ಬೆಂಗಳೂರಿನಲ್ಲಿ ಡೇಟಿಂಗ್ ಆಪ್‌ಗಳ ಮೂಲಕ ಅನೇಕ ವಂಚನೆಯ ಜಾಲಗಳು ಜನರಿಂದ ಸಾವಿರಾರು ರುಪಾಯಿಗಳನ್ನು ದೋಚುತ್ತಿವೆ. ಯುವತಿಯರನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ವಂಚನೆಗಳಲ್ಲಿ ಪಬ್‌ಗಳೂ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಬೆಂಗಳೂರಿನಲ್ಲಿ ಇನ್ನೂ ಈ ಬಗ್ಗೆ ಸಮರ್ಪಕವಾದ ಪೊಲೀಸ್ ತನಿಖೆಗಳು ನಡೆದಿಲ್ಲ
ಜನರು ಟಿಂಡರ್, ಬಂಬಲ್‌ಗಳಂತಹ ಡೇಟಿಂಗ್ ಆಪ್‌ಗಳನ್ನು ಜನರು ಪರಸ್ಪರ ಪರಿಚಯವಾಗಲು, ಸಂಗಾತಿಗಳನ್ನು ಹುಡುಕಲು ಬಳಸುತ್ತಾರೆ. ಆದರೆ ಇವನ್ನು ಮೋಸ ಮಾಡಿ, ದುಡ್ಡು ದೋಚಲು ಬಳಸಿದರೆ ಹೇಗೆ? ಇಂತಹ ಅನೇಕ ಕರಾಳ ಜಾಲಗಳು ಬೆಂಗಳೂರಿನಾದ್ಯಂತ ಸಕ್ರಿಯವಾಗಿದವೆ. ಈ ಜಾಲಗಳಲ್ಲಿ ಯುವತಿಯರೊಂದಿಗೆ ಪಬ್‌ಗಳೂ ಶಾಮೀಲಾಗಿವೆ.
ಸೆಪ್ಟೆಂಬರ್ 10, 2026 ರಂದು ವಂಚನೆಗೆ ಒಳಗಾಗಿರುವ ವ್ಯಕ್ತಿಯೊಬ್ಬರು (30) ಪೀಪಲ್ ಮೀಡಿಯಾವನ್ನು ಸಂಪರ್ಕಿಸಿದ್ದಾರೆ. ಟಿಂಡರ್ ಮೂಲಕ ಪರಿಚಯವಾದ ರಿಯಾ ಎಂಬ ಹೆಸರಿನ ಯುವತಿಯು ಇವರನ್ನು ಎಂ.ಜಿ ರೋಡ್‌ನಲ್ಲಿರುವ ʼವಸಾಬಿ ಲಾಂಜ್ʼ ಎಂಬ ಪಬ್‌ಗೆ ಕರೆತಂದು, ಕೇವಲ ಒಂದು ಗಂಟೆಯೊಳಗೆ 22,838 ರುಪಾಯಿ ಬಿಲ್ ಮಾಡಿಸಿ ಪರಾರಿಯಾಗಿದ್ದಾಳೆ. ಇದರ ಹಿಂದೆ ಪಬ್ ಕೂಡ ಶಾಮೀಲಾಗಿದೆಯೇ ಎಂಬ ಅನುಮಾನದ ಸುತ್ತ ಸದ್ಯ ವರದಿಯಾಗಿರುವ ಪ್ರಕರಣಗಳನ್ನು ಈ ವರದಿಯಲ್ಲಿ ದಾಖಲಿಸಲಾಗಿದೆ.

ವಂಚಕರ ಮೋಡಸ್ ಒಪರಾಂಡಿ:
ಬೆಂಗಳೂರಿನ ಯುವಕನೊಬ್ಬನಿಗೆ ಟಿಂಡರ್‌ನಲ್ಲಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಆಕೆ ತಾನು ಬೆಂಗಳೂರಿಗೆ ಹೊಸಬಳು ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಸ್ವಲ್ಪ ಹೊತ್ತು ಟಿಂಡರ್‌ನಲ್ಲಿ ಚಾಟ್ ನಡೆಸಿದ ನಂತರ, ವಾಟ್ಸಾಪ್ ಚಾಟ್ ಆರಂಭಿಸುತ್ತಾಳೆ. ತಕ್ಷಣ ಆಕೆ ನೇರವಾಗಿ ಯುವಕನನ್ನು ಮುಖತಃ ಭೇಟಿಯಾಗುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾಳೆ.


