Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಗೆದ್ದರೆ ಆರ್‌ ಎಸ್‌ ಎಸ್‌ ತೆಕ್ಕೆಗೆ ಕರ್ನಾಟಕ

ಕರ್ನಾಟಕವನ್ನು ಸಂಘ ಪರಿವಾರದ ತೆಕ್ಕೆಗೆ ಒಪ್ಪಿಸಿದರೆ ಕರ್ನಾಟಕ ನಾಶವಾಗುತ್ತದೆ. ಕರ್ನಾಟಕವು  ವೈವಿಧ್ಯಮಯ ಧರ್ಮ ಹಾಗೂ ಮತಗಳ ಆಗರವಾಗಿ ಎಲ್ಲದರ ನಡುವೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಇದುವರೆಗೆ ಬೆಳೆದು ಬಂದಿದೆ. ನಾವೆಲ್ಲರೂ ಮಾಡಬೇಕಾದ್ದು ಬಿಜೆಪಿಯನ್ನು ಸೋಲಿಸುವುದು ಮತ್ತು ಆರ್‌ ಎಸ್‌ ಎಸ್‌ ನ ವೇಗಕ್ಕೆ ಕಡಿವಾಣ ಹಾಕುವುದು. ಜೊತೆಗೆ ಅದರ ಸೈದ್ಧಾಂತಿಕ ನೆಲೆಗಳ ಬಗ್ಗೆ ಎಚ್ಚರ ಮೂಡಿಸುವುದು – ಪುರುಷೋತ್ತಮ ಬಿಳಿಮಲೆ

ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಗೆದ್ದರೆ ಅದನ್ನು ರಾಜಕೀಯವಾಗಿಯೇ ಇದಿರಿಸಬಹುದು. ಆದರೆ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ರಾಜಕೀಯ ಪಕ್ಷವಲ್ಲ. ಅದು ಚುನಾವಣೆಗೆ ನೇರವಾಗಿ ಸ್ಪರ್ಧಿಸುವುದಿಲ್ಲ. ಬದಲು ಹಿಂಬಾಗಿಲಿನಿಂದ ಚುನಾವಣೆಗಳನ್ನು ನಿಯಂತ್ರಿಸುತ್ತದೆ. ಬಿಜೆಪಿ ಸೋತರೆ ಅದು ವಿಚಲಿತಗೊಳ್ಳದೆ ಇನ್ನಷ್ಟು ತೀವ್ರವಾಗಿ ತನ್ನ ಕಾರ್ಯಸೂಚಿಗಳನ್ನು ಅನುಷ್ಠಾನಕ್ಕೆ ತರಲು ಕೆಲಸ ಮಾಡುತ್ತದೆ. ಹೀಗಾಗಿ ಚುನಾವಣೆಯ ಸೋಲು ಗೆಲುವುಗಳ ಮೇಲೆ  ಆರ್‌ ಎಸ್‌ ಎಸ್‌ ನ ಸೋಲು ಗೆಲುವುಗಳು ನಿರ್ಧಾರ ಆಗುವುದಿಲ್ಲ. ಆದರೆ ಬಿಜೆಪಿ ಗೆದ್ದರೆ ಅದರ ವೇಗ ಇನ್ನಷ್ಟು ಹೆಚ್ಚಾಗುತ್ತದೆ. ಮೇಲಾಗಿ ದಕ್ಷಿಣ ಭಾರತದಲ್ಲಿ ಕೆಲಸ ಮಾಡಲು ಅದಕ್ಕೆ ಕರ್ನಾಟಕ ಬೇಕು. ಅದಕ್ಕಾಗಿ ಅದು ಶಕ್ತಿಮೀರಿ ಕೆಲಸ ಮಾಡುತ್ತದೆ.  ಕಾರಣ ನಾವೆಲ್ಲರೂ ಮಾಡಬೇಕಾದ್ದು ಬಿಜೆಪಿಯನ್ನು ಸೋಲಿಸುವುದು ಮತ್ತು ಆರ್‌ ಎಸ್‌ ಎಸ್‌ ನ ವೇಗಕ್ಕೆ ಕಡಿವಾಣ ಹಾಕುವುದು. ಜೊತೆಗೆ ಅದರ ಸೈದ್ಧಾಂತಿಕ ನೆಲೆಗಳ ಬಗ್ಗೆ ಎಚ್ಚರ ಮೂಡಿಸುವುದು.

