Monday, June 17, 2024

ಸತ್ಯ | ನ್ಯಾಯ |ಧರ್ಮ

ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ ನಾಲ್ಕು ಹೆಜ್ಜೆ ಹಿಂದಿಡುತ್ತಾಳೆ

ತಲೆಯೊಳಗೆ ಭದ್ರವಾಗಿರಿಸಿಕೊಂಡ ಹಿರಿಯರ ಬುದ್ಧಿವಾದಗಳಿಂದಾಗಿ ತಾನು ಹೊತ್ತ ಎಲ್ಲಾ ಜವಾಬ್ದಾರಿಗಳನ್ನು ಕಳಚಿಟ್ಟು ಹೆಣ್ಣು ತನಗಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳ ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ

ಸ್ತ್ರೀ ಮತ್ತು ಪುರುಷರ ನಡುವಿನ ಅಸಮಾನತೆಯು ಕಳಚಿ ಹೆಣ್ಣು ಜಾತಿಗಂಟಿದ ಕೀಳರಿಮೆ, ಅನ್ಯಾಯಗಳನ್ನು ತೊಡೆದು ಹಾಕುವುದು  ಸಮಾನತೆಯ ಆಶಯ. ಮಹಿಳಾ ಸಮಾನತೆಗಾಗಿ ನಡೆಯುವ  ಹೋರಾಟಗಳು ಇಂದಿಗೂ ಮುಂದುವರಿಯುತ್ತಲೇ ಇವೆ ಎಂದರೆ ಇಲ್ಲಿ ಸಮಸ್ಯೆ ಪರಿಹಾರಗೊಂಡಿಲ್ಲ ಎಂದೇ ಅರ್ಥ. ಮಹಿಳಾ ಸಮಾನತೆಯತ್ತ ಇಟ್ಟ ಹೆಜ್ಜೆಗಳನ್ನು ಹಿಂತಿರುಗಿ ನೋಡಿದರೆ   ಇಂದು  ಸ್ತ್ರೀ  ಭೂತಕಾಲಕ್ಕಿಂತ  ಸ್ವಲ್ಪ  ಸುಧಾರಿತ ಸ್ಥಾನಮಾನವನ್ನು ಹೊಂದಿದ್ದಾಳೆ ಅಂದುಕೊಳ್ಳಬಹುದಷ್ಟೆ. ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ ನಾಲ್ಕು ಹೆಜ್ಜೆ ಹಿಂದಿಟ್ಟಿರುವ  ವಿದ್ಯಮಾನಗಳು ನಮ್ಮ ಎದುರಲ್ಲೇ ಇವೆ.

ಹಾಗೆ ನೋಡಿದರೆ ಹೆಣ್ಣಿನ ತಾಯ್ತನದ ಸಾಮರ್ಥ್ಯ, ಪೋಷಣೆಯ ಕಾರ್ಯ,  ಬಿಡುವಿಲ್ಲದ ಮನೆ ಕೆಲಸ, ಹೊರಗಿನ ದುಡಿಮೆ, ಸಮಾಜದಲ್ಲಿನ ಅವಳ ಕಾರ್ಯವೈಖರಿ ಇತ್ಯಾದಿಗಳನ್ನು ಪರಿಶೀಲಿಸಿದಾಗ  ಹೆಣ್ಣು   ಎಲ್ಲದರಲ್ಲೂ ಸಮರ್ಥಳು ಎನ್ನಲೇಬೇಕು. ಆದರೆ ಎಲ್ಲವನ್ನು ಮಾಡುತ್ತಾಳೆ ಅಂತ ʼಇದೆಲ್ಲವೂʼ ಅವಳಿಗೇ ಮೀಸಲು ಎಂಬ ಭಾವನೆ ಸಮಾಜದಲ್ಲಿ ಹಾಸುಹೊಕ್ಕಿರುವುದು ವಿಪರ್ಯಾಸ.  ಆಕೆಗೆ ಬೇಕಿರುವುದು ಸಮಾನತೆಯಲ್ಲ ಬದಲಿಗೆ ಗಂಡಿಗಿಂತ ಎರಡು ಪಟ್ಟು ಮೇಲಿನ ಸ್ಥಾನ. ತನಗೆ  ಅದು ಬೇಕೆಂದು ಕೇಳುವ ಗುಂಡಿಗೆ ಅವಳಿಗಿದೆ.