ಆಕೆ ಯುವಕನನ್ನು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಭೇಟಿಯಾಗುತ್ತಾಳೆ. ಆದರೆ ಫೋಟೋದಲ್ಲಿರುವ ಮಹಿಳೆಗೂ ಈಕೆಗೂ ವ್ಯತ್ಯಾಸ ಕಂಡು ಬಂದಾಗ ಯುವಕ ಆಕೆಯನ್ನು ಪ್ರಶ್ನಿಸಿದ್ದಾನೆ. ಆಕೆ “ಅವು ಫಿಲ್ಟರ್ ಮಾಡಿದ ಫೋಟೋಗಳು!” ಎಂದು ಸಮಜಾಯಿಷಿ ಕೊಟ್ಟಿದ್ದಾಳೆ.
ಈ ಯುವಕ ತಾನು ಸಾಮಾನ್ಯವಾಗಿ ಹೋಗುವ ನಿರ್ದಿಷ್ಟ ಪಬ್‌ಗೆ ಹೋಗೋಣವೆಂದು ಹೇಳಿದಾಗ, ಆಕೆ ನಿರಾಕರಿಸಿದ್ದಾಳೆ. ಆಕೆಯೇ ಒಂದು ಪಬ್ ಹೆಸರನ್ನು ಸೂಚಿಸಿ, ಅಲ್ಲಿಗೇ ಹೋಗೋಣವೆಂದು ಒತ್ತಾಯ ಮಾಡಿದ್ದಾಳೆ. ಆಕೆ ಸೂಚಿಸಿದ ಎಂ.ಜಿ ರೋಡ್‌ನಲ್ಲಿ ಇರುವ “ವಸಾಬಿ ಲಾಂಜ್” ಎಂಬ ಪಬ್‌ಗೆ ಹೋಗುತ್ತಾರೆ. (ಈ ಪಬ್‌ನ ನಾಮ ಫಲಕವನ್ನು ಗುಪ್ತವಾಗಿ ಇಟ್ಟಿರುವಂತೆ ಕಂಡು ಬಂದಿದ್ದು, ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.)
ಪಬ್ ಒಳಗೆ ಬಂದಂತೆ ಈ ಯುವಕನನ್ನು ತನ್ನ ಪಕ್ಕದಲ್ಲೇ ಕುಳಿತುಕೊಳ್ಳಲು ಹೇಳಿದ್ದಾಳೆ. ಆದರೆ, ಮುಖಾಮುಖಿ ಮಾತುಕತೆಗಾಗಿ ಆಕೆಯ ಎದುರಿನ ಕುರ್ಚಿಯಲ್ಲಿ ಯುವಕ ಕುಳಿತುಕೊಳ್ಳುತ್ತಾನೆ. ಆಕೆ ತರಾತುರಿಯಲ್ಲಿ ತನಗೆ ಬೇಕಾದ ವಿಸ್ಕಿ, ಬಿಯರ್, ಚಿಕನ್ ಕಬಾಬ್, ಜ್ಯೂಸ್ ಮತ್ತು ಸಿಗರೇಟ್ ಪ್ಯಾಕೇಟ್ ಆರ್ಡರ್ ಮಾಡಿದ್ದಾಳೆ.