ಆರ್‌ ಎಸ್‌ ಎಸ್‌ ನ ಅಪಾಯಗಳು

ಸಮಾಜವು ಮುಂದಕ್ಕೆ ಚಲಿಸುತ್ತಿದ್ದಂತೆ ಜನರನ್ನು ಹಿಂದಕ್ಕೆ ಕೊಂಡೊಯ್ಯುವ  ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಲೇ ಬರುತ್ತಿದೆ. ನಾವ್ಯಾರೂ ಬದುಕಿರದ ಒಂದು ಕಾಲದ ಬಗ್ಗೆ ಅದಕ್ಕೆ ಅದಮ್ಯ ವ್ಯಾಮೋಹ. ಸುಳ್ಳು ಇತಿಹಾಸ ಮತ್ತು ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆಗಳು, ಸರ್ವಾಧಿಕಾರ, ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಮತಾಂಧತೆ, ಮಾಧ್ಯಮಗಳ ಅಟ್ಟಹಾಸ, ಮೂಢ ನಂಬಿಕೆ ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತಿದೆ. ಯಾರಾದರೂ ಗೊತ್ತಿದ್ದವರು ಮಾತಾಡಿದರೆ ಅದು ತನ್ನ ಅಸಹನೆಯನ್ನು ಪ್ರಕಟ ಪಡಿಸುತ್ತದೆ, ದ್ವೇಷಿಸುತ್ತದೆ ಮಾತ್ರವಲ್ಲ ಅಂತ ಧ್ವನಿಗಳನ್ನು ಮಟ್ಟ ಹಾಕಲೂ ಪ್ರಯತ್ನಿಸುತ್ತದೆ. ಹಿಂದುತ್ವವನ್ನು ಪ್ರಚುರ ಪಡಿಸುವ ತನ್ನ ಕೆಲಸಗಳನ್ನು ಹೊರತು ಪಡಿಸಿ, ಉಳಿದ ಯಾವುದೇ ಸಾಮಾಜಿಕ ಆಂದೋಲನಗಳನ್ನೂ ಅದು ಒಪ್ಪುವುದಿಲ್ಲ.

ದೇಶಪ್ರೇಮವೆಂಬ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು 1925ರಿಂದ ತನ್ನ ಸಂಘಟನಾ ಬಲವನ್ನು ಹೆಚ್ಚಿಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅನೇಕ ಉಪ ಸಂಸ್ಥೆಗಳನ್ನು ಕೂಡಾ ಕಟ್ಟಿ ಬೆಳೆಸಿಕೊಂಡಿದೆ.  ಆದರೆ ಸಂಘ ಪರಿವಾರಕ್ಕೆ ಸಾರ್ವಜನಿಕರ ಜೊತೆಗೆ ಸಂವಾದ ಎಂಬುದಿಲ್ಲ. ಜಾತಿ, ಕೋಮು, ಮಹಿಳೆ, ಭಾಷೆ, ರಾಷ್ಟ್ರೀಯತೆ ಮೊದಲಾದ ವಿಷಯಗಳ ಕುರಿತು ಅದು ತನ್ನ ಸದಸ್ಯರ ತಿಳಿವಳಿಕೆಗಳನ್ನು ಹೆಚ್ಚಿಸುವುದಿಲ್ಲ. ಅದು ತನ್ನದೇ ಆದ ಕೆಲವು ನಿಗದಿತ ಕ್ರಿಯಾ ಯೋಜನೆಗಳೊಂದಿಗೆ ಮುಂದುವರಿಯುತ್ತದೆ.  ತೋರಿಕೆಗೆ ಇದು ‘ರಾಜಕೀಯೇತರವಾದ ಸಂಘ’.

ದೇಶಪ್ರೇಮದ ಗುತ್ತಿಗೆ ಹಿಡಿದಂತೆ ಮಾತಾಡುವವರು…..

