ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಮನೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ರೈತರು ಬೆಳೆದ ಬೆಳೆ ನೀರುಪಾಲಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ, ಆದರೂ ಕೂಡ ಸರಕಾರ ಇನ್ನೂ ಪರಿಹಾರ ಘೋಷಿಸಿಲ್ಲ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ರಾಜ್ಯದ ರೈತರನ್ನು ಮಳೆ ಮುಳುಗಿಸಿಲ್ಲ, ಅದರ ಬದಲು ಬಿಜೆಪಿ ಸರ್ಕಾರವೇ ಅನ್ಯಾಯವೆಸಗಿ ಮುಳುಗಿಸುತ್ತಿದೆ. ನೆರೆಯಿಂದ ಆದ ಬೆಳೆ ನಷ್ಟವನ್ನು ಇದುವರೆಗೂ ಸರ್ಕಾರ ಸರ್ವೆ ನಡೆಸಿಲ್ಲ, ಪರಿಹಾರವೂ ಘೋಷಿಸಿಲ್ಲ. ಸರ್ಕಾರ ನೆರೆಯಿಂದ ಸಂತ್ರಸ್ತರಾದವರಿಗೆ ಕೈಗೊಂಡ ತುರ್ತು ಪರಿಹಾರ ಕ್ರಮಗಳೇನು ? ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜಕೀಯ ಹೇಳಿಕೆ ನೀಡಬೇಕೆಂದರೆ ಎಲ್ಲೆಲ್ಲೋ ಬಿಲದಲ್ಲಿ ಅಡಗಿದ ಸಚಿವರೆಲ್ಲರೂ ಎದ್ದು ಓಡೋಡಿ ಬರುತ್ತಾರೆ, ನೆರೆ ವಿಚಾರ ಬಂದರೆ ಬಿಲ ಸೇರುತ್ತಾರೆ! ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ನೆರೆ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳು ಏನೆಂದು ಕೇಳಿದರೆ ಮೌನಕ್ಕೆ ಜಾರುತ್ತಾರೆ. ಇದು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯಾಗಿದ್ದು ಇದು ರೈತವಿರೋಧಿ ಬಿಜೆಪಿ ಎಂದು ಟೀಕಿಸಿದೆ.