ಈ ಮಧ್ಯೆ ಪಬ್‌ನ ಸಿಬ್ಬಂದಿ ಯುವಕನ ಬಳಿಗೆ ಬಂದು, “ನಿಮ್ಮ ಬಿಲ್ ಈಗಾಗಲೇ 20,000 ರುಪಾಯಿ ಆಗಿದೆ!” ಎಂದು ಹೇಳಿದರು. ಕೇವಲ ಒಂದು ಗಂಟೆಯಲ್ಲಿ ಇಷ್ಟು ದೊಡ್ಡ ಮೊತ್ತದ ಬಿಲ್ ಆಗಿರುವುದನ್ನು ಕಂಡ ಯುವಕನಿಗೆ ತಾನು ಮೋಸ ಹೋಗಿರುವ ಅನುಮಾನ ಬಂದಿದೆ. ಯುವಕ ಬಿಲ್ ಪಾವತಿ ಮಾಡಲು ನಿರಾಕರಿಸಿದಾಗ ಆಕೆ, “ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದೀಯ ಎಂದು ಪೊಲೀಸರಿಗೆ ದೂರು ನೀಡುತ್ತೇನೆ,” ಎಂದು ಬೆದರಿಕೆ ಹಾಕಿದ್ದಾಳೆ.


“ಪಬ್ ಸಿಬ್ಬಂದಿ ನೀಡಿದ ಬಿಲ್‌ನಲ್ಲಿ ಖರೀದಿಸಿದ ಸಿಗರೇಟ್ ಪ್ಯಾಕೆಟ್ ಅನ್ನು ಸೇರಿಸಿರಲಿಲ್ಲ, ಹೀಗಾಗಿ ಬಿಲ್‌ನಲ್ಲಿದ್ದ ಐಟಂಗಳು ನಿಜವಾಗಿಯೂ ನಾನು ಆರ್ಡರ್ ಮಾಡಿದ್ದೇನೆಯೇ ಎಂಬ ಅನುಮಾನ ಬಂತು,” ಎಂದು ಯುವಕ ಪೀಪಲ್ ಮೀಡಿಯಾಗೆ ತಿಳಿಸಿದ್ದಾನೆ.
ಯುವಕ ತನ್ನ ಸ್ನೇಹಿತರನ್ನು ಸಂಪರ್ಕಿಸಿದಾಗ, ಅವರು ಬಿಲ್ ಹಣ ನೀಡದಂತೆ ಮತ್ತು ಪೊಲೀಸರಿಗೆ ಕರೆ ಮಾಡುವಂತೆ ಸಲಹೆ ನೀಡಿದರು. ಯುವಕ 112 ಗೆ ಕರೆ ಮಾಡಿ ಹೊಯ್ಸಳ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಪಬ್‌ಗೆ ಬಂದ ಪೊಲೀಸರು, ಯುವಕ ಮತ್ತು ಪಬ್‌ನ ಸಿಬ್ಬಂದಿಯ ನಡುವೆ ಮಾತುಕತೆ ನಡೆದಿದೆ. ಈ ಮಧ್ಯೆ ಆ ಯುವತಿ ಪಬ್‌ನಿಂದ ಪಲಾಯನ ಮಾಡಿದ್ದಾಳೆ. ಯುವಕ ಪೊಲೀಸರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು, ನಡೆದ ಘಟನೆಯ ಬಗ್ಗೆ ತನ್ನ ಹೇಳಿಕೆಗಳನ್ನು ನೀಡಿದ್ದಾನೆ. ಪೊಲೀಸರು ವಸಾಬಿ ಲಾಂಜ್ ಪಬ್‌ನ ಇಬ್ಬರು ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಮೂಲಕ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ.
ಯುವಕ ತನಗಾಗಿರುವ ವಂಚನೆಯ ಬಗ್ಗೆ ಸಪ್ಟೆಂಬರ್ 12, 2026 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾನೆ. ಇಂತಹ ಅನೇಕ ದೂರುಗಳು ಈಗಾಗಲೇ ಪೊಲೀಸರು ಬಳಿ ಇವೆ.
