ದುಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೈ ಶಾ ಅವರು ಕ್ರಿಕೆಟ್ ಆಟವನ್ನು ಎತ್ತರಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ.
ಅಧ್ಯಕ್ಷರಾಗಿ ಗುರುವಾರ ಮೊದಲ ಬಾರಿಗೆ ಐಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ ಅವರು, ಹೊಸ ಜವಾಬ್ದಾರಿಗಳು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸುತ್ತವೆ ಎಂದು ಹೇಳಿದರು.
‘ನಾನು ಆಸಕ್ತಿಯಿಂದ ಯಾವುದನ್ನು ನೋಡುತ್ತಿದ್ದೆನೋ… ಅದೇ ನನಗೆ ಈಗ ಪ್ರೇರಣೆಯಾಗಿದೆ. ಒಳ್ಳೆಯ ಮನ್ನಣೆ ನೀಡುತ್ತಿದೆ. ಆದರೆ ಇದು ನನಗೆ ಪ್ರಾರಂಭ! ಕ್ರಿಕೆಟ್ ಆಟ ಇನ್ನಷ್ಟು ಸೊಗಸಾಗಿರಬೇಕು. ಆಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ಅಧಿಕಾರಿಗಳೊಂದಿಗೆ ನಾನು ಇಂದಿನಿಂದಲೇ ಶ್ರಮಿಸುತ್ತೇನೆ. ನಾವೆಲ್ಲರೂ ಸ್ಪಷ್ಟ ದೃಷ್ಟಿಕೋನದಿಂದ ಮುನ್ನಡೆಯುತ್ತೇವೆ’ ಎಂದರು.
ಕಚೇರಿಗೆ ಭೇಟಿ ನೀಡುವುದರಿಂದ ಸಹೋದ್ಯೋಗಿಗಳೊಂದಿಗೆ ಉತ್ತಮ ಸಮನ್ವಯತೆ ಏರ್ಪಟ್ಟು ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಮುಂದಿನ ದಿನಗಳಿಗೆ ಅಗತ್ಯವಿರುವ ಯೋಜನೆಗಳು ಇಲ್ಲಿಂದ ಪ್ರಾರಂಭವಾಗುತ್ತವೆ ಎಂದು ಅವರು ಹೇಳಿದರು.
ಸಮರ್ಪಿತ ಐಸಿಸಿ ತಂಡದೊಂದಿಗೆ ಕೆಲಸ ಮಾಡುವುದು ಉತ್ತಮ ಅನುಭೂತಿ ನೀಡುತ್ತಿದೆ ಎಂದು ಅವರು ಹೇಳಿದರು. ಡೆಪ್ಯೂಟಿ ಚೇರ್ಮನ್ ಇಮ್ರಾನ್ ಖ್ವಾಜಾ ಜಯ್ ಶಾ ಅವರನ್ನು ಸ್ವಾಗತಿಸಿದರು ಮತ್ತು ಹೊಸ ಐಸಿಸಿ ಅಧ್ಯಕ್ಷರ ಅಧಿಕಾರಾವಧಿಯಲ್ಲಿ ಅವರು ಇನ್ನೂ ಅನೇಕ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸಿದರು.