Friday, April 26, 2024

ಸತ್ಯ | ನ್ಯಾಯ |ಧರ್ಮ

ಹೊಸ ತಲೆಮಾರಿಗೆ ಅಂಬೇಡ್ಕರ್

`ತುಂಬ ಕಷ್ಟ ಎದುರ್ಸಿದಿನಿ’ ಎಂದು ಉಕ್ಕುಕ್ಕಿ ಬರುವ ಬಿಕ್ಕುಗಳ ನಡುವೆ, ಕಣ್ಣೀರು ಕೆಳಗಿಳಿಯದಂತೆ ಸಾವರಿಸಿಕೊಂಡು ಅವಳು ಹೇಳುತ್ತಿದ್ದರೆ ಆ ಕಣ್ಣುಗಳೆಂಬ ದೊಂದಿಯ ಕಿಚ್ಚು ಧಗಧಗ ಉರಿಯುತ್ತ ಕೇಳುವವರನ್ನು ಸುಡಲಾರಂಭಿಸಿತು. ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಸಮುದಾಯದ ಕಷ್ಟ ನೋವುಗಳೊಂದು ಕಡೆ, ಅದರೊಳಗಿನ ಗಂಡು ಜಗತ್ತು ಕೊಡುತ್ತಿರುವ ದಿನನಿತ್ಯದ ನೋವು ಮಗದೊಂದು ಕಡೆ – ಅಂತೂ ಅವಳ ಮಾತು ಕೇಳುವವರ ಕಣ್ಮನಗಳನ್ನು ತೆರೆಸುವ ಶಕ್ತಿನುಡಿಯಾಗಿಬಿಟ್ಟಿತು – ಡಾ. ಎಚ್. ಎಸ್. ಅನುಪಮಾ

ಬಾಳಿಹೋದ ಮಹಾನ್ ವ್ಯಕ್ತಿತ್ವ, ಚಿಂತನೆಗಳ ಕಡೆಗೆ ಜಾಗತೀಕರಣಗೊಂಡ, ಮಾರ್ಕೆಟೀಕರಣವಾದ ಹೊಸ ತಲೆಮಾರನ್ನು ಸೆಳೆಯುವುದು ಹೇಗೆ ಎನ್ನುವುದು ಇವತ್ತಿನ ಬಹುದೊಡ್ಡ ಸವಾಲಾಗಿದೆ. ನೇರವಾಗಿ ಓದಿ, ಕೇಳಿ, ಚರ್ಚಿಸಿ ಅಭಿಪ್ರಾಯ ಹೊಂದುವುದಕ್ಕಿಂತ ಯಾರೋ ಮಾಡಿದ ದುರುದ್ದೇಶಪೂರಿತ ವಿಮರ್ಶೆ, ತಪ್ಪು ಮಾಹಿತಿಗಳನ್ನು ಪರಿಶೀಲಿಸದೇ ಒಪ್ಪಿ ಉದಾತ್ತವಾದುದನ್ನು ಒಡೆವ ಸತ್ಯಭಂಜಕತನವನ್ನು ತಂತ್ರಜ್ಞಾನಸ್ನೇಹಿ ತಲೆಮಾರಿನಲ್ಲಿ ಬೆಳೆಸಲಾಗುತ್ತಿದೆ. ಕಾಲದ ತುರ್ತುಗಳನ್ನು, ಲೋಕದ ಸಂಕಟಗಳನ್ನು ಯುವಸಮೂಹವು ಗಮನಿಸದಂತೆ ಮಾರುಕಟ್ಟೆ ಬಿತ್ತಿ ಬೆಳೆಸಿದ `ನಾನು-ನನ್ನ’ ಭ್ರಮಾಲೋಕ ಆವರಿಸಿಕೊಂಡಿದೆ. ಎಂದೇ `ಟ್ವೆಂಟಿ ಫಸ್ಟ್ ಸೆಂಚುರಿಯನ್ಸ್’ಗೆ ಬಾಬಾಸಾಹೇಬರನ್ನು ಮಂಡಿಸುವುದು ಕಷ್ಟವಾಗಿದೆ.