ವಿವಾಹದ ವಯಸ್ಸಿಗೆ  ಬರುತ್ತಿದ್ದಂತೇ   ಹೆತ್ತವರ ಜವಾಬ್ದಾರಿ ನಿರ್ವಹಣೆಗೆ  ಸೋತು, ಅವರ ಆಯ್ಕೆಗೆ  ಒಪ್ಪಿಗೆಯ ಸಾಥ್‌ ನೀಡಬೇಕಾಗುತ್ತದೆ. ಗಂಡನ  ಪ್ರೀತಿಗಾಗಿ ತನ್ನೆಲ್ಲ ಕನಸುಗಳಿಗೆ ಪೂರ್ಣ ವಿರಾಮವಿಟ್ಟು ಬಾಳಸಂಗಾತಿಯ ಜೊತೆ ಹೆಜ್ಜೆ ಇಡಲಾರಂಭಿಸ ಬೇಕಾಗುತ್ತದೆ. ಪತ್ನಿ ಎನ್ನುವ ಪದವಿಯನ್ನು ನಿಭಾಯಿಸುವಾಗ ಅವಳು ಭಾವನಾತ್ಮಕವಾಗಿಯೂ, ಅನಿವಾರ್ಯವಾಗಿಯೂ  ಬದುಕಿನಲ್ಲಿ  ಎದುರಾಗುವ ಪ್ರತಿಯೊಂದಕ್ಕೂ  ಶಿರಬಾಗಲೇ ಬೇಕಾಗುತ್ತದೆ.  ಮದುವೆಯ ಆನಂತರ  ಗಂಡನಿಗೆ  ತಕ್ಕ ಹೆಂಡತಿಯಾಗಿ,  ಅತ್ತೆ ಮಾವಂದಿರ ಸೇವೆ, ಬಸಿರು, ಬಾಣಂತನ,  ತಾಯ್ತನ, ಮಕ್ಕಳ ಪೋಷಣೆ, ಕುಟುಂಬ ಸಂಭಾಳಿಸುವಿಕೆ ಹೀಗೇ ಹಲವು ಹಂತಗಳನ್ನು  ಹೆಣ್ಣು ತನ್ನ ಕರ್ತವ್ಯವೆಂದು ಬಗೆದು ತನ್ನನ್ನು ತಾನು ಆ ಜವಾಬ್ದಾರಿಗೆ ಪಳಗಿಸಿಕೊಳ್ಳುತ್ತಾಳೆ. ಇದೆಲ್ಲವನ್ನು ನಿರ್ವಹಿಸುತ್ತಾ ಬದುಕು ಸಾಗುವಾಗ ಅವಳು ಬಾವಿಯೊಳಗಿನ ಕಪ್ಪೆಯಂತೆ ತನ್ನ ಪೂರ್ಣ ಜೀವನವನ್ನು ಅಷ್ಟಕ್ಕೇ ಹೊಂದಿಸಿಕೊಂಡು ಸಂತೃಪ್ತಿಯ ಮುಖವಾಡವನ್ನು ಧರಿಸುತ್ತಾಳೆ. ಆಗಲೇ ಯಜಮಾನಿ ಎನ್ನುವ ಕಿರೀಟವೊಂದು ಶಿರವೇರುತ್ತದೆ. ಅಲ್ಲಿಂದ ಮತ್ತೆ ಸಮಾನತೆಯ  ಆಸೆ ಆಕೆಯ ಮನದಿಂದ ಬತ್ತಿಯೇ ಹೋಗುತ್ತದೆ.

Photo: The Hindu Business Line

ಮದುವೆ ಆಗಿ ಮಕ್ಕಳಾದವೆಂದರೆ  ಅವಳೊಂದು  ರೆಕ್ಕೆ ಕತ್ತರಿಸಲ್ಪಟ್ಟ ಹಕ್ಕಿಯ ತರಹ. ಮತ್ತೆ ಮುಂದೆಂದೂ ಹಾರಲು ಸಾಧ್ಯವಿಲ್ಲವೆಂದು ಅವರೆಲ್ಲರಿಗೂ ಖಚಿತವಾಗಿಬಿಡುತ್ತದೆ.  ಅಂದರೆ ತನ್ನ ಗುರಿ ತಲುಪಲೆಂದು ಈ ಹೊಣೆಗಾರಿಕೆಗಳಿಂದ ಆಕೆ ನುಣುಚಿ ಕೊಳ್ಳಲಾರಳೆಂಬುದು ಅವರಿಗೆ ಖಾತರಿಯಾಗುತ್ತದೆ. ಆಕೆಯೂ ತನಗಾಗುವ  ಶೋಷಣೆಗಳನ್ನು ಸಹಿಸಿ ಕೊಳ್ಳುತ್ತಾ ಇರುವಲ್ಲಿಗೇ ತಾನು ಹೊಂದಿಕೊಳ್ಳುತ್ತಾಳೆ.