ಪೀಪಲ್ ಮೀಡಿಯಾ ಆ ಯುವತಿಯ ಮೊಬೈಲ್ ಸಂಖ್ಯೆಯನ್ನು (9315299905) ಪರಿಶೀಲಿಸಿದಾಗ, ಅದರಲ್ಲಿ ಮಿ.ರಾಹುಲ್ ಎಂಬ ಹೆಸರು ಇರುವುದು ಕಂಡು ಬಂದಿದೆ. ಆದರೆ ಪೊಲೀಸರು, “ಇದೊಂದು ಉತ್ತರ ಭಾರತದವರ ಮೊಬೈಲ್ ಸಂಖ್ಯೆ. ಇವರು ದುರ್ಬಳಕೆ ಮಾಡಿಕೊಂಡಿದ್ದಾರೆ,” ಎಂದು ತಿಳಿಸಿದ್ದಾರೆ. ಆದರೆ ಆ ಸಂಖ್ಯೆಯಲ್ಲಿ ರಾಹುಲ್ ಎಂಬ ಹೆಸರಿನಲ್ಲಿ ಗೂಗಲ್ ಪೇ ಸಕ್ರಿಯವಾಗಿದೆ. ಈಕೆಯ ಮೊಬೈಲ್ ಸಂಖ್ಯೆಯ ಪರಿಶೀಲಿಸಿದರೆ, ಈ ಜಾಲವನ್ನು ಪತ್ತೆ ಮಾಡಬಹುದು.

“ಘಟನೆ ನಡೆದ ಮರುದಿನ, ಸಪ್ಟೆಂಬರ್ 11 ರಂದು ನಾನು ಅದೇ ಯುವತಿಯ ಸಂಜೆ 5:48 ಗಂಟೆಗೆ ಬ್ರಿಗೇಡ್ ರೋಡ್ ಸಿಗ್ನಲ್ ಬಳಿ ಇರುವ ಟ್ರಾಫಿಕ್ ಪೊಲೀಸ್ ಬೂತ್ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುವುದನ್ನು ನೋಡಿದ್ದೇನೆ,” ಎಂದು ಯುವಕ ಪೀಪಲ್ ಮೀಡಿಯಾಗೆ ತಿಳಿಸಿದ್ದಾನೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇಂತಹ 12 ರಷ್ಟು ದೂರುಗಳು ಬಂದಿವೆ. ಅನೇಕ ಯುವಕರು ಭಯಭೀತರಾಗಿ ಪಬ್ ನೀಡಿದ ಬಿಲ್‌ನಲ್ಲಿರುವ ಮೊತ್ತದ ಹಣವನ್ನು ನೀಡಿ ಮೋಸ ಹೋಗಿದ್ದಾರೆ. ವರದಿಗಾರರಿಗೆ ಪೊಲೀಸರು ನೀಡಿದ ಮಾಹಿತಿಯಂತೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಸಾಬಿ ಲಾಂಜ್ ನಲ್ಲಿ ಇದೇ ರೀತಿಯ ವಂಚನೆ ನಡೆದಿರುವ ಪ್ರಕರಣಗಳು ಈ ಹಿಂದೆಯೂ ಬಂದಿವೆ.
ಈ ಹಿನ್ನಲೆಯಲ್ಲಿ ಪೀಪಲ್ ಮೀಡಿಯಾ ವಸಾಬಿ ಲಾಂಜ್‌ನ ಜೊಮಾಟೋ ರಿವ್ಯೂಗಳನ್ನು ಪರಿಶೀಲಿಸಿದೆ. ಇದರಲ್ಲಿ ಅನೇಕ ಮಂದಿ ತಮಗೂ ಈ ರೀತಿಯ ವಂಚನೆಯಾಗಿರುವುದನ್ನು ದಾಖಲಿಸಿದ್ದಾರೆ.



ಈ ಮೋಸದಲ್ಲಿ ಎಂ.ಜಿ ರೋಡ್ ವಸಾಬಿ ಲಾಂಜ್ ಪಬ್ ಶಾಮೀಲು?