ಟ್ವೆಂಟಿ ಫಸ್ಟ್ ಸೆಂಚುರಿಯನ್ಸ್’ಗೆ ಬಾಬಾಸಾಹೇಬರನ್ನು ಮಂಡಿಸುವುದು ಹೇಗೆ?

`ಮೇಲೆʼ ಎಂದುಕೊಂಡ ಜಾತಿಗಳ ಬಹುತೇಕ ಯುವಜನರಿಗೆ ಬಾಬಾಸಾಹೇಬರ ಹೆಸರು ಕೇಳಿದರೆ ಸಾಕು, ತಮ್ಮ ಅವಕಾಶವನ್ನು ಮೀಸಲಾತಿ ರೂಪದಲ್ಲಿ ಕಸಿದುಕೊಂಡ ವ್ಯಕ್ತಿಯೆಂಬ ಸಿಟ್ಟು ಒಳಗೊಳಗೇ ಕುದಿಯುತ್ತದೆ. ಅದಕ್ಕೆ ಕಾರಣ ಅವರ ಮನೆಗಳಲ್ಲಿ ನಡೆಯುವ (ಅ)ರಾಜಕೀಯ ಚರ್ಚೆಗಳು. ಕೈಬೆರಳೆಣಿಕೆಯಷ್ಟು `ಜನರಲ್ ಕೆಟಗರಿ’ಯ ಹೃದಯಗಳಿಗಷ್ಟೇ ಅಂಬೇಡ್ಕರ್ ಬೆಳಕಾಗಿ ಮಾರ್ಗದರ್ಶಿಯಾಗುತ್ತಾರೆ. ಇನ್ನು, ದಲಿತೇತರ `ಮಧ್ಯಮ’ ಜಾತಿಗಳ ಯುವಜನರಿಗೆ ತಾವು ಪಡೆದ ಹಕ್ಕು, ಸೌಲಭ್ಯ, ಸೌಕರ್ಯಗಳನ್ನು ಬಾಬಾಸಾಹೇಬರೇ ಕೊಡಿಸಿದ್ದು ಎಂಬ ಕನಿಷ್ಟ ಜ್ಞಾನವೂ ಇಲ್ಲದ ಅರಿವುಗುರುಡು ಆವರಿಸಿದೆ. ದಲಿತ ಸಮುದಾಯದೊಳಗಿನ ನೂರಾರು ಪರಿಶಿಷ್ಟ ಜಾತಿ, ಬುಡಕಟ್ಟುಗಳಲ್ಲಿ ಕೆಲವರಿಗಷ್ಟೇ ಬಾಬಾಸಾಹೇಬರ ಹೋರಾಟ, ಸಾಧನೆಯ ಅರಿವಿದೆ. ಮಿಕ್ಕವರು ಅಂಬೇಡ್ಕರರ ಚಿಂತನೆಗಳ ಕಿಂಚಿತ್ ಅರಿವಿಲ್ಲದೆ, ಅವರ ಬದ್ಧವಿರೋಧಿ ಪಾಳೆಯದಲ್ಲಿ ಕೈಗೊಂಬೆಗಳಾಗಿ, ಕಾಲಾಳುಗಳಾಗಿ ಮೆರೆಯುತ್ತಿದ್ದಾರೆ. ಇನ್ನು ಬಾಬಾಸಾಹೇಬರ ಕಟ್ಟಾ ಅನುಯಾಯಿಗಳಲ್ಲಿ ಅವರ ಭಾವಚಿತ್ರವನ್ನು ದೇವರ ಮನೆಯಲ್ಲಿಟ್ಟು ಪೂಜಿಸುವ; `ಅವರಿದ್ದರೆಂದೇ ಇವತ್ತು ನಾವಿದ್ದೇವೆ’ಂದು ಆರಾಧಿಸುವ; ಬಾಬಾಸಾಹೇಬರಿಗೇನಾದರೂ ಅಪಚಾರವಾದರೆ ಕೆರಳಿ ಬಿಡುವ ಕೋಟ್ಯಂತರ ಜನರಿದ್ದಾರೆ. ಆದರೆ ಜಾತಿಯಷ್ಟೇ ವರ್ಗ ಅಸ್ಮಿತೆಯೂ ಮುಖ್ಯವಾದದ್ದು. ಮೇಲ್ಚಲನೆ ಪಡೆದ, ನಗರದ ಮಧ್ಯಮ, ಮೇಲ್ಮಧ್ಯಮ ವರ್ಗದ ದಲಿತ ಮಕ್ಕಳಿಗೆ ಹಿಂದಿನ ತಲೆಮಾರು ಎದುರಿಸಿದ ಅಸ್ಪೃಶ್ಯತೆಯ ಅನುಭವವಾಗಲೀ, ಜಾತಿ ತಾರತಮ್ಯ ಹುಟ್ಟಿಸುವ ರೋಷವಾಗಲೀ, ಸಂಘಟಿತರಾಗಿ ಹೋರಾಡಬೇಕೆಂಬ ಸಾಮುದಾಯಿಕ ಪ್ರಜ್ಞೆಯಾಗಲೀ ಕಡಿಮೆಯಾಗಿದೆ. ಸಮತೆಯೆಡೆಗೆ ತುಡಿಯುವ ಅತಿವಿರಳ ಸಂಖ್ಯೆಯ ಯುವಮನಸುಗಳಷ್ಟೇ ತಂತ್ರಜ್ಞಾನದ ಸಕಲ ಸಾಧ್ಯತೆಗಳ ಮೂಲಕ ಉದಾತ್ತ ವಿಚಾರಗಳನ್ನು ಹಂಚುತ್ತಿದ್ದಾರೆ.