ಕಾಲ ಕ್ರಮೇಣ ಕೆಲಸದಲ್ಲೇನಾದರೂ ಹೆಚ್ಚು ಕಡಿಮೆ ಕಂಡರೆ  ಅವರೆಲ್ಲರಿಂದ ಬೈಸಿಕೊಳ್ಳುವುದು, ತನ್ನ ಮೇಲೆರಗುವ ರೇಗಾಟದಂತಹ ಮಾನಸಿಕ ಹಿಂಸೆಗಳೆಲ್ಲವನ್ನು ಸಹಿಸಿಕೊಳ್ಳುತ್ತಾ, ಕೆಲವನ್ನು ಕಂಡೂ ಕಾಣದಂತೆ ಇದೆಲ್ಲವೂ ಹೆಣ್ಣಿಗೆ ಮಾಮೂಲಿಗಳೆಂಬಂತೆ  ಕಣ್ಣುಮುಚ್ಚಿ ತನ್ನನ್ನು ತಾನು ತಣ್ಣಗಿರಿಸಿಕೊಳ್ಳುತ್ತಾಳೆ.  ಹೆಣ್ಣನ್ನು ವೇತನರಹಿತ ಆಳಿನಂತೆ  ನಡೆಸಿಕೊಳ್ಳುವವರೇ ಹೆಚ್ಚು.  ಆದರೂ ಕೂಡ ಇವೆಲ್ಲವುಗಳನ್ನು ಆಕೆ ತನ್ನ ಬದುಕಿನ “ಸಂತೃಪ್ತಿ” ಎಂದುಕೊಳ್ಳುವುದೇ ಅಚ್ಚರಿಯ ಸಂಗತಿ!. ಹೆಣ್ಣು ತನ್ನ ಬದುಕಲ್ಲಿ ಸೋಲುವುದು ಅವಳೊಳಗಿನ ಮಮಕಾರದ ಮುಂದೆ.  ಮಕ್ಕಳ ಭವಿಷ್ಯಕ್ಕಾಗಿ ಎಂತಹ ತ್ಯಾಗಕ್ಕೂ ಆಕೆ ಸಿದ್ಧಳಿರುತ್ತಾಳೆ. ಹುಟ್ಟಿದ ಮನೆಯಿಂದಲೂ, ಮೆಟ್ಟಿದ ಮನೆಯವರಿಂದಲೂ  ಹಿತವಚನ  ಹೇಳಿಸಿ, ಸಾಮಾಜೀಕರಣ ಗೊಳಿಸಿ ಅವಳ  ಮನಸನ್ನು  ಆ ಬದುಕಿಗೆ ಒಗ್ಗಿಸಿ ಬಿಡುತ್ತಾರೆ. ಹೊರಲಾರದಷ್ಟು ಜವಾಬ್ದಾರಿಗಳನ್ನು ಹೊತ್ತು ಬಸವಳಿದ ಹೆಣ್ಣನ್ನು ಅವಳ ದಣಿವು ಮನೆಯೊಳಗೆಯೇ  ಬಂಧಿಸಿ ಬಿಡುತ್ತದೆ.  ಆ ಹೆಣ್ಣು ಮಗಳು ಚಿಕ್ಕ ವಯಸ್ಸಿಗೆ  ಎಲ್ಲ ರೀತಿಯ ಬದುಕಿನ ಸೌಂದರ್ಯವನ್ನು ಕಳೆದುಕೊಳ್ಳುತ್ತಾಳೆ.

ಇದ್ನು ಓದಿದ್ದೀರಾ? ಮನದಿಚ್ಛೆಯಂತೆ ಇದ್ದೆ, ಉಟ್ಟೆ, ತೊಟ್ಟೆ-ನಜ್ಮಾ ಬಾಂಗಿ

ತವರಿನಿಂದ  ಧಾರೆ ಎರೆದು ಕೊಡಬೇಕಾದರೆ ಮಗಳಿಗೆ ಒಂದು ಮಾತು ಹೇಳಿಯೇ ಕಳುಹಿಸುತ್ತಾರೆ. ಮಗಳೇ…ಏನಾದರೊಂದು ಮಾತು ಬರುತ್ತೆ, ಹೋಗುತ್ತೆ …ಆದರೆ ನೀನು ಎಲ್ಲವನ್ನು ಹೊಟ್ಟೆಗೆ ಹಾಕಿಕೊಂಡು ಅವರೊಂದಿಗೆ ಹೊಂದಿಕೊಂಡು ಅಲ್ಲಿ ಬದುಕು ಕಟ್ಟಿಕೊಳ್ಳಬೇಕು  ಅಂತ.  ತಲೆಯೊಳಗೆ ಭದ್ರವಾಗಿರಿಸಿಕೊಂಡ ಈ ಬುದ್ಧಿವಾದಗಳಿಂದಾಗಿ ತಾನು ಹೊತ್ತ ಎಲ್ಲಾ ಜವಾಬ್ದಾರಿಗಳನ್ನು ಕಳಚಿಟ್ಟು ಯಾವತ್ತೂ ಹೆಣ್ಣು ತನಗಾಗಿ ಬದುಕನ್ನು ರೂಪಿಸಿಕೊಳ್ಳುವುದು ವಿರಳ. 

ಸಾರಾಅಲಿ ಪರ್ಲಡ್ಕ

ಬರಹಗಾರ್ತಿ

ಇದನ್ನೂ ಓದಿ- ನಾವೆಲ್ಲರೂ ಮುಟ್ಟಾಗುವ ಹೆಣ್ಣಿನ ಒಡಲ ಉತ್ಪನ್ನಗಳೇ…

Related Articles

ಇತ್ತೀಚಿನ ಸುದ್ದಿಗಳು