ಇಡೀ ರಾಜ್ಯವನ್ನೇ ಅಲ್ಲೋಲಕಲ್ಲೋಲಗೊಳಿಸಿರುವ ಸೆಕ್ಸ್ ಸ್ಕ್ಯಾಂಡಲ್ ಆರೋಪಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಸದ್ಯದಲ್ಲೇ ಸತ್ಯ ಹೊರಬರಲಿದೆ ಎಂದಿದ್ದಾನೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಪಿ ಹಾಗೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ.” ಎಂದು ಹೇಳಿದ್ದಾನೆ.
ಅಲ್ಲದೆ ತನ್ನ ವಕೀಲರ ಹೇಳಿಕೆಯನ್ನೂ ತನ್ನ ಟ್ವೀಟ್ ಜೊತೆ ಬಿಡುಗಡೆ ಮಾಡಿದ್ದು, ಆ ಪತ್ರದಲ್ಲಿ ಸಿಟ್ ಎದುರು ಹಾಜರಾಗಲು ಏಳು ದಿನಗಳ ಸಮಯವನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ.
ವಕೀಲರ ಪತ್ರ ಈ ಕೆಳಗಿನಂತಿದೆ:
“ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಮನೆಯ ಮೇಲೆ ತಮ್ಮ ಕಛೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಕಲಂ 41 (ಎ) ಸಿ.ಆರ್.ಪಿ.ಸಿ ದಿನಾಂಕ:30-04-2024ರ ತಮ್ಮ ನೋಟಿಸ್ ನಲ್ಲಿ ತಾವು ದಿನಾಂಕ:01-05-2024 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರೇವಣ್ಣ ರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್‌ನ ಬಗ್ಗೆ ವಿಷಯ ತಿಳಿಸಿದ್ದು, ನನ್ನ ಕಕ್ಷಿದಾರರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ.”
ತಾನು ಮಾಡಿರುವ ಟ್ವೀಟ್ ಪೋಸ್ಟಿಗೆ ಯಾರೂ ಪ್ರತಿಕ್ರಿಯೆ ನೀಡದಂತೆ ಆರೋಪಿ ಪ್ರಜ್ವಲ್ ನಿರ್ಬಂಧಿಸಿದ್ದು, ಪಕ್ಷ ಈಗಾಗಲೇ ಅವರನ್ನು ಅಮಾನತು ಮಾಡಿದೆ.