ಹೀಗಿರುತ್ತ ಕಾಣುವುದೆಲ್ಲವ ಬಿಟ್ಟು ಕಾಣದುದರೆಡೆಗೆ ತುಡಿಯುವ ಯುವಸಮೂಹದ ಎದೆಗಿಳಿಯುವಂತೆ ಅಂಬೇಡ್ಕರರನ್ನು, ಅವರ ವಿಚಾರಗಳನ್ನು ಮಂಡಿಸುವುದು ಹೇಗೆ? ಈ ಪ್ರಶ್ನೆಗೆ ಯುವಜನರ ಒಡನಾಟವೇ ದಾರಿ ತೋರಿಸಿದ್ದನ್ನಿಲ್ಲಿ ಹಂಚಿಕೊಳ್ಳಬಯಸುವೆ.

`ಪ್ರಜ್ಞಾ ಜಾಗೃತಿ ಶಿಬಿರ’ದಲ್ಲೇನು ನಡೆಯಿತು?

ಕರ್ನಾಟಕದ ವಿವಿಧ ಜಿಲ್ಲೆ, ಜಾತಿ, ವರ್ಗ, ಧರ್ಮಕ್ಕೆ ಸೇರಿದ 25-30 ಯುವಮನಸ್ಸುಗಳನ್ನು ಎರಡು ದಿನದ ಮಟ್ಟಿಗೆ `ಪ್ರಜ್ಞಾ ಜಾಗೃತಿ ಶಿಬಿರ’ಕ್ಕಾಗಿ ಪ್ರತಿ ತಿಂಗಳೂ ನಮ್ಮೂರಿಗೆ ಕರೆಯುತ್ತೇವೆ. ಅಪರಿಚಿತರಾಗಿ ಬಂದು ಮಿತ್ರ, ಮಿತ್ರೆಯರಾಗಿ ಹಿಂದಿರುಗುವ ಪ್ರಕ್ರಿಯೆ ಅಚ್ಚರಿ, ಭರವಸೆಗಳನ್ನು ಹೊತ್ತು ತರುತ್ತಿದೆ. ಏಪ್ರಿಲ್ ತಿಂಗಳ ಶಿಬಿರಾರ್ಥಿಗಳಿಗೆ `ನಾನು ಹುಟ್ಟಿದ ಜಾತಿ: ಒಂದು ಅನುಭವ’ ಎಂಬ ವಿಷಯದ ಬಗೆಗೆ ತಮ್ಮ ಹೆಸರು ನಮೂದಿಸದೇ ಬರೆಯಬೇಕೆಂದು ಹೇಳಲಾಗಿತ್ತು. 