ಬೆಂಗಳೂರಿನ ಅನೇಕ ಪಬ್‌ಗಳು ಇಂತಹ ಕೃತ್ಯದಲ್ಲಿ ಶಾಮೀಲಾಗಿವೆ. ಈ ಪ್ರಕರಣಗಳಲ್ಲಿ ಮಹಿಳೆಯರು ಯುವಕರನ್ನು ಎಂ.ಜಿ ರೋಡ್‌ನ ವಸಾಬಿ ಲಾಂಜ್ ಎಂಬ ಪಬ್‌ಗೆ ಕರೆದುಕೊಂಡು ಹೋಗಿದ್ದಾರೆ. ಇಂತಹ ಅನೇಕ ಘಟನೆಗಳು ಇದೇ ಪಬ್‌ನಲ್ಲಿ ನಡೆದಿವೆ. ಜೊಮ್ಯಾಟೋವಿನಲ್ಲಿ ವಸಾಬಿ ಲಾಂಜ್‌ಗೆ ಗ್ರಾಹಕರು ನೀಡಿರುವ ಅಭಿಪ್ರಾಯಗಳು ಬೆಚ್ಚಿಬೀಳಿಸುವಂತಿವೆ.

“ನಿಕಿತಾ ಸಿಂಗ್ ಎಂಬ ಹುಡುಗಿ ಇದ್ದಾಳೆ. ನೀವು ಅವಳನ್ನು ಬಂಬಲ್‌ನಲ್ಲಿ ನೋಡಬಹುದು. ಅವಳು ನಿಮ್ಮನ್ನು ಅಲ್ಲಿಗೆ (ವಸಾಬಿ ಲಾಂಜ್) ಕರೆದುಕೊಂಡು ಹೋಗಿ ರಾಯಲ್ ಅಬ್ಸೊಲ್ಯೂಟ್ ಮತ್ತು ಬ್ಲೂ ಲೇಬಲ್ 60 ಎಂ.ಎಲ್ ನಂತಹ ಎಲ್ಲಾ ಪ್ರೀಮಿಯಂ ಡ್ರಿಂಕ್‌ಗಳನ್ನು ಕುಡಿಯುತ್ತಾಳೆ. ನಂತರ ಅವರು (ಪಬ್) ನಿಮಗೆ ಕೆಲವೇ ನಿಮಿಷಗಳಲ್ಲಿ 20 30 ಸಾವಿರ ಬಿಲ್ ಮಾಡುತ್ತಾರೆ. ನೋಡಲು ಕುಳ್ಳಿಗಿನ ದೇಹದ, ಕೂದಲು ಸ್ಟ್ರೈಟ್ ಮಾಡಿಸಿಕೊಂಡಿರುವ ಯುವತಿ. ಅವಳ ಬಲೆಗೆ ಬೀಳಬೇಡಿ. ನಿಮ್ಮ ಡೇಟ್ ಮುಗಿದ ತಕ್ಷಣ ಅವಳು ವಾಶ್‌ರೂಮ್‌ಗೆ ಹೋಗುತ್ತಾಳೆ. ಮಾಲೀಕನ ಹೆಸರು ಸಂತೋಷ್ ನಾಯಕ. ಅವನೊಬ್ಬ ಮೋಸಗಾರ,” ಎಂದು ಲಕ್ಕಿ ಎಂಬ ವ್ಯಕ್ತಿ ರಿವ್ಯೂ ನೀಡಿದ್ದಾರೆ.
ನವೀನ್ ಪೌಲ್ ಎಂಬ ವ್ಯಕ್ತಿ, “ನಿಕಿತಾ ಸಿಂಗ್ ಈ ಹಗರಣದಲ್ಲಿ ಭಾಗಿಯಾಗಿದ್ದಾಳೆ. ಬಂಬಲ್ ಆ್ಯಪ್ ಮೂಲಕ ವ್ಯಕ್ತಿಯನ್ನು ಭೇಟಿ ಮಾಡಿ, ಅವರ ಜೊತೆಗೆ ಡ್ರಿಂಕ್ ಕುಡಿದು, 4 ವಿಸ್ಕಿ ಮತ್ತು 3 ಟಕಿಲಾ ಶಾಟ್‌ಗಳಿಗೆ 26000 ಬಿಲ್ ಬರುವಂತೆ ಮಾಡಿದಳು. ಇವರೆಲ್ಲಾ ವಂಚಕರು ……” ಎಂದು ರಿವ್ಯೂ ನೀಡಿದ್ದಾರೆ.
