Wednesday, June 19, 2024

ಸತ್ಯ | ನ್ಯಾಯ |ಧರ್ಮ

‌ಪಾರ್ಲಿಮೆಂಟ್‌ ಚುನಾವಣೆ: ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ- ಸುಮಲತಾ ಅಂಬರೀಷ್

ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಬೆನ್ನಲ್ಲೇ ಮಂಡ್ಯ ಕ್ಷೇತ್ರದ ಲೋಕಸಭಾ ಟಿಕೆಟ್ಟಿಗಾಗಿ ಹಗ್ಗ ಜಗ್ಗಾಟವೂ ಆರಂಭಗೊಂಡಿದೆ. ಇತ್ತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಕಗ್ಗಂಟುಗಳನ್ನೇ ಬಿಡಿಸಿಕೊಳ್ಳಲು ಬಿಜೆಪಿ ಪರದಾಡುತ್ತಿದ್ದರೆ ಅತ್ತ ಜೆಡಿಎಸ್‌ ತನ್ನ ನಾಯಕರನ್ನು ಉಳಿಸಿಕೊಳ್ಳಲು ತನ್ನಿಂದ ಸಾಧ್ಯವಿರುವ ದಾಳಗಳೆಲ್ಲವನ್ನೂ ಉರುಳಿಸುತ್ತಿದೆ.

ಪರಿಸ್ಥಿತಿ ಹೀಗಿರುವಾಗ ಇತ್ತೀಚೆಗಷ್ಟೇ ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಸುಮಲತಾ ಅವರು ಈಗ ಹೊಸದೊಂದು ಬಾಂಬ್‌ ಸಿಡಿಸಿದ್ದು, ತಾನು ಮಂಡ್ಯ ಕ್ಷೇತ್ರದ ಟಿಕೆಟ್‌ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ. ಒಕ್ಕಲಿಗ ಮತಗಳು ಅಲಿಡ್‌ ಆಗಿರುವ ಮಂಡ್ಯದಲ್ಲಿ ತನ್ನ ಪಕ್ಷಕ್ಕೆ ಟಿಕೆಟ್‌ ಇಲ್ಲದೆ ಹೋದರೆ ಅದು ಜೆಡಿಎಸ್‌ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆಯಾಗಲಿದ್ದು, ತನ್ನ ಮತ ಬುಟ್ಟಿಯನ್ನು ಅನಾಮತ್ತಾಗಿ ಬಿಜೆಪಿಯ ಕೈಯಲ್ಲಿ ಇಟ್ಟಂತಾಗುತ್ತದೆ.

ಒಮ್ಮೆ ಜೆಡಿಎಸ್‌ ಪಕ್ಷದ ತೆಕ್ಕೆಯಿಂದ ಬಿಡಿಸಿಕೊಂಡ ಮತಗಳು ಮತ್ತೆ ಅದರ ಬಳಿಗೆ ಮರಳುವುದು ಅನುಮಾನವಿದೆ. ಹೀಗಾಗಿ ಇದು ಜೆಡಿಎಸ್‌ ಪಕ್ಷದ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಕಳೆದ ಬಾರಿ ಇಲ್ಲಿಂದ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ 5,77,784 ಮತಗಳನ್ನು ಎರಡನೇ ಸ್ಥಾನದಲ್ಲಿದ್ದರು. ಇಷ್ಟು ಮತಗಳನ್ನು ಹೊಂದಿರುವ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಜೆಡಿಎಸ್‌ ಪಾಲಿಗೆ ಉಳಿಯುವುದು ಎನ್ನುವುದು ಪ್ರಶ್ನೆಯಾಗಿದೆ.

ಅತ್ತ ಈ ಕುರಿತು ಕಡ್ಡಿ ತುಂಡು ಮಾಡಿದಂತೆ ಮಾತನಾಡಿರುವ ಸುಮಲತಾ ತಾನು ಬೇರೆ ಕ್ಷೇತ್ರಗಳಿಂದ ನಿಲ್ಲುವುದಾಗಿದ್ದರೆ ತನಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ನೀಡುವುದಾಗಿ ಹೇಳಲಾಗಿತ್ತು ಆದರೆ ಮಂಡ್ಯದ ಜನರೊಂದಿಗೆ ನನಗೆ ವಿಶೇಷ ಅನುಬಂಧವಿದೆ, ಹೀಗಾಗಿ ನಾನು ಮಂಡ್ಯ ಬಿಟ್ಟು ಇನ್ನೆಲ್ಲೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಈಗಾಗಲೇ ನೂರಾರು ಬಾರಿ ಹೇಳುತ್ತಾ ಬಂದಿದ್ದೇನೆ. ಬೇಕಿದ್ದರೆ ಈ ಕುರಿತು ರಕ್ತದಲ್ಲೂ ಬರೆದುಕೊಡಬಲ್ಲೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಹಿರಿಯ ರಾಜಕಾರಣಿ ಸದಾನಂದ ಗೌಡ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದಾರೆನ್ನುವ ಸುದ್ದಿಯೂ ಬರುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿಗಳು ಸದ್ಯಕ್ಕೆ ಸುಧಾರಿಸಬಹುದಾದ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

Related Articles

ಇತ್ತೀಚಿನ ಸುದ್ದಿಗಳು