ಬಿಜೆಪಿ ರಾಜ್ಯಾಧ್ಯಕ್ಷನಾಗಲು ನನಗೆ ಅವಕಾಶ ಸಿಕ್ಕಿದರೆ ನಿಭಾಯಿಸಲು ಸಿದ್ಧ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದಕ್ಕೆ ನನ್ನದೇನೂ ಭಿನ್ನಾಭಿಪ್ರಾಯವಿಲ್ಲ, ಬದಲಾವಣೆಗೆ ನಾನು ಒತ್ತಾಯಿಸಿಯೂ ಇಲ್ಲ.
ಆಕಸ್ಮಿಕವಾಗಿ ವಿಜಯೇಂದ್ರ ಅವರು ಅಧ್ಯಕ್ಷರಾಗಿದ್ದು, ಅನುಭವದ ಕೊರತೆ ಇರಬಹುದು. ಆದರೆ ದಕ್ಷಿಣ ಭಾರತದ ಭೀಷ್ಮರಾಗಿರುವ ಯಡಿಯೂರಪ್ಪ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ಪಕ್ಷ ಮುನ್ನಡೆಸಲು ಯಡಿಯೂರಪ್ಪ ಮುಂದೆ ಬರಬೇಕೆಂದು ಮನವಿ ಮಾಡಿದ ಅವರು, ಯಡಿಯೂರಪ್ಪ ಅವರಿಂದ ನಾವು ಬೆಳೆದಿದ್ದೇವೆ, ಅವರು ಮನಸ್ಸು ಮಾಡಿ ನನಗೆ ಅವಕಾಶ ಕೊಟ್ಟರೆ 224 ಕ್ಷೇತ್ರಗಳಲ್ಲೂ ಪಕ್ಷವನ್ನು ಸಂಘಟಿಸಿ ಭಿನ್ನಾಭಿಪ್ರಾಯ ಶಮನ ಮಾಡಲು ಸಿದ್ಧ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಮನಸ್ಸಿನಿಂದ ನನ್ನ ಹೆಸರು ಪ್ರಸ್ತಾವ ಮಾಡಿರುವುದು ಸಂತೋಷ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಒಟ್ಟಾರೆ ಬಿಜೆಪಿ ಉಳಿಸಿ, ಬೆಳೆಸಲು ಎಲ್ಲರೂ ಒಂದಾಗಿ ಸಾಗಬೇಕು ಎಂಬುದೇ ನನ್ನ ಅಭಿಲಾಷೆ ಎಂದರು.