ರಾಷ್ಟ್ರಪ್ರೇಮ ಎಂಬ ಭಾವನಾತ್ಮಕ ವಿಷಯಕ್ಕೆ ‘ಹಿಂದೂ’ ಎಂಬ ಕಲ್ಪಿತ ಪರಿಕಲ್ಪನೆಯನ್ನೂ ಜೋಡಿಸಿ ಬೆಳೆದ ಆರ್‌ ಎಸ್‌ ಎಸ್‌ ಈಗ  ಬಂಡವಾಳಶಾಹಿಗಳೊಂದಿಗೆ ಕೈ ಜೋಡಿಸಿಕೊಂಡಿದೆ. ದೇಶಪ್ರೇಮದ ಗುತ್ತಿಗೆ ಹಿಡಿದಂತೆ ಮಾತಾಡುವ ಅದು ದೇಶದಲ್ಲಿ ವಾಸಿಸುವ  ಎಲ್ಲರನ್ನೂ ಸಮಾನವಾಗಿ ಕಾಣಲು ಹಿಂದೇಟು ಹಾಕುತ್ತದೆ. ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಅದು ‘ಹೊರಗಿನವರು’ ಎಂದು ಭಾವಿಸುತ್ತದೆ. ‘ಹಿಂದೂಗಳೆಲ್ಲರೂ ಒಂದು’ ಎಂಬ ಘೋಷಣೆ ಕೂಗಿದರೂ ಹಿಂದೂಗಳ ಒಳಗಿನ ಜಾತಿಗಳ ಶ್ರೇಣೀಕರಣವನ್ನು   ತೊಡೆದು ಹಾಕಲು ಅದು ಯಾವ ಕಾರ್ಯಕ್ರಮಗಳನ್ನೂ ರೂಪಿಸುವುದಿಲ್ಲ. ಬ್ರಾಹ್ಮಣ್ಯದ ಪರಮಾಧಿಕಾರವನ್ನು ಅದು ಎಂದೂ ಪ್ರಶ್ನಿಸಿಲ್ಲ. ಎಲ್ಲ ಭಾರತೀಯರನ್ನೂ ಸಮಾನವಾಗಿ ನೋಡಲು ಕರೆಕೊಡುವ ಸಂವಿಧಾನವನ್ನು ಕೂಡಾ ಸಂಘ ಪರಿವಾರವು ಮನ:ಪೂರ್ತಿಯಾಗಿ ಒಪ್ಪಿಕೊಂಡೇ ಇಲ್ಲ. ಮಹಿಳೆಯರಿಗೆ ಸಂಘಕ್ಕೆ ಪ್ರವೇಶ ಇಲ್ಲ, ಮೀಸಲಾತಿ ಬಗ್ಗೆ ಆಗಾಗ ಅದು ತನ್ನ ಅಸಹನೆಯನ್ನು ಪ್ರಕಟಿಸುತ್ತಲೇ ಬಂದಿದೆ.  ವಿಜ್ಞಾನದ ಬಗೆಗೆ ಆರ್ ಎಸ್ ಎಸ್ ಏನು ಹೇಳುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಆಧುನಿಕ ತಂತ್ರ ಜ್ಞಾನದ ಎಲ್ಲ ಪ್ರಯೋಜನಗಳನ್ನೂ ಪಡೆದುಕೊಳ್ಳುವ ಅದು ಇದೆಲ್ಲವೂ ಪ್ರಾಚೀನ ಭಾರತದಲ್ಲಿ ಇತ್ತು ಎಂದು ಜನರಿಗೆ ಹೇಳುತ್ತದೆ.