ಅರುಷಿ ಎಂಬವರು, “ದಯವಿಟ್ಟು ಇವರನ್ನು (ವಸಾಬಿ ಲಾಂಜ್) ಪೋರ್ಟಲ್‌ನಿಂದ ತೆಗೆದುಹಾಕಿ. ಹುಡುಗಿಯರು ಹುಡುಗರನ್ನು ಇಲ್ಲಿಗೆ ಡೇಟ್‌ಗೆ ಕರೆತರುವಂತೆ ಮಾಡಿ, ಅವರಿಗೆ ದೊಡ್ಡ ಮೊತ್ತದ ಬಿಲ್ ನೀಡಿ ಸ್ಕ್ಯಾಮ್ ಮಾಡುತ್ತಿದ್ದಾರೆ,” ಎಂದು ಜೊಮ್ಯಾಟೋಗೆ ಮನವಿ ಮಾಡಿದ್ದಾರೆ.
ಇದೇ ವಸಾಬಿ ಲಾಂಜ್‌ನಲ್ಲಿ 8,000 ರುಪಾಯಿಯ ಮೋಸ ನಡೆದಿರುವ ಬಗ್ಗೆ ಟೈಮ್ಸ್ ನೌ ವರದಿ ಮಾಡಿದೆ. ರೆಡ್‌ಇಟ್ ಪೋಸ್ಟ್ ಒಂದರಲ್ಲಿ ಬಂಬಲ್ ಡೇಟ್‌ನಲ್ಲಿ ಪರಿಚಯವಾದ ಮಹಿಳೆಯ ಮೂಲಕ ಬೆಂಗಳೂರಿನ ವಸಾಬಿ ಲಾಂಚ್‌ನಲ್ಲಿ ಮೋಸ ನಡೆದಿರುವುದು ಉಲ್ಲೇಖವಾಗಿದೆ. ಆ ಮಹಿಳೆ ಮೆನು ನೋಡದೆ ದುಬಾರಿ ಡ್ರಿಂಕ್ಸ್‌ಗಳನ್ನು ಆರ್ಡರ್ ಮಾಡಿದ್ದಾಳೆ. ಕೊನೆಗೆ, ನಿರೀಕ್ಷೆಗಿಂತ ಹೆಚ್ಚು, ಸುಮಾರು 8,000 ರುಪಾಯಿಗಳ ಬಿಲ್ ಆಗಿರುವುದನ್ನು 2026 ರ ಜನವರಿ 25 ರಂದು ಟೈಮ್ಸ್ ನೌ ವರದಿ ಮಾಡಿದೆ.
ಈ ರೀತಿಯ ವಂಚನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳ ಮೂಲಕ ಜನರು ಮಾಹಿತಿಯನ್ನು ನೀಡಿದ್ದಾರೆ: ವೀಡಿಯೋ 1 ಮತ್ತು ವೀಡಿಯೋ 2
ಈ ರೀತಿಯ ವಂಚನೆಗಳಲ್ಲಿ ವಸಾಬಿ ಲಾಂಜ್‌ನಂತಹ ಬೆಂಗಳೂರಿನ ಅನೇಕ ಪಬ್‌ಗಳು ಭಾಗಿಯಾಗಿರುವ ಅನುಮಾನಗಳು ಕಾಡುತ್ತಿವೆ. ಪಬ್‌ಗಳು ಇದಕ್ಕಾಗಿಯೇ ಹುಡುಗಿಯನ್ನು ನೇಮಿಸಿಕೊಳ್ಳುತ್ತವೆ. ಈ ಹುಡುಗಿಯರು ಟಿಂಡರ್, ಬಂಬಲ್‌ಗಳಂತಹ ಡೇಟಿಂಗ್ ಆಪ್‌ಗಳಲ್ಲಿ ಪುರುಷರನ್ನು ಹುಡುಕಿ ಅವೇ ಪಬ್‌ಗಳಿಗೆ ಕರೆದುಕೊಂಡು ಬರುತ್ತಾರೆ. ವಂಚನೆಯ ತಂತ್ರ ಯಶಸ್ವಿಯಾದಂತೆ ಈ ಹುಡುಗಿಯರಿಗೆ ಪಬ್‌ನವರು 20% ನಷ್ಟು ಕಮಿಷನ್ ಕೊಡುತ್ತಾರೆ.