27 ಮಿತ್ರೆಯರ ಬರಹಗಳನ್ನು ಅವಲೋಕನದ ವೇಳೆ ಓದತೊಡಗಿದೆ. `ಎಲ್ರೂ ಸಮಾನ ಅಂದ್ರೆ ರಿಸರ್ವೇಶನ್ ತಪ್ಪಲ್ವಾ?’, `ಎಲ್ಲ ಜಾತೀಲೂ ಬಡವ್ರು, ಕಷ್ಟ ಪಡೋರಿದಾರೆ, ನಮಿಗಷ್ಟೇ ಕೊಡದು ಸರಿಯಲ್ಲ’, `ಅಟ್ರಾಸಿಟಿ ಅನ್ನುವುದನ್ನು ಪೇಪರಲ್ಲಿ ಓದಿಯಷ್ಟೇ ಗೊತ್ತು, ಬಟ್ ನಂಗೆ ಅನುಭವ ಆಗಿಲ್ಲ, ಫ್ರೆಂಡ್ಸ್ ತುಂಬ ಚೆನಾಗಿ ನೋಡ್ಕೊಂತಾರೆ’; `ಎಸ್ಸಿಎಸ್ಟಿಗೆ ರಿಸರ್ವೇಶನ್ ಕೊಟ್ ಕೊಟ್ಟು ನಮ್ಗೆ ಕೆಲ್ಸಾನೇ ಇಲ್ದಂಗಾಗಿದೆ, ಈ ಅನ್ಯಾಯ ಸರಿ ಮಾಡ್ಬೇಕು’; `ಜಾತಿಕಾಲಂ ಕೇಳಿಕೇಳಿ ಜಾತೀಯತೆ ಬೆಳೆಸ್ತಾರೆ. ಮೊದ್ಲು ಆ ಕಾಲಂ ತೆಗಿಬೇಕು’; `ಎಸ್ಸಿ ಆದ್ರೂ ನಂ ಜಾತಿ ಬಗ್ಗೆ ತುಂಬ ಹೆಮ್ಮೆ ಇದೆ. ನನ್ ಫ್ರೆಂಡ್ಸ್ ಎಲ್ಲ ಅಯ್ಯೋ ಗೊತ್ತೇ ಆಗಲ್ಲ ನೀ ಎಸ್ಸಿ ಅಂತ ಅಂತಾರೆ. ನಾವು ಹಾಗೆ ಇದೀವಿ’ ಮುಂತಾಗಿ ಸ್ವಾನುಭವವಷ್ಟೇ ಸತ್ಯ ಎಂದು ನಂಬಿದವರ ಬರಹಗಳು ಒಂದಾದಮೇಲೊಂದು ಕೈಗೆ ಬಂದವು. ಅವನ್ನೆಲ್ಲ ಓದುತ್ತ ಯಾವ ದಿಕ್ಕಿನಿಂದ ಇವರನ್ನು ಬಾಬಾಸಾಹೇಬರ ಬಳಿಗೊಯ್ಯಲಿ ಎಂದು ಯೋಚಿಸತೊಡಗಿದೆ.

ಆ ಹೊತ್ತಿಗೊಂದು ಬರಹದ ಪುಟ ಕೈಗೆ ಬಂದಿತು. ಮುಚ್ಚಿಕೊಂಡ ಎದೆ ಬಾಗಿಲುಗಳೆಲ್ಲ ಹಾರು ಹೊಡೆದು ಒಂದರೊಳಗೊಂದಾಗುವಂತೆ ಮಾಡಿಬಿಟ್ಟಿತು.

