ಮಂಡ್ಯದ ಹಾಲಿ ಲೋಕಸಭಾ ಸದಸ್ಯೆ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಜೆಡಿಎಸ್ಗೆ ಕ್ಷೇತ್ರವನ್ನು ತ್ಯಾಗ ಮಾಡಿರುವುದಾಗಿ ಶುಕ್ರವಾರ ಹೇಳಿದ್ದಾರೆ.
ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಸುಮಲತಾ ಬೆಂಬಲ ನೀಡಿಲ್ಲ ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. “ಯಾರೋ ಅವರನ್ನು ದಾರಿ ತಪ್ಪಿಸಿರಬೇಕು. ಎನ್ಡಿಎ ಅಭ್ಯರ್ಥಿಯ ಗೆಲುವನ್ನು ನೋಡಲು ನಾನು ಬಯಸುತ್ತೇನೆ, ಏಕೆಂದರೆ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.
ಪ್ರಚಾರಕ್ಕೆ ಮಂಡ್ಯಕ್ಕೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಸುಮಲತಾ ಅವರು, ಜೆಡಿಎಸ್ ಅಭ್ಯರ್ಥಿಯಾಗಲಿ ಅಥವಾ ಪಕ್ಷದ ಯಾರೊಬ್ಬರೂ ಪ್ರಚಾರಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಆಹ್ವಾನಿಸಿದ್ದರೆ ನಾನು ಖಂಡಿತವಾಗಿಯೂ ಬರುತ್ತಿದ್ದೆ ಎಂದು ಅವರು ಹೇಳಿದರು.
ಇದೇ ವೇಳೆ ಮದ್ದೂರು ತಾಲೂಕಿನ ಕೆ ಹೊನ್ನಲಗೆರೆಯಲ್ಲಿದ್ದ ಎನ್ಡಿಎ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಚಾರಕ್ಕೆ ನಾನೇ ಖುದ್ದು ಆಹ್ವಾನಿಸಿದ್ದೆ ಎಂದು ಹೇಳಿದರು.
ಈ ವಿಚಾರದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ಸುಮಲತಾ ಅವರು ನನಗೆ ಮತ ಹಾಕಲು ಬೆಂಗಳೂರಿನಿಂದ ಬಂದಿದ್ದರು. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕೂಡ ನನಗೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.