂತಾದವರ ಹೋರಾಟ ಮತ್ತು ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಹೋರಾಟಗಾರರಿಂದ ದೇಶದ ಜನರನ್ನು ಪ್ರೀತಿಸುವುದನ್ನು ನಾವು ಕಲಿಯಬೇಕು. ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರೂ ನಮ್ಮ ದೇಶದ ಜನ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ, ಸರಿಯಾದ ದೇಶಪ್ರೇಮ ಎಂದರು.

ಬಸವಣ್ಣನವರೂ ಇದನ್ನೇ ಹೇಳಿದ್ದರು. ಜಾತಿ, ಧರ್ಮದ ತಾರತಮ್ಯ ಇಲ್ಲದಂತೆ ಮನುಷ್ಯ ಪ್ರೀತಿಯನ್ನು ಸಾರಿದವರು ಬಸವಣ್ಣ. ಹೀಗಾಗಿ ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು ಎಂದರು.

ಜಾತಿ, ಧರ್ಮದ ಅಸಮಾನತೆ ಸಮಾಜದಲ್ಲಿ ಇರುವಷ್ಟೂ ದಿನ ಸಾಮಾಜಿಕ ನ್ಯಾಯ ಬರಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಲ್ಲಾ ಜಾತಿ, ಧರ್ಮ, ಎಲ್ಕಾ ವರ್ಗದವರಿಗೂ ಸಿಗಬೇಕು ಎಂದರು.

ದೇಶದ ಜನರನ್ನು ಪ್ರೀತಿಸಿ, ದೇಶದ ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರಾಣತ್ಯಾಗ ಮಾಡಿದ್ದಾರೆ. ಇದು ಅತ್ಯುನ್ನತವಾದ ತ್ಯಾಗ. ಇದನ್ನು ನಾವು, ನೀವು, ಇವತ್ತಿನ‌ ಪೀಳಿಗೆ ಪಾಲಿಸಬೇಕು ಎಂದರು.

ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಕಲ್ಮಠ, ನಿಚ್ಚಣಿಕೆಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮುಖ್ಯ ಸಚೇತಕರಾದ ಅಶೋಕ ಮ.ಪಟ್ಟಣ, ಶಾಸಕರಾದ ಮಹಂತೇಶ ಕೌಜಲಗಿ, ಪ್ರಕಾಶ ಬಾ ಹುಕ್ಕೇರಿ, ಭರಮಗೌಡ ಕಾಗೆ, ವಿಶ್ವಾಸ್ ವೈದ್ಯ, ಆಸಿಫ್ ಸೇಠ್, ಬುಡಾ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಜಿಂಗಳೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page