Home ಬ್ರೇಕಿಂಗ್ ಸುದ್ದಿ ಸ್ಥಳೀಯರಿಗೆ ವಿಶೇಷ ದರ್ಶನ ಸಿಗದಿದ್ದರೆ ಸಚಿವರಿಗೆ ಕಪ್ಪು ಬಾವುಟ – ಅಗಿಲೆ ಯೋಗೀಶ್

ಸ್ಥಳೀಯರಿಗೆ ವಿಶೇಷ ದರ್ಶನ ಸಿಗದಿದ್ದರೆ ಸಚಿವರಿಗೆ ಕಪ್ಪು ಬಾವುಟ – ಅಗಿಲೆ ಯೋಗೀಶ್

ಹಾಸನ : ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆ ಸ್ಥಳೀಯ ಭಕ್ತರ ಪರ ಹೋರಾಟ ತೀವ್ರಗೊಂಡಿದೆ. ಸ್ಥಳೀಯರಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸದಿದ್ದರೆ ದೇವಾಲಯದ ಬಾಗಿಲು ತೆರೆಯುವ ದಿನ ದೇವಾಲಯಕ್ಕೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಅಗಿಲೆ ಯೋಗೀಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಾಸನಾಂಬ ಉತ್ಸವವನ್ನು ರಾಜ್ಯದ ಉಸ್ತುವಾರಿ ಸಚಿವರಿಂದ ಹಿಡಿದು ಮುಖ್ಯಮಂತ್ರಿ ತನಕ ನಾಡಹಬ್ಬ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಶತಮಾನಗಳಿಂದ ಸ್ಥಳೀಯ ಜನರ ಜಾತ್ರೆ. ಹಾಸನದ ಜನರ ಭಾಗವಹಿಸುವಿಕೆಯಿಂದಲೇ ಈ ಹಬ್ಬ ಬೆಳೆಯಿತು. ಇತ್ತೀಚೆಗೆ ದೇವಾಲಯದ ಕೋಟ್ಯಂತರ ರೂ. ಆದಾಯ ಕಂಡು ಆಡಳಿತ ಸ್ಥಳೀಯರನ್ನು ಕಡೆಗಣಿಸುವ ಸ್ಥಿತಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆಯ ನೆಪದಲ್ಲಿ ದೇವಸ್ಥಾನದ ಸುತ್ತಮುತ್ತ ವಾಸಿಸುವವರು ಹಾಗೂ ವ್ಯಾಪಾರಸ್ಥರಿಗೆ ಭಾರೀ ಕಿರುಕುಳ ನೀಡಲಾಗುತ್ತಿದೆ. ತಮ್ಮ ಮನೆಗಳಿಂದ ಹೊರ ಬರಲು ಅಥವಾ ಒಳ ಹೋಗಲು ಸಹ ಪಾಸ್ ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಿಬ್ಬಂದಿ ಪಾಸ್ ತೋರಿಸಿದರೂ ಕೂಡ ಸ್ಥಳೀಯರ ಓಡಾಟಕ್ಕೆ ತಡೆ ಮಾಡುತ್ತಿದ್ದಾರೆ. ಇದು ಅನ್ಯಾಯದ ಕ್ರಮ ಎಂದು ಆರೋಪಿಸಿದರು. ಸ್ಥಳೀಯರ ಪರ ಧ್ವನಿ ಎತ್ತಬೇಕಾದ ಶಾಸಕರು ಸಂಪೂರ್ಣ ಮೌನ ವಹಿಸಿದ್ದಾರೆ. ತಮ್ಮ ಕ್ಷೇತ್ರದ ಜನ ಕಷ್ಟ ಅನುಭವಿಸುತ್ತಿದ್ದರೂ ಅವರು ಮಾತು ಆಡದಿರುವುದು ವಿಷಾದನೀಯ. ಶಾಸಕ ತಕ್ಷಣ ಕ್ರಮ ಕೈಗೊಂಡು ದೇವಸ್ಥಾನದ ಅಕ್ಕಪಕ್ಕದ ನಿವಾಸಿಗಳು ಹಾಗೂ ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು. ಜೊತೆಗೆ ಸ್ಥಳೀಯರಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಬೇಕು,” ಎಂದು ಆಗ್ರಹಿಸಿದರು. ಈ ಬೇಡಿಕೆಗಳನ್ನು ಪೂರೈಸದಿದ್ದರೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯುವ ದಿನ ಸಚಿವರ ಭೇಟಿಯ ವೇಳೆ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುತ್ತದೆ. ಇದು ಸ್ಥಳೀಯರ ಆತ್ಮಗೌರವದ ಹೋರಾಟ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಂಕರ್, ಮಂಜು, ಪಂಕಜ, ಮಮತಾ, ಸುಮಾ ಮತ್ತಿತರರು ಉಪಸ್ಥಿತರಿದ್ದರು.

You cannot copy content of this page

Exit mobile version