ದಿಕ್ಕು ತೋರಿದ ಅವಳ ಬರಹ..

ಅದು 5ನೆಯ ತರಗತಿಗೆ ಶಾಲೆ ಬಿಡಬೇಕಾಗಿ ಬಂದ `ಸುಡುಗಾಡು ಸಿದ್ಧ’ರ ಹುಡುಗಿಯು ತನಗೆ ಬರೆಯಲು ಬಾರದೆಂದು ಹೊಸ ಗೆಳತಿಗೆ ಹೇಳಿ ಬರೆಸಿದ ಬರಹ. ಚರಂಡಿಗಳ ಮೇಲೆ, ಪೈಪುಗಳ ಒಳಗೆ, ರೈಲ್ವೇ ಟ್ರ್ಯಾಕುಗಳ ಪಕ್ಕ ಟೆಂಟುಗಳಲ್ಲಿ ಅವಳ ಕುಲವು ಬದುಕು ನಡೆಸಿತ್ತು. ಅವಳವ್ವ ನಾಲ್ಕನೆಯ ಹೆರಿಗೆಯ ವೇಳೆ ಅತೀವ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿರುವಾಗ ಅವಳಿನ್ನೂ ಐದನೆಯ ತರಗತಿಯಲ್ಲಿದ್ದಳು. ಗುಡ್ಡೆ ಬೀಳುತ್ತಿದ್ದ ತಾಯಿಯ ರಕ್ತಸಿಕ್ತ ಬಟ್ಟೆಗಳನ್ನು ತೊಳೆತೊಳೆದು, ಆಸ್ಪತ್ರೆಗೂ ಮನೆಗೂ ಅಲೆದಲೆದು, ಭಿಕ್ಷೆಯೆತ್ತಿ ತಂಗಿತಮ್ಮಂದಿರ ಹೊಟ್ಟೆ ಹೊರೆಯಬೇಕಾದ ಜವಾಬ್ದಾರಿಯಲ್ಲಿ ಅವಳ `ಸಾಲಿ’ ಕರಗಿ ಹೋಗಿತ್ತು. ಅದಾಗಿ ಹನ್ನೆರೆಡು ವರ್ಷಗಳೇ ಸಂದಿವೆ. ಬರೆಯುವುದು ಮರೆತು ಹೋಗಿದೆ. ಉಳಿದವರೆಲ್ಲ ಸರಸರ ಬರೆಯುತ್ತಿರಬೇಕಾದರೆ ತನಗೆ ಬರೆಯಲಾಗದ ಬಗೆಗೆ ಅವಳಿಗೆ ತುಂಬ ಬೇಸರವಿದೆ. ಮಕ್ಕಳನ್ನು ಶಾಲೆಗೇ ಕಳಿಸದ ತನ್ನವರ ಬಗ್ಗೆ ಸಿಟ್ಟಿದೆ. `ಯಾರನ್ನಾ ಬಿಳಿಬಟ್ಟೆ ಹಾಕ್ಕಂಡ್ ಬಂದ್ರೆ ಸಾಕು, ಕೈಕಟ್ಟಿ ನಿಂತುಬಿಡತರೆ ನಮ್ಜನ. ಕೆಲ್ಸಾ ಕೊಡ್ಸಿ, ಮನೆ ಕೊಡ್ಸಿ ಅಂತ ಅವುರ್ನ ಕೇಳನ; ದುಡ್ಡಿಸ್ಕ್ಯಬೇಡ್ರಿ ಅಂದ್ರೂ ತಿಳೆಂಗಿಲ್ಲ ಅವುರ್ಕೆ’ ಎಂಬ ಕೋಪವಿದೆ. ಜೊತೆಜೊತೆಗೆ ಭಿಕ್ಷಾಟನೆಯಿಲ್ಲದೆ ಬದುಕಬಹುದೆಂದು ತನ್ನ ಜನರಿಗೆ ತೋರಿಸಿಕೊಡುತ್ತೇನೆಂಬ ಛಲವೂ ಆ ಬರಹದಲ್ಲಿದೆ.

ಹುಟ್ಟಿದ ಜಾತಿಯಲ್ಲಿ ಅವಳಿಗಾಗುತ್ತಿರುವ ಅನುಭವ ಓದುತ್ತ ಹೋದಂತೆ ನಮ್ಮ ಎದೆಬಡಿತ ನಮಗೇ ಕೇಳುವಷ್ಟು ನಿಶ್ಶಬ್ದ ಆವರಿಸಿತು. ಸಮಾನತೆ, ಮೀಸಲಾತಿ, ಜಾತಿ ಕಾಲಂ, ಜಾತಿ ಹೆಮ್ಮೆ ಮುಂತಾದ ಪದಗಳು ನಾಚಿ ತಲೆತಗ್ಗಿಸಿ ಹಾರಿಹೋದವು. ಅನಾಮಿಕರಾಗಿ ಬರೆಯಬೇಕೆಂದು ಹೇಳಿದ್ದೆವು. ಆದರೂ ಈ ಬರಹ ಬರೆದವರಾರೆಂದು ತಿಳಿವ ಹಂಬಲ ಎಲ್ಲರಲ್ಲಿ ವ್ಯಕ್ತವಾಯಿತು. ಅಂತಹ ಒಂದೆರೆಡು ಅಭಿಪ್ರಾಯ ಕೇಳಿದ್ದೇ ಥಟ್ಟನೆ ಅವಳು ಎದ್ದು ನಿಂತಳು. ತಾನು `ತುಂಬ ಕಷ್ಟ ಎದುರ್ಸಿದಿನಿ’ ಎಂದು ಉಕ್ಕುಕ್ಕಿ ಬರುವ ಬಿಕ್ಕುಗಳ ನಡುವೆ, ಕಣ್ಣೀರು ಕೆಳಗಿಳಿಯದಂತೆ ಸಾವರಿಸಿಕೊಂಡು ಅವಳು ಹೇಳುತ್ತಿದ್ದರೆ ಆ ಕಣ್ಣುಗಳೆಂಬ ದೊಂದಿಯ ಕಿಚ್ಚು ಧಗಧಗ ಉರಿಯುತ್ತ ಕೇಳುವವರನ್ನು ಸುಡಲಾರಂಭಿಸಿತು. ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಸಮುದಾಯದ ಕಷ್ಟ ನೋವುಗಳೊಂದುಕಡೆ, ಅದರೊಳಗಿನ ಗಂಡು ಜಗತ್ತು ಕುಡಿತ-ಹೊಡೆತ-ದೌರ್ಜನ್ಯ-ತಾರತಮ್ಯಗಳ ಮೂಲಕ ಕೊಡುತ್ತಿರುವ ದಿನನಿತ್ಯದ ನೋವು ಮಗದೊಂದು ಕಡೆ – ಅಂತೂ ಅವಳ ಮಾತು ಕೇಳುವವರ ಕಣ್ಮನಗಳನ್ನು ತೆರೆಸುವ ಶಕ್ತಿನುಡಿಯಾಗಿಬಿಟ್ಟಿತು.