ಆರ್‌ ಎಸ್‌ ಎಸ್‌ ಬಗ್ಗೆ ಮಾತಾಡಲು ಭಯ

ಸಂಘದ ಕಾರ್ಯಸೂಚಿಗಳು ಬಹಿರಂಗ ಚರ್ಚೆಗೆ ಬರುವುದೇ ಇಲ್ಲ. ಹೀಗಾಗಿ ಅನೇಕರು ಆರ್‌ ಎಸ್‌ ಎಸ್‌ ಬಗ್ಗೆ ಮಾತಾಡಲು, ಬರೆಯಲು ಹೆದರುತ್ತಾರೆ. ಆ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ?, ಅದು ವಿದೇಶೀ ದೇಣಿಗೆ ಸ್ವೀಕರಿಸುತ್ತಿದೆಯೇ? ಪ್ರತಿ ವರ್ಷ ಅದರ ಲೆಕ್ಕ ಪರಿಶೋಧನೆ ನಡೆಯುತ್ತಿದೆಯೇ? ಅದರ ವಾರ್ಷಿಕ ಆರ್ಥಿಕ ವಹಿವಾಟು ಎಷ್ಟು? ಶತಮಾನ ಆಚರಣೆಗೆ ಸಿದ್ಧವಾಗುತ್ತಿರುವ ಸಂಘದಲ್ಲಿ ಒಮ್ಮೆಯೂ ಆರ್ಥಿಕ ಅವ್ಯವಹಾರ ನಡೆದೇ ಇಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಅತೀತವಾಗಿಯೇ ಸಂಘ ಬೆಳೆದಿದೆ. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಅನೇಕ ಸರಕಾರೇತರ ಸಂಘ ಸಂಸ್ಥೆಗಳ ಮೇಲೆ ಕಣ್ಣಿಡಲಾಯಿತು. ಇದರಿಂದಲೂ ಆರ್‌ ಎಸ್‌ ಎಸ್‌ ಪಾರಾಯಿತು. ಸಾಮಾನ್ಯವಾಗಿ ಎಲ್ಲದರ ಬಗ್ಗೆಯೂ ಮಾತಾಡುವ ಭಾರತೀಯರು ಸಂಘದ ಬಗ್ಗೆ ಬಹಿರಂಗವಾಗಿ ಮಾತಾಡುವುದಿಲ್ಲ. ಒಂದು ವೇಳೆ ಮಾತಾಡಿದರೂ ಸ್ವರ ತಗ್ಗಿಸಿ ಹೆದರಿಕೊಂಡು ಮಾತಾಡುತ್ತಾರೆ. ಇಂತ ಭಯ ಹುಟ್ಟಿಸುವ ವಾತಾವರಣವನ್ನು ಅದು ಹುಟ್ಟು ಹಾಕಿದ್ದಂತೂ ನಿಜ.

ಆರ್‌ ಎಸ್‌ ಎಸ್‌ ನ ಏಕ ಪಕ್ಷೀಯ ಧೋರಣೆಗಳು

ಆರ್‌ ಎಸ್‌ ಎಸ್‌ ನ ಧೋರಣೆಗಳು ಏಕ ಪಕ್ಷೀಯವಾದುವು. ರಾಮ ಜನ್ಮ ಭೂಮಿಗೆ ಆಂದೋಲನ ನಡೆಸಬಹುದು, ಆದರೆ ರೈತರು ಆಂದೋಲನ ನಡೆಸಬಾರದು ಎಂಬ ಸರ್ವಾಧಿಕಾರೀ ಧೋರಣೆಯ ಅದರದು. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಅಂಥ ವಿಶ್ವಾಸವಿಲ್ಲವೆಂಬುದನ್ನು ಅದುವೇ ಬೇರೆ ಬೇರೆ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತಾ ಬಂದಿದೆ. ಸಂಘ ಪರಿವಾರದಲ್ಲಿ ತರಬೇತು ಪಡೆದು ಈಗ ಮಂತ್ರಿಗಳಾಗಿರುವ ಹಲವರಿಗೆ ಸಂವಿಧಾನದ ಮೇಲಾಗಲೀ, ಪ್ರಜಾಪ್ರಭುತ್ವದೀ ಪ್ರಕ್ರಿಯೆಗಳ ಬಗೆಗಾಗಲೀ ನಂಬಿಕೆ ಇಲ್ಲದಿರುವುದನ್ನು ನಾವು ಆಗಾಗ ಗಮನಿಸುತ್ತಲೇ  ಇದ್ದೇವೆ.

