8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನೊಬೆಲ್ ನನಗೆ ಬರಬೇಕಿತ್ತು: ಆಯ್ಕೆ ಸಮಿತಿ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ

2026ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ತಮಗೆ ಸಿಗದಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ಮತ್ತು ಹತಾಶೆ ಹೊರಹಾಕಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯ ಭಾಷಣದ ಬಹುಭಾಗವನ್ನು ನೊಬೆಲ್ ಸಮಿತಿಯನ್ನು ತರಾಟೆಗೆ ತೆಗೆದುಕೊಳ್ಳಲು ಹಾಗೂ ತಮ್ಮ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಳ್ಳಲು ಅವರು ಮೀಸಲಿಟ್ಟರು.

ರಿಪಬ್ಲಿಕನ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, “ನಾನು ಅಮೆರಿಕವನ್ನು ಮುನ್ನಡೆಸುತ್ತಿರುವಾಗ ಈ ದೇಶಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ದಕ್ಕಬೇಕಿತ್ತು, ಆದರೆ ಕೊಡಲಿಲ್ಲ. ಇಂತಹ ನಾಚಿಕೆಗೇಡಿನ ಮತ್ತು ಮುಜುಗರದ ನಿರ್ಧಾರ ಕೈಗೊಂಡಿರುವ ನಾರ್ವೆ ದೇಶಕ್ಕೆ ಮತ್ತು ಅಲ್ಲಿನ ಜನರಿಗೆ ಇದು ಅಳಿಸಲಾಗದ ಕಳಂಕ. ನಾರ್ವೆ, ನೀವು ನನಗೆ ಈ ಪ್ರಶಸ್ತಿ ನೀಡದಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ,” ಎಂದು ನೇರವಾಗಿ ಎಚ್ಚರಿಕೆ ನೀಡಿದರು. ನೊಬೆಲ್ ಸಮಿತಿಯನ್ನು ಕಟುವಾಗಿ ಟೀಕಿಸಿದ ಅವರು, “ಪ್ರಜಾಪ್ರಭುತ್ವ ವಿರೋಧಿಗಳು ಮತ್ತು ನಾಗರಿಕತೆಯ ಶತ್ರುಗಳಾಗಿರುವ ಕೆಲವೇ ಕೆಲವು ಕಟ್ಟರ್ ಸಿದ್ಧಾಂತವಾದಿಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಮೌಲ್ಯವೇ ಶಾಶ್ವತವಾಗಿ ನಾಶವಾಗಿದೆ,” ಎಂದು ಗುಡುಗಿದರು.

8 ಯುದ್ಧಗಳನ್ನು ಮುಗಿಸಿದ್ದೇನೆ ಎಂದ ಟ್ರಂಪ್:

ತಮ್ಮ ಭಾಷಣದಲ್ಲಿ ಜಾಗತಿಕ ಸಂಘರ್ಷಗಳನ್ನು ಶಮನಗೊಳಿಸಿರುವುದಾಗಿ ಹೇಳಿಕೊಂಡ ಟ್ರಂಪ್, “ನಾನು ಈಗಾಗಲೇ 8 ಯುದ್ಧಗಳನ್ನು ಕೊನೆಗಾಣಿಸಿದ್ದೇನೆ. ಈಗ ಇನ್ನೂ ಎರಡು ಬಿಕ್ಕಟ್ಟುಗಳನ್ನು ಬಗೆಹರಿಸಲು ಸಜ್ಜಾಗಿದ್ದೇನೆ: ಒಂದು ಇರಾನ್ ಬಿಕ್ಕಟ್ಟು, ಮತ್ತೊಂದು ರಷ್ಯಾ-ಉಕ್ರೇನ್ ಯುದ್ಧ. ಇವೆರಡನ್ನೂ ನಾನು ಅತ್ಯಂತ ವೇಗವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದೇನೆ,” ಎಂದು ಪ್ರತಿಪಾದಿಸಿದರು.

ಇರಾನ್‌ಗೆ ನೇರ ಸರ್ವನಾಶದ ಎಚ್ಚರಿಕೆ:

ಇರಾನ್ ವಿಚಾರವಾಗಿ ಅತ್ಯಂತ ಕಟು ಧೋರಣೆ ತಳೆದ ಟ್ರಂಪ್, ಆ ದೇಶಕ್ಕೆ ಬಹಿರಂಗ ಬೆದರಿಕೆ ಹಾಕಿದರು. “ಇರಾನ್ ವಿಚಾರ ಎರಡರಲ್ಲಿ ಒಂದಾಗಲಿದೆ: ಒಂದೋ ಅವರು ನಮ್ಮ ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಇರಾನ್ ಎಂಬ ದೇಶವೇ ಅಸ್ತಿತ್ವದಲ್ಲಿರುವುದಿಲ್ಲ. ನಾನು ಇರಾನ್ ಅಣ್ವಸ್ತ್ರ ಹೊಂದುವುದನ್ನು ತಪ್ಪಿಸಿದ್ದೇನೆ. ಇಲ್ಲದಿದ್ದರೆ ಇಡೀ ಮಧ್ಯಪ್ರಾಚ್ಯ, ಯುರೋಪ್ ಹಾಗೂ ಅಮೆರಿಕವೇ ಸರ್ವನಾಶವಾಗುತ್ತಿತ್ತು. ಇತಿಹಾಸದಲ್ಲೇ ಯಾರೂ ಉಳಿಸದಷ್ಟು ಮಾನವ ಜೀವಗಳನ್ನು ನಾನು ರಕ್ಷಿಸಿದ್ದೇನೆ,” ಎಂದು ಹೇಳಿಕೊಂಡರು.

ನೊಬೆಲ್ ಪುರಸ್ಕೃತ ನವೀ ಪಿಳ್ಳೈ ಅವರ ಕಾಲೆಳೆದ ಅಧ್ಯಕ್ಷ:

ಈ ಬಾರಿಯ ನೊಬೆಲ್ ಶಾಂತಿ ಪುರಸ್ಕೃತೆ, ದಕ್ಷಿಣ ಆಫ್ರಿಕಾದ ಮಾಜಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ನವೀ ಪಿಳ್ಳೈ ಅವರ ವಿರುದ್ಧವೂ ಟ್ರಂಪ್ ಕಿಡಿಕಾರಿದರು. “ನನ್ನ ಇಷ್ಟೆಲ್ಲಾ ಅದ್ಭುತ ಸಾಧನೆಗಳ ನಡುವೆಯೂ, ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ, ಇದುವರೆಗೂ ಯಾರೂ ಹೆಸರೇ ಕೇಳಿರದ ಒಬ್ಬ ಲಿಬರಲ್ ವ್ಯಕ್ತಿಗೆ ನೊಬೆಲ್ ಪ್ರಶಸ್ತಿ ನೀಡಿದ್ದಾರೆ,” ಎಂದು ವ್ಯಂಗ್ಯವಾಡಿದರು. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವುದು ಜನಾಂಗೀಯ ಹತ್ಯೆ (Genocide) ಎಂದು ತೀರ್ಮಾನಿಸಿದ್ದ ವಿಶ್ವಸಂಸ್ಥೆಯ ಆಯೋಗದ ನೇತೃತ್ವವನ್ನು ನವೀ ಪಿಳ್ಳೈ ವಹಿಸಿದ್ದರು ಎಂಬುದು ಗಮನಾರ್ಹ.

Related Articles

ಇತ್ತೀಚಿನ ಸುದ್ದಿಗಳು