ಅದಾದ ಬಳಿಕ ಓದಿದ ಮಿಕ್ಕವರ ಬರಹಗಳೂ ನ್ಯಾಯದ ದೊಂದಿಯನ್ನು ಉರಿಸುತ್ತ ಹೋದವು. ಇವತ್ತಿಗೂ ತಮ್ಮೂರ ಚಾನೆಲ್ಲಿನ ಮೇಲ್ಭಾಗದಲ್ಲಿ ಮೇಲ್ಜಾತಿಯವರಷ್ಟೇ ಬಟ್ಟೆ ತೊಳೆಯಬೇಕು, ತಳಸಮುದಾಯವರು ಕೆಳಗೇ ತೊಳೆಯಬೇಕೆಂಬ ಅಲಿಖಿತ ನಿಯಮವಿರುವುದು; ಬಾಯಾರಿ ಪಕ್ಕದ ಹೊಲದ ಬಾನಿಯ ನೀರು ಕುಡಿದಿದ್ದಕ್ಕೆ ಇಡೀ ಬಾನಿಯ ನೀರನ್ನು ಮುಖಕ್ಕೆ ಎರಚಿಸಿಕೊಂಡು ಮಾದಿಗರ ಹುಡುಗಿ ಅವಮಾನ ಅನುಭವಿಸಿದ್ದು; ಲಿಂಗಾಯತ ತಂದೆ-ಮಾದಿಗ ತಾಯಿಯ ಮಗಳಾದ ದೇವದಾಸಿ ಕುಟುಂಬದ ಹುಡುಗಿ ಅಪ್ಪನ ಜಾತಿಯವರಿಂದ ಎದುರಿಸಿದ ದೂಷಣೆಗಳು; ಕುಡುಕ ತಂದೆಯ ಗಲಾಟೆಯ ನಡುವೆಯೂ ಚಿಮಣಿ ಬುಡ್ಡಿ ಬೆಳಕಲ್ಲಿ ಕಷ್ಟಪಟ್ಟು ಓದಿ 93% ಅಂಕ ಗಳಿಸಿದ ಹುಡುಗಿ ಮುಂದೆ ಓದಲಾಗದ ಪರಿಸ್ಥಿತಿಯಲ್ಲಿರುವುದು; ಶಿಕ್ಷಕಿಯಾಗುವಷ್ಟು ಓದಿದ `ಗಂಡಬಿಟ್ಟ’ ತಾಯಿ ಮಗಳಿಗೆ ಫೀಸು ಹೊಂದಿಸಲಾಗದೇ ಹೊಲದ ಕೂಲಿಗೆ ಹೋಗುತ್ತಿರುವುದು; `ಕೆಟ್ಟು ಹೋದವಳು’ ಎಂಬ ಪಟ್ಟಕಟ್ಟಿದ ತನ್ನ ಅಲೆಮಾರಿ ಸಮುದಾಯವು ಜಾತಿ ಪಂಚಾಯ್ತಿಗೆ ಲಕ್ಷ ರೂಪಾಯಿ ದಂಡ ಕಟ್ಟಬೇಕೆಂಬ ದುಸ್ಸಾಧ್ಯ ಶಿಕ್ಷೆ ವಿಧಿಸಿರುವುದೇ ಮೊದಲಾದ ಜಾತಿಗ್ರಸ್ತ ಭಾರತದ ಅವಮಾನಿತರ ಚಿತ್ರಣಗಳು ಅರ್ಧಕ್ಕರ್ಧದಷ್ಟಿದ್ದ ಮೇಲ್ವರ್ಗ-ಮೇಲ್ಜಾತಿಯ ಮನಸುಗಳನ್ನು ಬೆಣ್ಣೆಯಂತೆ ಕರಗಿಸಿ ವಾಸ್ತವವನ್ನು ತಿಳಿಸಿಕೊಟ್ಟವು. ಇದುವರೆಗೆ ಮೀಸಲಾತಿ-ಜಾತಿಪದ್ಧತಿ-ಎಸ್ಸಿಎಸ್ಟಿ ಬಗೆಗೆ ಇಟ್ಟುಕೊಂಡ ಪೂರ್ವಗ್ರಹಗಳೆಲ್ಲ ತರಗೆಲೆಯಂತೆ ಹಾರಿಹೋದದ್ದು ನಂತರದ ಮಾತು-ಪ್ರತಿಕ್ರಿಯೆಯಲ್ಲಿ ತಿಳಿದುಬಂತು.