ದುರ್ಬಲ ರಾಷ್ಟ್ರೀಯತೆಯ ಪರಿಕಲ್ಪನೆ

ಸಂಘ ಪರಿವಾರವು ಬ್ರಿಟಿಷ್‌ ಪೂರ್ವದ, ಮತ್ತೂ ಹಿಂದಕ್ಕೆ ಹೋಗಿ, ಇಸ್ಲಾಂ ಆಳ್ವಿಕೆಯ ಪೂರ್ವದ ಭಾರತವನ್ನು ತುಂಬ ಉದಾರವಾಗಿ ನೋಡುತ್ತದೆ. ಆ ಕಾಲದ ವೈದಿಕ ಕೇಂದ್ರಿತ ಮೌಲ್ಯಗಳನ್ನು ಆಧುನಿಕತೆಗೆ ಒಂದು ಪರಿಹಾರವೆಂದೂ ಅವು ನಂಬುತ್ತವೆ. ವೈದಿಕೇತರ ಸಂಪ್ರದಾಯಗಳಿಗೆ ಅಲ್ಲಿ ಯಾವುದೇ ಜಾಗವಿಲ್ಲ. ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರ, ಬೀರಪ್ಪ, ಸಿರಿ, ಕಲ್ಕುಡ, ಕಲ್ಲುರ್ಟಿ, ಬೊಬ್ಬರ್ಯ, ಮೊದಲಾದ ದೈವಗಳ ಬಗ್ಗೆ ಸಂಘ ಪರಿವಾರಕ್ಕೆ ತಿಳಿವಳಿಕೆಯೂ ಇಲ್ಲ, ಆದರವೂ ಇಲ್ಲ. ಕಂಸಾಳೆಯವರು, ನೀಲಗಾರರು, ಚೌಡಿಕೆಯವರು, ಗೊರವರು, ಜೋಗತಿಯವರು, ಹೆಳವರು, ದೊಂಬಿದಾಸರು ತಂಬೂರಿಯವರು, ಗೊಂದಲಿಗರು, ಕರಪಾಲದವರು, ಜೋಗಿಗಳು, ಕರ್ಬಲಾ ಪದಗಾರರು ಮೊದಲಾದವರ ಬಗೆಗೆ ಆರ್‌ ಎಸ್‌ ಎಸ್‌ ಎಂದಾದರೂ ಮಾತಾಡಿದನ್ನಾಗಲೀ ಬರೆದುದುದನ್ನಾಗಲೀ ನಾವು ಕಂಡೇ ಇಲ್ಲ. ಈ ಅರ್ಥದಲ್ಲಿ ಸಂಘದ ರಾಷ್ಟ್ರೀಯತೆಯ ಪರಿಕಲ್ಪನೆಯೇ ಬಹಳ ದುರ್ಬಲವಾದುದು.

ಇದನ್ನೂ ಓದಿhttps://peepalmedia.com/hindu-enno-anukoola-sindu/http:// ‘ಹಿಂದೂ’ ಎನ್ನೋ ಅನುಕೂಲ ಸಿಂಧು

ಸಂಘ ಪರಿವಾರದ ತೆಕ್ಕೆಗೆ ಒಪ್ಪಿಸಿದರೆ ಕರ್ನಾಟಕ ನಾಶವಾಗುತ್ತದೆ

ಕರ್ನಾಟಕವನ್ನು ಸಂಘ ಪರಿವಾರದ ತೆಕ್ಕೆಗೆ ಒಪ್ಪಿಸಿದರೆ ಕರ್ನಾಟಕ ನಾಶವಾಗುತ್ತದೆ. ಕರ್ನಾಟಕವು  ವೈವಿಧ್ಯಮಯ ಧರ್ಮ ಹಾಗೂ ಮತಗಳ ಆಗರವಾಗಿ ಎಲ್ಲದರ ನಡುವೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಇದುವರೆಗೆ ಬೆಳೆದು ಬಂದಿದೆ. ಜನಾಂಗ ದ್ವೇಷ ಇದರ ಗುಣವಲ್ಲ. ʼಸರ್ವಜನಾಂಗದ ಶಾಂತಿಯ ತೋಟʼ ಎಂದು ಕುವೆಂಪು ಕರೆದ ಈ ನಾಡಿಗೆ ಈಗ ಕೋಮುವಾದವನ್ನು ಕಲಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರಜ್ಞೆಯು ದುರ್ಬಲವಾಗುತ್ತಿದೆ. ಇದರ ಬಗ್ಗೆ ಎಲ್ಲ ಕನ್ನಡಿಗರೂ ಎಚ್ಚರದಿಂದ ಇರಬೇಕಾದ್ದು ಅವಶ್ಯಕ.

ಪುರುಷೋತ್ತಮ ಬಿಳಿಮಲೆ

ಸಂಸ್ಕೃತಿ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು