ಬೆಂಗಳೂರು: ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಮದಕರಿ ನಾಯಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಬ್ಬರದ ಭಾಷಣ ಮಾಡಿದ್ದ ಮಾಜಿ ಸಂಸದ ವಿಎಸ್ ಉಗ್ರಪ್ಪ ನಟ ಸುದೀಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಾಯಕ ಸಮುದಾಯದ ಮಗನಾಗಿದ್ದರೆ ನಮ್ಮ ಸಮುದಾಯದ ಪರ ಧ್ವನಿ ಎತ್ತಿ. ದಮ್ಮು, ತಾಕತ್ ಇದ್ರೆ ನಮ್ಮ ಸಮುದಾಯದ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದಿದ್ದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಟ ಸುದೀಪ್ ಅವರಿಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ನಟ ಸುದೀಪ್ ಅವರು ನಮ್ಮ ಸಮುದಾಯದ ಹೆಸರಲ್ಲಿ ಗುರುತಿಸಿಕೊಂಡವರು. ನಾಯಕ ಸಮಾಜದ ಜಯಂತಿಯಲ್ಲಿ ಸುದೀಪ್ ಅವರನ್ನು ಮೊದಲು ಪರಿಚಯಿಸಿದ್ದೇ ನಾನು. ನಾನು ವಕೀಲ ಎಲ್ಲರ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಗೋಕಾಕ್ ಚಳುವಳಿಗಾಗಿ ಡಾ. ರಾಜಕುಮಾರ್ ಕೂಡ ಬೀದಿಗಿಳಿದು ಹೋರಾಟ ಮಾಡಿದ್ದರು ಎಂದರು.
‘ರಾಜೂಗೌಡರೇ ನಿಮಗೂ ಸುದೀಪ್ಗೂ ಈಗಲೂ ಹೇಳುವುದೇನೆಂದರೆ, ಸಮಾಜಕ್ಕಾಗಿ ಹೋರಾಟ ಮಾಡೋಣ, ಸುದೀಪ್ ಅವರೇ ನೀವು ಬನ್ನಿ ನಿಮ್ಮ ನಾಯಕತ್ವದಲ್ಲೇ ಹೋರಾಡೋಣ. ಫೇವರಿಸಂ ಬೆಳೆಸೋ ಹೇಳಿಕೆ ಒಳ್ಳೇದಲ್ಲ. ಸಮಾಜದ ಬೆಂಬಲಕ್ಕೆ ನೀವು ನಿಲ್ಲಬೇಕು. ಸಮಾಜ ನಿಮ್ಮ ಬೆಂಬಲಕ್ಕೆ ಬಂದಿದ್ದು ನೆನಪಿದೆಯಲ್ಲ. ನಾನು ಇದುವರೆಗೂ ಯಾರಿಗೂ ಅಗೌರವ ತೋರಿಲ್ಲ. ಅಗೌರವವಾಗುವಂತೆ ನಡೆದುಕೊಂಡೂ ಇಲ್ಲ. ಬದುಕಿನ ಪ್ರಶ್ನೆ ಬಂದಾಗ ಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ, ನಮ್ಮ ಆಕ್ರೋಶ ಎಲ್ಲರಿಗೂ ಗೊತ್ತಾಗಬೇಕು ಎಂದು ಹೇಳಿದರು.
SC/ST ಮೀಸಲಾತಿ ಹೆಚ್ಚಳಕ್ಕೆ ತಡೆ ನೀಡಿರುವ ಹೈಕೋರ್ಟ್ ನಿರ್ಧಾರ ಈ ಸಮಾಜಗಳ ಪಾಲಿಗೆ ದೊಡ್ಡ ಹೊಡೆತ. ಸಂವಿಧಾನದ ಆಶಯಗಳಿಗೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ತೀರ್ಪು ಇದಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಇದೆ ಎಂದು ಜಸ್ಟೀಸ್ ನಾಗಮೋಹನ್ ದಾಸ್, ಸುಭಾಷ್ ಆದಿ ಅವರಿದ್ದ ಸಮಿತಿ ನೀಡಿದ್ದ ವರದಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಿದ್ದರು. ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಸೇರ್ಪಡೆ ಮಾಡಿದಂತೆ ನಮ್ಮ ಮೀಸಲಾತಿ ಸೇರ್ಪಡೆಗೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