2024 ರ ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ಡೇಟಿಂಗ್ ಆಪ್ ವಂಚನೆಯ ಜಾಲವನ್ನು ನಡೆಸುತ್ತಿದ್ದ ಏಳು ಜನರನ್ನು ಬಂಧಿಸಲಾಗಿತ್ತು. ದೆಹಲಿಯಲ್ಲಿ ನೈಟ್ ಕ್ಲಬ್ ಹೊಂದಿದ್ದ ಆರೋಪಿಗಳು ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದರು. ಇವರು ಸಾಮಾನ್ಯವಾಗಿ ನಷ್ಟದಲ್ಲಿ ಓಡುತ್ತಿರುವ ಮತ್ತು ಆನ್‌ಲೈನ್‌ನಲ್ಲಿ ಕಳಪೆ ರೇಟಿಂಗ್ ಹೊಂದಿರುವ ಪಬ್‌ಗಳನ್ನು ಆಯ್ಕೆ ಮಾಡುತ್ತಿದ್ದರು.
2026 ರ ಮಾರ್ಚ್‌ನಲ್ಲಿ ಬೆಳ್ಳಂದೂರಿನಲ್ಲಿ ನಡೆದ ಒಂದು ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಪಬ್ ಸಿಬ್ಬಂದಿ 65,000 ರುಪಾಯಿ ಬಿಲ್ ನೀಡಿದ್ದರು. ಕೆಲವೇ ಕೆಲವು ಡ್ರಿಂಕ್‌ಗಳಿಗೆ ಇಷ್ಟು ಮೊತ್ತದ ಬಿಲ್ ಆಗಿದ್ದನ್ನು ಕಂಡ ಆ ವ್ಯಕ್ತಿ ಸಿಬ್ಬಂದಿಯನ್ನು ಪ್ರಶ್ನಿಸಿದರು. ಸಿಬ್ಬಂದಿ ಆ ವ್ಯಕ್ತಿಗೆ ಬಿಲ್ ಪಾವತಿಸಲು ನಿರಾಕರಿಸಿದರೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಮುಜುಗರ ಮತ್ತು ಹೆಚ್ಚಿನ ತೊಂದರೆಗೆ ಹೆದರಿ, ಅವರು ಬಿಲ್ ಅನ್ನು ಇತ್ಯರ್ಥಪಡಿಸಿ ಹೊರಟುಹೋಗಿದ್ದರು.
ಇನ್ನೊಬ್ಬ ವ್ಯಕ್ತಿಗೆ 37,000 ರುಪಾಯಿ ಬಿಲ್ ನೀಡಲಾಗಿತ್ತು. ತಕ್ಷಣವೇ ಅವರು 112 ಗೆ ಕರೆ ಮಾಡಿ ಹೊಯ್ಸಳ ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಆದಾಗ್ಯೂ, ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ.
ಕೋರಮಂಗಲದ ಮಿರರ್ ಎಂಬ ಪಬ್‌ನಲ್ಲಿಯೂ ಗ್ರಾಹಕರು ಈ ರೀತಿ ಮೋಸ ಹೋಗಿರುವ ಬಗ್ಗೆ ಅಭಿಪ್ರಾಯಗಳು ವರದಿಯಾಗಿವೆ. ಬೆಂಗಳೂರಿನಲ್ಲಿರುವ ಕೆಲವು ಕೆಫೆಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಮಹಿಳೆಯೊಬ್ಬರು ಬಂಬಲ್ ಮೂಲಕ ಯುವಕನಿಂದ ಮೋಸ ಹೋಗಿರುವದುನ್ನು r/Bengaluru ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಂ.ಜಿ ರೋಡ್‌ನಲ್ಲಿರುವ ಸ್ಕೈಡೆಕ್ ಬೈ ಶೆರ್ಲಾಕ್ ಕೆಫೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ 8,500 ರುಪಾಯಿ ಬಿಲ್ ಪಾವತಿಸಿ ಬಂದಿದ್ದರು.
