ಬೆಂಗಳೂರು : ಜಾರಿ ನಿರ್ದೇಶನಾಲಯದ (ED) ತನಿಖೆಗೆ ಒಳಗಾಗಿರುವ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ತಮ್ಮ ವಿರುದ್ಧ ದೂರು ನೀಡಿದ ವ್ಯಕ್ತಿಯ ಸಂಪೂರ್ಣ ಮಾಹಿತಿ ತಮಗೆ ತಿಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ರಹಸ್ಯ ಮಾಹಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳ (CM) ಗಮನಕ್ಕೆ ತರಲಾಗಿದ್ದು, ಮುಂದಿನ ಹಂತದ ಪರಿಶೀಲನೆಗೆ ವಹಿಸಲಾಗಿದೆ.
ಇನ್ನು ದೂರುದಾರರು ಕಾಂಗ್ರೆಸ್ ಪಕ್ಷದವರೇ ಅಥವಾ ವಿರೋಧ ಪಕ್ಷದವರೇ ಎಂಬ ಗೊಂದಲಕ್ಕೆ ಉತ್ತರಿಸಿದ ಅವರು, ಆ ವ್ಯಕ್ತಿಗೆ ಕಾಂಗ್ರೆಸ್ ಜೊತೆ ಸಂಪರ್ಕವಿದ್ದರೂ ಮತದಾರರ ಪಟ್ಟಿಯ ಪ್ರಕಾರ ಅವರು ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆರೋಪ ಮಾಡುವ ಮತ್ತು ದೂರು ನೀಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ದೂರಿನ ಹಿಂದೆ ಯಾವುದೇ ಉದ್ದೇಶವಿದ್ದರೂ ಅದನ್ನು ಕಾನೂನಾತ್ಮಕವಾಗಿ ಎದುರಿಸಲಾಗುವುದು. ಸೂಕ್ತ ದಾಖಲೆಗಳು ಮತ್ತು ಸತ್ಯಾಂಶಗಳೊಂದಿಗೆ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇನ್ನು ದೂರು ಕೊಟ್ಟವರ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳೇ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