ಅಸ್ಪೃಶ್ಯತೆ, ಹೊರಗಿಡುವಿಕೆಯ ಅವಮಾನ, ಬೇಗೆಗಳನ್ನು ಮೈತ್ರಿ, ಸ್ನೇಹಗಳು ತಂಪಾಗಿಸಿದ ಮೇಲೆ ಬಾಬಾಸಾಹೇಬರ ಸಮತೆಯ ಬೀಜಗಳನ್ನು ಬಿತ್ತುವುದು ಸುಲಭವಾಯಿತು. ಹುಸಿಯ ತೆರೆ ಹರಿಯಲು ಸತ್ಯದೊಡನೆ ಸಖ್ಯವೊಂದೇ ದಾರಿ ಎಂಬ ಹೊಸ ಪಾಠವಾಯಿತು.

ಬಾಬಾಸಾಹೇಬರು ಅರಿವಿಗೆ ದಕ್ಕಲು ಹೀಗೆಲ್ಲ ಮಾಡಬೇಕು…

ಹೌದು. ಒಯ್ಯಬೇಕು ಯುವಮನಸುಗಳನ್ನು ವಾಸ್ತವದೆಡೆಗೆ. ತೋರಿಸಬೇಕು ನೋಡಲೇಬೇಕಾದದ್ದನ್ನು ಅವರಿಗೆ. ಅವರ  ನಾಡಿಮಿಡಿತ ಹಿಡಿದು, ಕಾಸಿ, ಹದ ನೋಡಿ ಬಡಿಯಬೇಕು. ಕಣ್ಣುಗಳ ತೆರೆಸಿ ಬಾಬಾಸಾಹೇಬರೆಂಬ ನ್ಯಾಯದ ಕನ್ನಡಿಯೆದುರು ನಿಲ್ಲಿಸಬೇಕು. ಸಮಾಜದ ಸ್ವರೂಪ, ವಿರೂಪಗಳನ್ನು ಅವರ ಕಣ್ಣೆದುರು ಅನಾವರಣಗೊಳಿಸಿದರೆ ಬಾಬಾಸಾಹೇಬರು ಅರಿವಿಗೆ ದಕ್ಕುತ್ತಾರೆ. ಹೀಗಾದಾಗಲಷ್ಟೇ ಅಂಬೇಡ್ಕರ್, ಗಾಂಧಿ, ಬುದ್ಧ, ಬಸವಣ್ಣ, ಅಕ್ಕ, ಪೆರಿಯಾರ್, ಫುಲೆಗಳನ್ನು ಹೊಸ ತಲೆಮಾರು ತನ್ನ ಕುಲನೆಲೆಗಳಾಚೆ ಎದುರುಗೊಂಡು ಎದೆಗಿಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದಲ್ಲ ನಾಳೆ ಮೈತ್ರಿ, ಕರುಣೆ, ಸಮತೆಯ ಸಮಾಜ ನೆಲೆಯಾಗುತ್ತದೆ.

ಡಾ. ಎಚ್. ಎಸ್. ಅನುಪಮಾ

ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯರಾಗಿರುವ ಇವರು ವಿಚಾರವಾದಿ, ಚಿಂತಕಿ, ವಾಗ್ಮಿ, ದಲಿತ-ಮಹಿಳಾಪರ ಆಂದೋಲನಗಳ  ಕಾರ್ಯಕರ್ತೆ, ಸಂಘಟಕಿ, ಕವಿ, ಪ್ರಕಾಶಕಿ ಹೀಗೆ ಜನಪರ ಕಾಳಜಿಗಳನ್ನೇ ಉಸಿರಾಡುತ್ತಿರುವವರು.  

ಇದನ್ನೂ ಓದಿ-ದಲಿತ ಸರಣಿ ಹತ್ಯೆ, ತುಟಿ ಬಿಚ್ಚದ ಹಿಂದೂ ಸಂಘಟನೆಗಳು

Related Articles

ಇತ್ತೀಚಿನ ಸುದ್ದಿಗಳು