ಮುಂಬೈ ಮತ್ತು ಬೆಂಗಳೂರಿನಲ್ಲಿ ಟಿಂಡರ್, ಬಂಬಲ್, ಹಿಂಜ್, ಓಕೆಕ್ಯುಪಿಡ್ ಮತ್ತು ಐಸಲ್ ನಂತಹ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳ ಮೂಲಕ ಅನೇಕ ಜಾಲಗಳು ಜನರನ್ನು ರೆಸ್ಟೋರೆಂಟ್‌ಗಳಿಗೆ ಆಕರ್ಷಿಸುತ್ತಿವೆ. ಇಲ್ಲಿ ಆ ರೆಸ್ಟೋರೆಂಟ್‌ಗಳಿಗೂ, ವಂಚಕರಿಗೂ ಸಂಬಂಧ ಇರುತ್ತದೆ. ವಂಚಕರು ಗ್ರಾಹಕರನ್ನು ಇಲ್ಲಿಗೆ ಕರೆತಂದು, ಬ್ಲೂ ಲೇಬಲ್ ವಿಸ್ಕಿ ಅಥವಾ ಹುಕ್ಕಾದಂತಹ ಮೆನುವಿನಲ್ಲಿ ಇಲ್ಲದ ಐಟಂಗಳನ್ನು ಆರ್ಡರ್ ಮಾಡುತ್ತಾರೆ. ಗ್ರಾಹಕರಿಗೆ 61,000 ರುಪಾಯಿ ವರೆಗೆ ಬಿಲ್ ಬಂದಾಗ ತಾವು ಮೋಸ ಹೋಗಿರುವ ಅರಿವಾಗುತ್ತದೆ. 2026 ರ ಜನವರಿಯಲ್ಲಿ ಮುಂಬೈ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸೇರಿದಂತೆ 22 ಜನರ ಗುಂಪನ್ನು ಬಂಧಿಸಿದ್ದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಪೊಲೀಸ್ ದೂರು ನೀಡುವಲ್ಲಿಗೇ ಮುಗಿಯುತ್ತಿವೆ. ಅನೇಕ ಪ್ರಕರಣಗಳಲ್ಲಿ ದೂರುಗಳನ್ನೂ ನೀಡಲಾಗುತ್ತಿಲ್ಲ. ಠಾಣೆಗಳಿಗೆ ಬಂದ ಪ್ರಕರಣಗಳ ಬಗ್ಗೆ ತನಿಖೆಗಳೂ ನಡೆಯುತ್ತಿಲ್ಲ. ಈ ಜಾಲದಲ್ಲಿ ಪಬ್, ಯುವತಿಯರು, ವಂಚನೆಯ ಜಾಲಗಳ ಜೊತೆಗೆ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಇಂತಹ ವಂಚನೆಯ ಜಾಲಗಳು ಇನ್ನೂ ಪೊಲೀಸರ, ಕಾನೂನಿನ ಭಯವಿಲ್ಲದೆ ಯಾವ ಧೈರ್ಯದಲ್ಲಿ ಸಕ್ರಿಯವಾಗಿವೆ?
ಈ ವರದಿಯನ್ನು ಬರೆಯುವ ಹೊತ್ತಿಗಾಗಲೇ ಇನ್ನೊಂದು ಹೊಸ ಪ್ರಕರಣ ಪೀಪಲ್ ಮೀಡಿಯಾದ ಗಮನಕ್ಕೆ ಬಂದಿದೆ. ನಿನ್ನೆ, ಸೆಪ್ಟೆಂಬರ್ 12 ರಂದು ರಾತ್ರಿ ಯುವಕನೊಬ್ಬನಿಗೆ 50,000 ರುಪಾಯಿಗಳ ವಂಚನೆಯಾಗಿದೆ. ಮಾಹಿತಿಯನ್ನು ಸಂಗ್ರಹಿಸಿದ ನಂತರ ಆ ಪ್ರಕರಣದ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ.
